ನವದೆಹಲಿ: ಬಿಜೆಪಿಯ ಜೊತೆ ಗುರುತಿಸಿಕೊಂಡಿದ್ದ ನಾಲ್ವರು ಸದಸ್ಯರ ಅವಧಿ ಮುಕ್ತಾಯಗೊಳ್ಳುವುದರೊಂದಿಗೆ ಹಿರಿಯರ ಮನೆ ರಾಜ್ಯಸಭೆಯಲ್ಲಿ ಕಮಲ ಪಕ್ಷದ ಬಲ ಇನ್ನಷ್ಟು ಕ್ಷೀಣಿಸಿದೆ. ಹೀಗಾಗಿ ಸಹಜವಾಗಿಯೇ ಎನ್‌ಡಿಎ ಬಲ ಕೂಡ ಇಳಿಕೆಯಾಗಿದೆ.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ರಾಜ್ಯಸಭೆಯಲ್ಲಿ 87 ಸದಸ್ಯರನ್ನು ಹೊಂದಿದೆ. ಅದರಲ್ಲಿ ಕಾಂಗ್ರೆಸ್ 26, ಟಿಎಂಸಿ 13 ಹಾಗೂ ಆಪ್ ಮತ್ತು ಡಿಎಂಕೆ ತಲಾ 10 ಸ್ಥಾನಗಳನ್ನು ಹೊಂದಿವೆ. ಇನ್ನುಳಿದ ಸ್ಥಾನಗಳನ್ನು ಬಿಜೆಪಿ ಅಥವಾ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಳ್ಳದ ಪಕ್ಷಗಳು ಹೊಂದಿವೆ.
ಹೀಗಾಗಿ ರಾಜ್ಯಸಭೆಯಲ್ಲಿ ಯಾವುದೇ ಮಸೂದೆಯನ್ನು ಪಾಸು ಮಾಡಿಕೊಳ್ಳಲು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು 12 ಬಾಹ್ಯ ಮತಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ.ಉಪಚುನಾವಣೆ ಬಳಿಕ ಬಲ ಹೆಚ್ಚಳ:
ಈಗ ರಾಜ್ಯಸಭೆ ಸದಸ್ಯರಾಗಿದ್ದ ಸುಮಾರು 10 ಜನ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಸ್ಥಾನ ತೆರವಾಗಿದ್ದು, ಶೀಘ್ರ ಉಪಚುನಾವಣೆ ನಡೆಯಲಿವೆ. ಆಗ ಬಿಜೆಪಿ ಬಲ ಕೊಂಚ ಹೆಚ್ಚಬಹುದಾಗಿದೆ. ಇನ್ನು ಹೊಸ ನಾಮನಿರ್ದೇಶಿತ ಸದಸ್ಯರು ನೇಮಕವಾದರೆ ಅವರು ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಹೆಚ್ಚು.