ಈಗ ಟ್ರೇಲರ್‌ ಅಷ್ಟೆ, ಮುಂದೆ ಮಾರಿಹಬ್ಬ : ರಾಜನಾಥ್‌ ಕಿಡಿ

Sujatha NRPublished : May 17, 2025 5:41 AM

ಪಾಕಿಸ್ತಾನದ ವಿರುದ್ಧ ಮತ್ತೆ ಗುಡುಗಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್‌, ‘ಇದುವರೆಗೆ ನಾವು ತೋರಿಸಿದ್ದು ಟ್ರೇಲರ್‌ ಮಾತ್ರ, ಪಿಕ್ಚರ್‌ ಇನ್ನೂ ಬಾಕಿ ಇದೆ’ ಎಂದಿದ್ದಾರೆ,

  ಭುಜ್‌ :  ಪಾಕಿಸ್ತಾನದ ವಿರುದ್ಧ ಮತ್ತೆ ಗುಡುಗಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್‌, ‘ಇದುವರೆಗೆ ನಾವು ತೋರಿಸಿದ್ದು ಟ್ರೇಲರ್‌ ಮಾತ್ರ, ಪಿಕ್ಚರ್‌ ಇನ್ನೂ ಬಾಕಿ ಇದೆ’ ಎಂದಿದ್ದಾರೆ, ಅಲ್ಲದೆ, ‘ವಿದೇಶಗಳಿಂದ ಸಿಕ್ಕಿದ ಸಾಲದ ಹಣವನ್ನು ಪಾಕಿಸ್ತಾನ ಉಗ್ರರ ಮೂಲಸೌಕರ್ಯಕ್ಕೆ ಬಳಸುವ ಸಾಧ್ಯತೆ ಇರುವುದರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿಯು, ಪಾಕಿಸ್ತಾನಕ್ಕೆ 8500 ಕೋಟಿ ರು. ನೆರವು ನೀಡುವ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಮತ್ತೆ ಒತ್ತಾಯಿಸಿದ್ದಾರೆ. ಇದೇ ವೇಳೆ, ಉಗ್ರ ಮೌಲಾನಾ ಮಸೂದ್‌ ಅಜರ್‌ನ ಹತ ಕುಟುಂಬಕ್ಕೆ ಪಾಕ್‌ ಸರ್ಕಾರ 14 ಕೋಟಿ ರು. ಪರಿಹಾರ ನೀಡಿದ್ದಕ್ಕೆ ಕಿಡಿಕಾರಿದ್ದಾರೆ.

ಇತ್ತೀಚಿನ ಪಾಕ್‌ ವಿರುದ್ಧದ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗುಜರಾತ್‌ನ ಭುಜ್‌ಗೆ ಶುಕ್ರವಾರ ಭೇಟಿ ನೀಡಿದ್ದ ಸಿಂಗ್‌, ಅಲ್ಲಿ ಯೋಧರ ಪರಾಕ್ರಮವನ್ನು ಕೊಂಡಾಡಿ ಮಾತನಾಡಿದರು. ಇದೇ ವೇಳೆ ಪಾಕ್‌ ಮೇಲಿನ ದಾಳಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ ಬಳಕೆಯನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ ರಾಜ್‌ನಾಥ್‌, ನಮ್ಮ ಶಸ್ತ್ರಾಸ್ತ್ರಗಳು ಪಾಕಿಸ್ತಾನಕ್ಕೆ ರಾತ್ರಿ ಹೊತ್ತಿನಲ್ಲೂ ಬೆಳಕು ತೋರಿಸಿದವು ಎಂದು ಹೇಳಿದರು.

ಇದೇ ವೇಳೆ ಪಾಕಿಸ್ತಾನಕ್ಕೆ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿದ ಸಿಂಗ್‌, ಆಪರೇಷನ್‌ ಸಿಂದೂರ ಇನ್ನೂ ಮುಗಿದಿಲ್ಲ. ನಾವು ಪಾಕಿಸ್ತಾನವನ್ನು ನಿಗಾ ಅವಧಿಯಲ್ಲಿ ಇಟ್ಟಿದ್ದೇವೆ. ಈ ಅವಧಿಯಲ್ಲಿ ಅವರು ಸುಧಾರಿಸಿದರೆ ಒಳಿತು. ಇಲ್ಲದೇ ಹೋದಲ್ಲಿ ಅವರ ವಿರುದ್ಧ ಕಠಿಣಾತಿಕಠಿಣ ಕ್ರಮ ಖಚಿತ. ಇದುವರೆಗೆ ನಾವು ತೋರಿಸಿದ್ದು ಟ್ರೇಲರ್‌ ಮಾತ್ರ, ಪಿಕ್ಚರ್‌ ಇನ್ನೂ ಬಾಕಿ ಇದೆ. ಅಗತ್ಯ ಬಿದ್ದರೆ ಉಗ್ರರ ಮೇಲೆ ದಾಳಿ ಮಾಡುವುದು ಇನ್ನು ಮುಂದೆ ಸಾಮಾನ್ಯ ವಿಷಯವಾಗಿರಲಿದೆ ಎಂದು ಸ್ಪಷ್ಟಪಡಿಸಿದರು.

ತೆರಿಗೆ ಹಣ ಉಗ್ರರಿಗೆ:

ಇದೇ ವೇಳೆ ಭಾರತದ ದಾಳಿಗೆ ಬಲಿಯಾದ ಜೈಷ್‌ ಉಗ್ರ ಮಸೂದ್‌ ಅಜರ್‌ ಕುಟುಂಬದ ಸದಸ್ಯರಿಗೆ ಪಾಕ್‌ ಸರ್ಕಾರ ತಲಾ 1 ಕೋಟಿ ರು. ಪರಿಹಾರ ನೀಡಲು ಮುಂದಾಗಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ರಾಜ್‌ನಾಥ್‌, ಜನರ ತೆರಿಗೆ ಹಣವನ್ನು ಸರ್ಕಾರ ಉಗ್ರರಿಗೆ ನೀಡಲು ಮುಂದಾಗಿದೆ. ಸರ್ಕಾರದ ಹಣವನ್ನು ಬಳಸಿ ಉಗ್ರರ ತರಬೇತಿ ಕೇಂದ್ರ ಮರು ನಿರ್ಮಾಣಕ್ಕೆ ಮುಂದಾಗಿದೆ. ಹೀಗಾಗಿ ಉಗ್ರ ಪೋಷಕ ಪಾಕಿಸ್ತಾನಕ್ಕೆ ನೀಡಲುದ್ದೇಶಿರುವ 8500 ಕೋಟಿ ರು. ಹಣಕಾಸು ನೆರವಿನ ಕುರಿತು ಐಎಂಎಫ್‌ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಪಾಕಿಸ್ತಾನಕ್ಕೆ ಈ ಸಂದರ್ಭದಲ್ಲಿ ಹಣಕಾಸು ನೆರವು ನೀಡುವುದು ಭಯೋತ್ಪಾದನೆಗೆ ಹಣ ನೀಡುವುದಕ್ಕೆ ಸಮ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಐಎಂಎಫ್‌ ಪಾಕಿಸ್ತಾನಕ್ಕೆ ನೀಡಲುದ್ದೇಶಿಸಿರುವ ಹಣಕಾಸು ನೆರವಿನ ಕುರಿತು ಮರುಪರಿಶೀಲಿಸಬೇಕು. ಭವಿಷ್ಯದಲ್ಲೂ ಯಾವುದೇ ಹಣಕಾಸು ನೆರವು ಕೊಡುವುದರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Read more Articles on