ನವದೆಹಲಿ: ಅಬಕಾರಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿ ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಖುದ್ದು ಭೇಟಿ ಮಾಡಲು ಪತ್ನಿ ಸುನಿತಾ ಕೇಜ್ರಿವಾಲ್‌ಗೆ ಅನುಮತಿ ನಿರಾಕರಿಸಲಾಗಿದೆ. ಕೇವಲ ಕಿಟಕಿ ಮುಖಾಂತರ ದೂರದಿಂದ ಭೇಟಿ ಮಾಡಲು ಅನುಮತಿಸಲಾಗಿದೆ. ಇದು ಅಮಾನವೀಯ ಸಂಗತಿ ಎಂದು ಶನಿವಾರ ಆಪ್ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಭಯಾನಕ ಪಾತಕಿಗಳಿಗೆ ತಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಮುಕ್ತ ಅವಕಾಶ ನೀಡಲಾಗುತ್ತಿದೆ. ದೆಹಲಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೇಜ್ರಿವಾಲ್ ಅವರಿಗೆ ತನ್ನ ಪತ್ನಿಯನ್ನು ನೇರವಾಗಿ ಭೇಟಿ ಮಾಡಲು ಅವಕಾಶ ನೀಡದಿರುವುದು ಅಮಾನವೀಯ ಸಂಗತಿ‘ ಎಂದು ಟೀಕಿಸಿದರು.
ಅಲ್ಲದೆ, ಜೈಲಿನಲ್ಲಿ ಕೇಜ್ರಿವಾಲ್ ಸ್ಥಿತಿ ವಿಷಮಿಸಿದೆ ಎಂದೂ ಅವರು ಕಳವಳ ವ್ಯಕ್ತಪಡಿಸಿದರು.