ಗುವಾಹಟಿ : ಮೊದಲ ಪತ್ನಿ/ ಪತಿಗೆ ವಿಚ್ಛೇದನ ನೀಡದೇ ಎರಡನೇ ವಿವಾಹವಾದರೆ 7 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ನೀಡುವ ಕಾನೂನು ಜಾರಿಗೆ ಅಸ್ಸಾಂನ ಬಿಜೆಪಿ ಸರ್ಕಾರ ನಿರ್ಧರಿಸಿದೆ. ನ.25ರಿಂದ ಆರಂಭವಾಗಲಿರುವ ವಿಧಾನಸಭೆಯ ಅಧಿವೇಶದಲ್ಲಿನ ಈ ಕುರಿತ ಮಸೂದೆ ಮಂಡಿಸಲು ಸರ್ಕಾರ ಸಜ್ಜಾಗಿದೆ.
ಲವ್ ಜಿಹಾದ್ ನಿಷೇಧಿಸುವ ಕಾಯ್ದೆ ಜಾರಿಯ ಘೋಷಣೆ ಮತ್ತು ಈ ಹಿಂದೆ ಬಾಲ್ಯವಿವಾಹ ಪಿಡುಗಿಗೆ ಕಡಿವಾಣ ಹಾಕಿದ ಬೆನ್ನಲ್ಲೇ, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಈ ಮಹತ್ವದ ಮಾಹಿತಿ ನೀಡಿದ್ದಾರೆ.
ಸೋಮವಾರ ಗುವಾಹಟಿಯಲ್ಲಿ ಮಾತನಾಡಿದ ಸಿಎಂ ಶರ್ಮಾ, ‘ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯದೆ ಯಾರಾದರೂ ಮತ್ತೊಂದು ಮದುವೆಯಾದರೆ ಅವರಿಗೆ ಅವರ ಧರ್ಮವನ್ನು ಲೆಕ್ಕಿಸದೆ 7 ವರ್ಷ ಜೈಲು ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಈ ನಿಯಮ ಯಾವುದೇ ಧರ್ಮದವರಿಗಾದರೂ ಅನ್ವಯವಾಗುತ್ತದೆ. ಇಂಥದ್ದೊಂದು ಕಾಯ್ದೆ ಜಾರಿಯ ಬಳಿಕ ನಮ್ಮ ಧರ್ಮ ಇದಕ್ಕೆ ಅವಕಾಶ ನೀಡುತ್ತದೆ ಎಂದು ಆರೋಪಿಗಳು ಹೇಳಬಹುದು. ಆದರೆ ಬಹುಪತ್ನಿತ್ವವನ್ನು ಅಸ್ಸಾಂ ಸರ್ಕಾರ ಎಂದಿಗೂ ಒಪ್ಪುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಮಹಿಳೆಯ ಘನತೆಯನ್ನು ಕಾಆಡಲು ರಾಜ್ಯ ಸರ್ಕಾರ ಬದ್ಧ’ ಎಂದು ಅವರು ಸ್ಪಷ್ಟಪಡಿಸಿದರು.
ಲವ್ ಜಿಹಾದ್ ನಡೆಸಿದ ಪ್ರಕರಣದಲ್ಲಿ ವ್ಯಕ್ತಿಯ ಪೋಷಕರನ್ನು ಕೂಡ ಬಂಧಿಸುವ ಕಾನೂನು ಜಾರಿಗೆ ತರುವುದಾಗಿ ಕಳೆದ ವಾರ ಹಿಮಂತ ಶರ್ಮ ಘೋಷಿಸಿದ್ದರು.
ಲಿಂಗ ಸಮಾನತೆ, ಮಹಿಳೆಯರ ಹಕ್ಕುಗಳ ರಕ್ಷಣೆ, ವಿವಾಹದ ಪಾವಿತ್ರ್ಯತೆ ಕಾಪಾಡುವ ವಿಶಾಲ ಪ್ರಯತ್ನದ ಭಾಗವಾಗಿ ಈ ಕಾಯ್ದೆ ರೂಪಿಸಲಾಗುತ್ತಿದೆ. ಜೊತೆಗೆ ವೈಯಕ್ತಿಕ ಕಾನೂನುಗಳು, ಸಮಾನತೆ ಮತ್ತು ನ್ಯಾಯದ ಸಾಂವಿಧಾನಿಕ ತತ್ವಗಳಿಗೆ ಪೂರಕವಾಗಿರುವಂತೆ ನೋಡಿಕೊಳ್ಳುವ ಉದ್ದೇಶವೂ ಇದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
- ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯದೆ ಯಾರೂ ಮತ್ತೊಂದು ಮದುವೆ ಆಗುವಂತಿಲ್ಲ
- ಹೀಗೆ ಮದುವೆ ಆದರೆ ಧರ್ಮ ಲೆಕ್ಕಿಸದೆ 7 ವರ್ಷ ಜೈಲು ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆ
- ಎಲ್ಲ ಧರ್ಮದವರಿಗೂ ಈ ಶಿಕ್ಷೆ ಅನ್ವಯ, ಯಾವುದೇ ಧರ್ಮಕ್ಕೆ ಇದರಿಂದ ವಿನಾಯ್ತಿಯಿಲ್ಲ
- ಧರ್ಮದಲ್ಲಿ ಅವಕಾಶವಿದೆ ಎಂದು ಆರೋಪಿಗಳು ಹೇಳಿದರೂ ಅದನ್ನು ಪರಿಗಣಿಸುವುದಿಲ್ಲ
- ಬಹುಪತ್ನಿತ್ವವನ್ನು ನಾವು ಒಪ್ಪಲ್ಲ. ಮಹಿಳೆಯರ ಘನತೆ ಕಾಪಾಡಲು ಬದ್ಧ: ಅಸ್ಸಾಂ ಸಿಎಂ