ಮೋದಿಗೆ ತಲೆಬಾಗಿದ ಸೇನೆ : ಮ.ಪ್ರ. ಡಿಸಿಎಂ ಕೀಳುನುಡಿ

Follow Us

ಸಾರಾಂಶ

ಸೈನಿಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲೆಬಾಗಿದ್ದಾರೆ’ ಎಂದು ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್‌ ದೇವಡಾ ವಿವಾದಿತ ಹೇಳಿಕೆ ನೀಡಿದ್ದಾರೆ.

ನವದೆಹಲಿ: ಕರ್ನಲ್‌ ಸೋಫಿಯಾ ಖುರೇಷಿ ಅವರನ್ನು ಪಾಕ್‌ ಉಗ್ರರ ಸಹೋದರಿ ಎಂದು ಹೇಳಿ ಸಚಿವ ಕುನ್ವರ್‌ ವಿಜಯ್‌ ಶಾ ವಿದಾದ ಸೃಷ್ಟಿಸಿದ ಬೆನ್ನಲ್ಲೇ, ‘ದೇಶ, ಸೇನೆ ಮತ್ತು ಸೈನಿಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲೆಬಾಗಿದ್ದಾರೆ’ ಎಂದು ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್‌ ದೇವಡಾ ವಿವಾದಿತ ಹೇಳಿಕೆ ನೀಡಿದ್ದಾರೆ.

ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಅವರ ವಜಾಕ್ಕೆ ಕಾಂಗ್ರೆಸ್‌ ಸೇರಿ ವಿಪಕ್ಷಗಳು ಒತ್ತಾಯಿಸಿವೆ.

ಶುಕ್ರವಾರ ಮಧ್ಯಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದೇವಡಾ, ‘ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ್ದಕ್ಕಾಗಿ ಇಡೀ ದೇಶ, ಸೇನೆ ಮತ್ತು ಯೋಧರು ಅವರ ಕಾಲಿಗೆ ತಲೆಬಾಗಿದ್ದಾರೆ. ಅವರಿಗೆ ನಮ್ಮದೊಂದು ಚಪ್ಪಾಳೆ ಇರಲಿ’ ಎಂದಿದ್ದಾರೆ.

ಕಾಂಗ್ರೆಸ್‌ ಖಂಡನೆ:

ದೇವಡಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌, ‘ಬಿಜೆಪಿಗರಿಂದ ನಿರಂತರವಾಗಿ ಸೇನೆಗೆ ಅವಮಾನವಾಗುತ್ತಿರುವುದು ನಾಚಿಕೆಗೇಡು ಮತ್ತು ದುರದೃಷ್ಟಕರ. ಮೊದಲು ಸಚಿವರೊಬ್ಬರು ಮಹಿಳಾ ಯೋಧರ ಬಗ್ಗೆ ಅಸಭ್ಯ ಹೇಳಿಕೆ ನೀಡದರು. ಈಗ ಸಮಸ್ತ ಸೇನೆಯ ಅವಮಾನವಾಗಿದೆ. ಹೀಗೆ ಮಾಡುವುದರಿಂದ ಬಿಜೆಪಿ ಸೇನೆಗೆ ಮತ್ತು ಜನರಿಗೆ ಯಾವ ಸಂದೇಶ ಕೊಡಬಯಸಿದೆ’ ಎಂದು ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವಡಾ ಸ್ಪಷ್ಟನೆ:

ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಆ ಕುರಿತು ಸ್ಪಷ್ಟನೆ ನೀಡಿರುವ ದೇವಡಾ, ‘ಆಷರೇಷನ್‌ ಸಿಂದೂರದ ವೇಳೆ ಸೇನೆಯ ಶೌರ್ಯ ಕಂಡು ಜನ ಅವರಿಗೆ ನಮಿಸುತ್ತಿದ್ದಾರೆ ಎಂಬ ಅರ್ಥದಲ್ಲಿ ನಾನು ಹೇಳಿದ್ದನ್ನು ವಿಪಕ್ಷಗಳು ತಿರುಚಿವೆ’ ಎಂದು ಹೇಳಿದ್ದಾರೆ.

ವಿವಾದಿತ ಹೇಳಿಕೆ ಸುತ್ತ..

- ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ

- ಆಪರೇಶನ್ ಸಿಂದೂರದ ಮೂಲಕ ಅವರು ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ್ದಾರೆ

- ಈ ಯಶಸ್ಸಿನ ಬಳಿಕ ಇಡೀ ದೇಶ, ಸೇನೆ, ಯೋಧರು ಮೋದಿಗೆ ತಲೆಬಾಗಿದ್ದಾರೆ

- ಮೋದಿ ಅವರಿಗೆ ನಮ್ಮದೊಂದು ಚಪ್ಪಾಳೆ ಇರಲಿ: ಮ.ಪ್ರ. ಡಿಸಿಎಂ ದೇವಡಾ

- ದೇಶದ ವೀರಯೋಧರ ಅವಮಾನಿಸಿದ ದೇವಡಾ ವಜಾ ಮಾಡಿ: ಕಾಂಗ್ರೆಸ್‌

- ನನ್ನ ಹೇಳಿಕೆ ತಿರುಚಲಾಗಿದೆ, ನಾನು ಆ ಅರ್ಥದಲ್ಲಿ ಹೇಳಿಲ್ಲ: ದೇವಡಾ ಸ್ಪಷ್ಟನೆ

Read more Articles on