ಸೇನಾಪಡೆ ಮುಖ್ಯಸ್ಥರಿಂದ ಆಪರೇಷನ್‌ ಸಿಂದೂರ ವೀಕ್ಷಣೆ ಫೋಟೋ ಬಿಡುಗಡೆ

KannadaprabhaNewsNetwork |  
Published : May 27, 2025, 12:40 AM ISTUpdated : May 27, 2025, 04:33 AM IST
ಆಪರೇಷನ್‌ ಸಿಂದೂರ  | Kannada Prabha

ಸಾರಾಂಶ

ಮೇ 6-7ರ ರಾತ್ರಿ ಆಪರೇಷನ್‌ ಸಿಂದೂರ ವೇಳೆ ಸೇನೆಯ 3 ಪಡೆಗಳ ಮುಖ್ಯಸ್ಥರು ಒಂದೇ ಕಡೆ ಇದ್ದು, ಕಾರ್ಯಾಚರಣೆಯನ್ನು ಕಂಪ್ಯೂಟರ್‌ಗಳ ಮೂಲಕ ವೀಕ್ಷಿಸುತ್ತಿರುವ ಫೋಟೋಗಳು ಬಿಡುಗಡೆಯಾಗಿವೆ.

ನವದೆಹಲಿ: ಮೇ 6-7ರ ರಾತ್ರಿ ಆಪರೇಷನ್‌ ಸಿಂದೂರ ವೇಳೆ ಸೇನೆಯ 3 ಪಡೆಗಳ ಮುಖ್ಯಸ್ಥರು ಒಂದೇ ಕಡೆ ಇದ್ದು, ಕಾರ್ಯಾಚರಣೆಯನ್ನು ಕಂಪ್ಯೂಟರ್‌ಗಳ ಮೂಲಕ ವೀಕ್ಷಿಸುತ್ತಿರುವ ಫೋಟೋಗಳು ಬಿಡುಗಡೆಯಾಗಿವೆ. ಸೇನೆ ಮುಖ್ಯಸ್ಥ ಜ। ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಏರ್‌ ಮಾರ್ಷಲ್‌ ಎ.ಪಿ.ಸಿಂಗ್‌ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ ಅವರು ಆಪರೇಷನ್‌ ಸಿಂದೂರವನ್ನು ಪರಿಶೀಲಿಸುತ್ತಿರುವ ಫೋಟೋಗಳು ಬಿಡುಗಡೆಯಾಗಿವೆ.

ಸ್ಪೈ ಜ್ಯೋತಿಗೆ ಪಾಕ್‌ನಲ್ಲಿ 6 ಸಶಸ್ತ್ರ ವ್ಯಕ್ತಿಗಳಿಂದ ಭಾರೀ ಭದ್ರತೆ ಬೆಳಕಿಗೆ

ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಜ್ಯೋತಿ ಮಲ್ಹೋತ್ರಾಗೆ ಪಾಕಿಸ್ತಾನದಲ್ಲಿ 6 ಗನ್‌ಮ್ಯಾನ್‌ಗಳಿಂದ ಭಾರೀ ಭದ್ರತೆ ನೀಡಲಾಗುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಸ್ಕಾಟ್ಲೆಂಡ್‌ನ ಯೂಟ್ಯೂಬರ್ ಕ್ಯಾಲಮ್ ಮಿಲ್ ಅವರ ವಿಡಿಯೋದಿಂದ ಈ ವಿಷಯ ಬಹಿರಂಗವಾಗಿದೆ. 

‘ಕ್ಯಾಲಮ್ ಅಬ್ರಾಡ್’ ಹೆಸರಿನ ಚಾನೆಲ್‌ನಲ್ಲಿ ಮಿಲ್ ತಮ್ಮ ಪಾಕಿಸ್ತಾನ ಪ್ರವಾಸದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಲಾಹೋರ್‌ನ ಅನಾರ್ಕಲಿ ಬಜಾರ್‌ನಲ್ಲಿ ಕ್ಯಾಲಮ್ ಮಿಲ್ ಸುತ್ತಾಡುತ್ತಿದ್ದಾಗ ಜ್ಯೋತಿ ಎದುರಾಗಿದ್ದಾಳೆ. ಈ ವೇಳೆ ಇಬ್ಬರ ನಡುವೆ ಸಣ್ಣ ಮಾತುಕತೆ ನಡೆದಿದೆ. ವಿಡಿಯೋದಲ್ಲಿ ಜ್ಯೋತಿಯನ್ನು 6 ಮಂದಿ ಶಸ್ತ್ರಸಜ್ಜಿತ ವ್ಯಕ್ತಿಗಳು ಸುತ್ತುವರೆದಿರುವುದನ್ನು ಕಾಣಬಹುದು.

ಠೇವಣಿ ಮೇಲಿನ ವಿಮೆ ಮೊತ್ತ ₹5 ಲಕ್ಷದಿಂದ ₹ 10 ಲಕ್ಷಕ್ಕೆ ?

ನವದೆಹಲಿ: ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳಲ್ಲಿ ಇರಿಸಿದ ಠೇವಣಿಗೆ ಇರುವ ವಿಮೆ ಮೊತ್ತವನ್ನು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.ಪ್ರಸ್ತುತ ಠೇವಣಿ ಮೇಲಿನ ವಿಮೆ ಮೊತ್ತವು 5 ಲಕ್ಷ ರು. ಇದ್ದು, ಇದು ಬ್ಯಾಂಕುಗಳು ದಿವಾಳಿಯಾದರೆ ಅಥವಾ ಇನ್ನಿತರ ಸಮಸ್ಯೆಗಳಿಗೆ ತುತ್ತಾದರೆ, ಇಷ್ಟು ಮೊತ್ತವು ಠೇವಣಿದಾರರಿಗೆ ಸಿಗುತ್ತದೆ. ಈ ಮೊತ್ತವನ್ನು 2020ರ ಫೆ.2ರಂದು 1 ಲಕ್ಷ ರು.ನಿಂದ 5 ಲಕ್ಷ ರು.ಗೆ ಏರಿಸಲಾಗಿತ್ತು. 

ಈಗ ಮತ್ತೆ ವಿಮೆ ಮೊತ್ತ ಏರಿಸುವ ಚಿಂತನೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇದರಿಂದಾಗಿ ಹಿರಿಯ ನಾಗರಿಕರು ಸೇರಿದಂತೆ ಅನೇಕರಿಗೆ ಅನುಕೂಲವಾಗಲಿದೆ.ಠೇವಣಿ ಮೇಲಿನ ವಿಮೆಯು 1962ರಿಂದ 2020ರವರೆಗೆ 5 ಬಾರಿ ಏರಿಸಲಾಗಿದೆ. 1962ರಲ್ಲಿ 1,500 ರು., 1976ರಲ್ಲಿ 20,000 ರು., 1980ರಲ್ಲಿ 30,000 ರು.,1993ರಲ್ಲಿ 1 ಲಕ್ಷ ರು., ಮತ್ತು 2020ರಲ್ಲಿ 5 ಲಕ್ಷ ರು.ವರೆಗೆ ಏರಿಕೆ ಮಾಡಲಾಗಿತ್ತು.

ಮೋದಿ ಸರ್ಕಾರಕ್ಕೆ 11 ವರ್ಷ ಪೂರ್ಣ: ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಕಿಡಿಕಿಡಿ

ನವದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ರ ಸೋಮವಾರಕ್ಕೆ 11 ವರ್ಷ ಪೂರ್ಣಗೊಂಡಿದೆ. 2014ರ ಮೇ 26ರಂದು ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ಮೋದಿ ಅವರು ಸತತ 11 ವರ್ಷ ದೇಶವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿಯು 543 ಕ್ಷೇತ್ರಗಳಲ್ಲಿ 282 ಸೀಟುಗಳ ಬಹುಮತವನ್ನು ಬಾಚಿಕೊಂಡು ಯುಪಿಎ ಅಧಿಕಾರ ಅಂತ್ಯಗೊಳಿಸಿತ್ತು. ಬಳಿಕ 2019ರಲ್ಲೂ 303 ಸೀಟು ಗೆದ್ದು ಅಧಿಕಾರಕ್ಕೆ ಬಂದಿತ್ತು. 2024ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯ ಮೈತ್ರಿಕೂಟ 293 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಮರಳಿತ್ತು. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ 11 ವರ್ಷ ಪೂರೈಸಿರುವುದು ಅಘೋಷಿತ ತುರ್ತು ಸ್ಥಿತಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ‘ಪ್ರಧಾನಿ ಮೋದಿ ಅವರ ಅಚ್ಚೇದಿನ್‌ ಒಂದು ದುಃಸ್ವಪ್ನವಾಗಿ ಪರಿವರ್ತನೆಗೊಂಡಿದೆ ಎಂದು ಕಿಡಿಕಾರಿದ್ದಾರೆ.

ದಾಳಿಯ 30 ನಿಮಿಷದ ಬಳಿಕ ಪಾಕ್‌ಗೆ ಮಾಹಿತಿ: ಜೈಶಂಕರ್‌

ನವದೆಹಲಿ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರನೆಲೆ ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್ ಪ್ರಾರಂಭಿಸಿದ 30 ನಿಮಿಷಗಳಲ್ಲಿ ಪಾಕಿಸ್ತಾನಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಭಾರತೀಯ ಸೇನೆಯ ಡಿಜಿಎಂಒ, ಪಾಕ್‌ನ ಡಿಜಿಎಂಒ ಜೊತೆ ಈ ಮಾಹಿತಿ ಹಂಚಿಕೊಂಡಿದ್ದರು ಎಂದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂಸದೀಯ ಸಮಾಲೋಚನಾ ಸಮಿತಿಗೆ ತಿಳಿಸಿದ್ದಾರೆ.

ಅಲ್ಲದೆ, ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಪಾಕಿಸ್ತಾನದ ಕೋರಿಕೆಯ ಮೇರೆಗೆ ದ್ವಿಪಕ್ಷೀಯವಾಗಿ ಕದನ ವಿರಾಮದ ನಿರ್ಣಯ ಕೈಗೊಳ್ಳಲಾಗಿತ್ತು. ಇದರಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಪರೇಷನ್ ಸಿಂದೂರ್‌ ಆರಂಭಕ್ಕೂ ಮೊದಲೇ ಜೈಶಂಕರ್ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದರು ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಆರೋಪಿಸಿದ ಬೆನ್ನಲ್ಲೆ ಈ ಸ್ಪಷ್ಟೀಕರಣ ಬಂದಿದೆ.ಅಮೆರಿಕ ಮಧ್ಯಸ್ಥಿಕೆ ಇಲ್ಲ:

ಜರ್ಮನ್ ಪತ್ರಿಕೆ ಫ್ರಾಂಕ್‌ಫರ್ಟರ್ ಆಲ್ಗೆಮೈನ್ ಜೈಟಂಗ್‌ಗೆ ನೀಡಿದ ಸಂದರ್ಶನದಲ್ಲಿ ಡಾ. ಜೈಶಂಕರ್ ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಅಮೆರಿಕದ ಮಧ್ಯಸ್ಥಿಕೆಯನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕಾಗಿ ಜಗತ್ತು ಅಮೆರಿಕಕ್ಕೆ ಧನ್ಯವಾದ ಹೇಳಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತೀಯ ಪಡೆಗಳು ಪಾಕಿಸ್ತಾನವನ್ನು ತಲುಪಿ, ಅವರೇ ತಾವು ಯುದ್ಧ ನಿಲ್ಲಿಸಲು ಸಿದ್ಧರಿದ್ದೇವೆ ಎನ್ನುವಂತೆ ಮಾಡಿದವು. ಹಾಗಾಗಿ ನಾನು ಭಾರತೀಯ ಸೇನೆಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ’ ಎಂದರು. ಈ ಮೂಲಕ ಮಾರ್ಮಿಕವಾಗಿ ಅಮೆರಿಕದ ಮಧ್ಯಸ್ಥಿಕೆ ವಿಚಾರವನ್ನು ತಳ್ಳಿಹಾಕಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ