ನವದೆಹಲಿ: ಜೈಲಿನೊಳಗಿನಿಂದಲೇ ಆಡಳಿತ ನಡೆಸುವ ಆಮ್ ಆದ್ಮಿ ಪಕ್ಷದ ನಾಯಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ಧಾರ ಇದೀಗ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳ ತನಿಖೆಯ ವಸ್ತುವಾಗಿ ಹೊರಹೊಮ್ಮಿದೆ.
ಜೈಲಿನೊಳಗೆ ಯಾವುದೇ ವಸ್ತುಗಳನ್ನು ಇರಿಸಿಕೊಳ್ಳಲು ಕೈದಿಗಳಿಗೆ ಅನುಮತಿ ಇಲ್ಲದೇ ಇದ್ದರೂ, ಅರವಿಂದ್ ಕೇಜ್ರಿವಾಲ್ ತಮ್ಮ ಕೋಣೆಯಿಂದಲೇ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರದ ಮೂಲಕ ಆದೇಶ ನೀಡಿದ್ದು ಹೇಗೆ? ಈ ಬಗ್ಗೆ ಸಿಸಿಟೀವಿ ದೃಶ್ಯಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇ.ಡಿ. ಮೂಲಗಳು ತಿಳಿಸಿವೆ.
ದೆಹಲಿಯಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶನಿವಾರ ರಾತ್ರಿ ಕೇಜ್ರಿವಾಲ್ ಅವರು ತಾವಿರುವ ಜೈಲು ಕೋಣೆಯಿಂದಲೇ ಕಾರ್ಯಾದೇಶ ಹೊರಡಿಸಿದ್ದಾರೆ ಎಂದು ಆಪ್ ಸರ್ಕಾರದ ಸಚಿವೆ ಆತಿಷಿ ಹೇಳಿದ್ದರು.
ಹೀಗಾಗಿ ಕೇಜ್ರಿವಾಲ್ ಆದೇಶ ಪ್ರತಿ ಸಿಕ್ಕಿದ್ದು ಹೇಗೆಂದು ಆತಿಷಿಯನ್ನೂ ಇ.ಡಿ. ವಿಚಾರಣೆ ನಡೆಸುವ ಸಾಧ್ಯತೆ ಇದೆ.ಆದರೆ ಪತ್ರದಲ್ಲಿನ ಕೆಲ ಅಂಶಗಳ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸಿತ್ತು.
ದೆಹಲಿ ಸಿಎಂ ಕಚೇರಿಯನ್ನು ಹೈಜಾಕ್ ಮಾಡಲಾಗಿದೆ. ಮುಖ್ಯಮಂತ್ರಿಗಳ ಹೆಸರಲ್ಲಿ ಅನಧಿಕೃತ ವ್ಯಕ್ತಿಗಳು ಅಧಿಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿತ್ತು.
ಅದರ ಬೆನ್ನಲ್ಲೇ ಇದೀಗ ಕೇಜ್ರಿವಾಲ್ ಮತ್ತು ಆಪ್ ವಿರುದ್ಧ ಮತ್ತೊಂದು ತನಿಖೆಗೆ ಇ.ಡಿ. ಅಧಿಕಾರಿಗಳು ಮುಂದಾಗಿದ್ದಾರೆ.ಲಿಕ್ಕರ್ ಹಗರಣದಲ್ಲಿ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿತ್ತು. ಆದರೆ ರಾಜೀನಾಮೆಗೆ ಕೇಜ್ರಿ ಮತ್ತು ಅವರ ಪಕ್ಷ ನಿರಾಕರಿಸಿತ್ತು.
ಅದರ ಬೆನ್ನಲ್ಲೇ ಇದೀಗ ಈ ಹೊಸ ವಿವಾದ ಸೃಷ್ಟಿಯಾಗಿದೆ. ಇದು ತೀವ್ರಗೊಂಡರೆ ಕೇಜ್ರಿವಾಲ್ ರಾಜೀನಾಮೆ ನೀಡಬೇಕಾಗಿ ಬರಬಹುದು ಎನ್ನಲಾಗಿದೆ.