5 ದಶಕಗಳ ಬಳಿಕ ಮತ್ತೆ ಚಂದ್ರನ ಕಡೆಗೆ ಮಾನವ!

KannadaprabhaNewsNetwork |  
Published : Apr 01, 2026, 03:00 AM ISTUpdated : Apr 01, 2026, 04:35 AM IST
America

ಸಾರಾಂಶ

5 ದಶಕಗಳ ಹಿಂದೆ ಮೊದಲ ಮಾನವ ಸಹಿತ ಚಂದ್ರಯಾನದ ಐತಿಹಾಸಿಕ ಸಾಧನೆ ಬಳಿಕ, ಬಹುತೇಕ ಸ್ಥಗಿತಗೊಂಡಿದ್ದ ಚಂದ್ರನ ಮೇಲೆ ಕಾಲಿಡುವ ಜಗತ್ತಿನ ಕನಸಿಗೆ ಅಮೆರಿಕ ಮತ್ತೆ ನೀರೆಯಲು ಹೊರಟಿದೆ.   ಓರಯಾನ್‌ ನೌಕೆ ಚಂದ್ರನತ್ತ ಪ್ರಯಾಣ ಬೆಳೆಸಲು ಸಜ್ಜಾಗಿದೆ.  

 ವಾಷಿಂಗ್ಟನ್‌: 5 ದಶಕಗಳ ಹಿಂದೆ ಮೊದಲ ಮಾನವ ಸಹಿತ ಚಂದ್ರಯಾನದ ಐತಿಹಾಸಿಕ ಸಾಧನೆ ಬಳಿಕ, ಬಹುತೇಕ ಸ್ಥಗಿತಗೊಂಡಿದ್ದ ಚಂದ್ರನ ಮೇಲೆ ಕಾಲಿಡುವ ಜಗತ್ತಿನ ಕನಸಿಗೆ ಅಮೆರಿಕ ಮತ್ತೆ ನೀರೆಯಲು ಹೊರಟಿದೆ. ನಾಲ್ವರು ಗಗನಯಾನಿಗಳನ್ನು ಹೊತ್ತ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ‘ಆರ್ಟೆಮಿಸ್‌ 2’ ಯೋಜನೆಯ ಭಾಗವಾಗಿ ಓರಯಾನ್‌ ನೌಕೆ ಚಂದ್ರನತ್ತ ಪ್ರಯಾಣ ಬೆಳೆಸಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತೀಯ ಕಾಲಮಾನ ಗುರುವಾರ ಬೆಳಗಿನ ಜಾವ 3.24ಕ್ಕೆ ನೌಕೆ ಚಂದ್ರನತ್ತ ಪ್ರಯಾಣ ಬೆಳೆಸಲಿದೆ.

ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಉಡಾವಣೆಯಾಗಲಿದೆ. ಒಂದು ವೇಳೆ ಹವಾಮಾನದಲ್ಲಿ ವ್ಯತ್ಯಯ ಕಂಡುಬಂದರೆ ಬಳಿಕ ಎರಡು ಗಂಟೆಗಳ ಅವಧಿಯವರೆಗೂ ವಿಜ್ಞಾನಿಗಳು ಕಾದು ನೋಡಲಿದ್ದಾರೆ. ಇಲ್ಲದೇ ಹೋದಲ್ಲಿ ಏ.6ರಂದು ಮತ್ತೆ ಉಡ್ಡಯನಕ್ಕೆ ಪ್ರಯತ್ನಿಸಲಿದ್ದಾರೆ.

ಕಳೆದ 50 ವರ್ಷಗಳ ಈಚಿಗೆ ಮಾನವ ಭೂಮಿಯ ಕಕ್ಷೆಯನ್ನು ಬಿಟ್ಟು ಹೋದ ಇತಿಹಾಸವಿಲ್ಲ. ಹೀಗಾಗಿ ಈ ಉಡ್ಡಯನ ಸಾಕಷ್ಟು ಕುತೂಹಲ ಕೆರಳಿಸಿದೆ. ಭವಿಷ್ಯದಲ್ಲಿ ಚಂದ್ರನ ಮೇಲೆ ಮತ್ತೆ ಮಾನವರನ್ನು ಇಳಿಸುವ ಉದ್ದೇಶ ಹೊಂದಿರುವ ನಾಸಾ ಅದರ ಭಾಗವಾಗಿ ಇದೀಗ ನಾಲ್ವರನ್ನು ನೌಕೆಯ ಮೂಲಕ ಕಳುಹಿಸಿಕೊಡುತ್ತಿದೆ. 10 ದಿನಗಳ ಯಾನದ ಅವಧಿಯಲ್ಲಿ ಅವರು ಚಂದ್ರನನ್ನು ಒಂದು ಸುತ್ತು ಹಾಕಿ ಬರಲಿದ್ದಾರೆ. ಜೊತೆಗೆ ಮಾನವವಾಸಕ್ಕೆ ಓರಿಯನ್‌ ಸೂಕ್ತವೇ ಎಂಬ ಪರೀಕ್ಷೆ ನಡೆಸಲಿದ್ದಾರೆ. ಜೊತೆಗೆ ದಿಕ್ಸೂಚಿ ಸೇರಿದಂತೆ ವಿವಿಧ ಯಂತ್ರೋಪಕರಣಗಳ ಪರೀಕ್ಷೆಯೂ ನಡೆಯುವುದು. ಈ ಯಾನಿಗಳು ಮರಳಿಬಂದ ಬಳಿಕ ಅವರ ಮೇಲಾಗಿರುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನು ತಿಳಿಯುವ ಪರೀಕ್ಷೆಯೂ ನಡೆಯಲಿದೆ.

ಏನೇನಾಗುತ್ತದೆ?:

ಉಡಾವಣೆಯಾದ ಮೊದಲೆರಡು ದಿನ ನೌಕೆಯು ಭೂಕಕ್ಷೆಯಲ್ಲೇ ಇರಲಿದ್ದು, ಆ ವೇಳೆ ಒಳಗಿರುವವರು ಅದರ ಸುರಕ್ಷತೆ, ಸಂಚರಣೆ, ಸಂವಹನ ಇತ್ಯಾದಿಗಳ ಕೂಲಂಕಷ ಟೆಸ್ಟ್‌ ನಡೆಸುತ್ತಾರೆ. ಬಳಿಕ ನೌಕೆಯು ಚಂದಿರನತ್ತ ಹೊರಟು, ಈವರೆಗೆ ಯಾರೂ ಹೋಗಿರದ ಎತ್ತರವನ್ನು ತಲುಪುತ್ತದೆ. ಅಲ್ಲಿಂದ ಶಶಾಂಕನ (ಚಂದ್ರ) ಮೇಲ್ಮೈ, ಅಲ್ಲಿಂದ ಸಂಗ್ರಹಿಸಿದ ವಸ್ತುಗಳ ಅಧ್ಯಯನ ಮಾಡಲಾಗುವುದು. ಮರಳುವ ಹಾದಿಯಲ್ಲೂ ಅನೇಕ ಪರೀಕ್ಷೆಗಳು ಜಾರಿಯಲ್ಲಿರುತ್ತವೆ.

ಕೊನೆಗಿದು ಗಂಟೆಗೆ 40,233 ಕಿ.ಮೀ. ವೇಗದಲ್ಲಿ ಬಂದು ಪೆಸಿಫಿಕ್‌ ಸಾಗರಕ್ಕಪ್ಪಳಿಸುತ್ತದೆ.

2022ರಲ್ಲಿ ಆರ್ಟಿಮಿಸ್‌-1ರ ಭಾಗವಾಗಿ ಇದೇ ನೌಕೆಯನ್ನು ಮಾನವರಹಿತವಾಗಿ ಚಂದ್ರನತ್ತ ಕಳಿಸಲಾಗಿತ್ತು. 2027ರಲ್ಲಿ ಬಾಹ್ಯಾಕಾಶ ಆರ್ಟಿಮಿಸ್‌-3ರಡಿ ಯಾನಿಗಳನ್ನು ಚಂದ್ರನ ಮೇಲಿಳಿಸಿ, ಮರುವರ್ಷದ 4ನೇ ಹಂತದ ಯೋಜನೆಯಲ್ಲಿ ಚಂದಿರನ ದಕ್ಷಿಣ ಧ್ರುವದಲ್ಲಿಳಿದು, ಲ್ಯಾಂಡರ್‌ ಜತೆ ಡಾಕ್‌ ಕೂಡ ಮಾಡಲಾಗುವುದು.

ಏನಿದು ಯೋಜನೆ?

- ‘ಆರ್ಟೆಮಿಸ್‌ 2’ ಯೋಜನೆ ಭಾಗವಾಗಿ ಓರಯಾನ್‌ ನೌಕೆ ಚಂದ್ರನತ್ತ ಸಾಗಲು ಸಜ್ಜು

- ಭಾರತೀಯ ಕಾಲಮಾನ ಗುರುವಾರ ನಸುಕಿನ 3.24ಕ್ಕೆ ನೌಕೆ ಚಂದ್ರನತ್ತ ಪ್ರಯಾಣ

- ಇದು 10 ದಿನಗಳ ಯಾನ, ಆದರೆ ಈ ಬಾರಿ ಚಂದ್ರನ ಮೇಲೆ ಯಾರೂ ಇಳಿಯಲ್ಲ

- ಈವರೆಗೆ ಯಾರೂ ಹೋಗಿರದ ಎತ್ತರ ತಲುಪಿ ಚಂದ್ರನ ಮೇಲ್ಮೈ ಸೇರಿ ವಿವಿಧ ಅಧ್ಯಯನ

- ಉಡಾವಣೆ ವೇಳೆ ಹವಾಮಾನ ವೈಪರೀತ್ಯವಾದರೆ ಏ.6ಕ್ಕೆ ಮತ್ತೆ ಉಡ್ಡಯನಕ್ಕೆ ಯತ್ನ

=-==

ಗಗನಯಾತ್ರಿಗಳು

ರೈಡ್ ವೈಸ್ ಮನ್

ವಿಕ್ಟರ್ ಗ್ಲೋವರ್

ಕ್ರಿಸ್ಟಿನಾ ಕೊಚ್

ಜೆರೆಮಿ ಹ್ಯಾನ್ ಸನ್

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ ಯುದ್ಧ ಮಧ್ಯದಲ್ಲೇ ನಿಲ್ಲಿಸಲು ಟ್ರಂಪ್‌ ನಿರ್ಧಾರ?
ಮಹಿಳೆಯರಿಗೆ ₹3000 ಸೇರಿಅಸ್ಸಾಂ ಬಿಜೆಪಿ ಕೆಲ ಗ್ಯಾರಂಟಿ!