ಕೇಂಬ್ರಿಡ್ಜ್: ಮಾನವರಿಗೆ ಕಷ್ಟಸಾಧ್ಯವಾದ ಕೆಲಸಗಳನ್ನೆಲ್ಲ ಮಾಡಲು ಕಲಿತಿರುವ ಎಐ ಇದೀಗ ಭವಿಷ್ಯದ ಸಾಂಕ್ರಾಮಿಕಗಳನ್ನು ನಿವಾರಿಸಲು ಲಸಿಕೆ ಕಂಡುಹಿಡಿಯಲು ಮುಂದಾಗಿದೆ. ಈಗಾಗಲೇ ಕೃತಕ ಬುದ್ಧಿಮತ್ತೆಯನ್ನು ಬಳಸಿ ಕೊರೋನಾದ ಹಲವು ಮಾದರಿಗಳಿಗೆ ವ್ಯಾಕ್ಸಿನ್ ತಯಾರಿಸಲಾಗಿದೆ ಎಂದು ಕೇಂಬ್ರಿಡ್ಜ್ ವಿವಿಯ ಸಂಶೋಧಕರು ಹೇಳಿದ್ದಾರೆ.
ವ್ಯಾಕ್ಸಿನ್‌ಗಳಲ್ಲಿ ಪ್ರಮುಖವಾದ ಆ್ಯಂಟಿಜೆನ್ (ಪ್ರತಿಜನಕ) ಅನ್ನು ಈಗಾಗಲೇ ಎಐ ಖುದ್ದಾಗಿ ಸೃಷ್ಟಿಸಿದ್ದು, ಮೊದಲ ಬಾರಿಗೆ ಮಾನವರ ಮೇಲೆ ಅದರ ಪ್ರಯೋಗ ಮಾಡಲಾಗಿದೆ. ಮೊದಲ ಹಂತದಲ್ಲಿ 39 ಹಾಗೂ 2ನೇ ಹಂತದಲ್ಲಿ 200 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಲಸಿಕೆಯನ್ನು ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಹಾಗೂ ಪ್ರಾಣಿಗಳಲ್ಲಿ ಕಾಣಿಸಿಕೊಂಡು ಮಾನವರಿಗೆ ಹರಡುವ ಕೊರೋನಾ ವೈರಸ್‌ಗಳ ವಿರುದ್ಧ ಕೆಲಸ ಮಾಡುವಂತೆ ತಯಾರಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಇನ್‌ಫ್ಲುಯೆಂಜಾ ಮತ್ತು ಎಬೋಲಾಗಳಿಗೂ ಲಸಿಕೆಯನ್ನು ಎಐ ಬಳಸಿ ಕಂಡುಹಿಡಿಯಲಾಗುತ್ತಿದೆ.ಲಸಿಕೆಗಳ ವಿಶೇಷತೆಯೆಂದರೆ, ಇವುಗಳು ರೋಗ ಬಂದ ನಂತರ ಅದಕ್ಕೆ ಮದ್ದಾಗಿ ಕೆಲಸ ಮಾಡುವ ಬದಲು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಕಾಯಿಲೆಯೇ ಬರದಂತೆ ತಡೆಯುತ್ತವೆ.