;Resize=(412,232))
ಅಮರಾವತಿ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತವು, ಚಂಡಮಾರುತ ಸ್ವರೂಪ ಪಡೆದುಕೊಂಡು ಮಂಗಳವಾರ ಸಂಜೆ ಅಥವಾ ರಾತ್ರಿ ಗಂಟೆಗೆ 90/100 ಕಿ.ಮೀ. ವೇಗದಲ್ಲಿ ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ. ಇದರ ಪರಿಣಾಮ ಆಂಧ್ರ, ಒಡಿಶಾ, ತೆಲಂಗಾಣ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಕಾಕಿನಾಡದ ಸಮೀಪ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣದ ಮಧ್ಯೆ ಮೋಂಥಾ ಎಂದು ಹೆಸರಿಸಲಾಗಿರುವ ಚಂಡಮಾರುತ ಅಪ್ಪಳಿಸಲಿದೆ. ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಚಂಡಮಾರುತದಿಂದ ತೀವ್ರವಾಗಿ ಬಾಧಿತವಾಗುವ ಆಂಧ್ರ, ಒಡಿಶಾ ಹಾಗೂ ತಮಿಳುನಾಡಿನಲ್ಲಿ ಎಲ್ಲ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳನ್ನು ಸನ್ನದ್ಧವಾಗಿರಿಸಲಾಗಿದೆ ಮತ್ತು ತುರ್ತು ಪರಿಸ್ಥಿತಿಗಾಗಿ ಹೆಚ್ಚುವರಿ ತಂಡಗಳನ್ನು ಸಜ್ಜುಗೊಳಿಸಲಾಗಿದೆ.
ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎಲ್ಲಾ ಜಿಲ್ಲಾಧಿಕಾರಿಗಳು, ಎಸ್ಪಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆಗೆ ಟೆಲಿಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಅಗತ್ಯ ಸಿದ್ಧತೆ ನಡೆಸಿಕೊಳ್ಳುವಂತೆ ಸೂಚಿಸಿದ್ದಾರೆ. ಅಗತ್ಯ ವಸ್ತುಗಳನ್ನು ಶೇಖರಿಸಿಟ್ಟುಕೊಳ್ಳುವಂತೆ ಹಾಗೂ ತಗ್ಗುಪ್ರದೇಶಗಳ ಜನರ ಸ್ಥಳಾಂತರ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಆಂಧ್ರ ಹಾಗೂ ಒಡಿಶಾದ ಕೆಲವು ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ನೀಡಲಾಗಿದೆ. ಒಡಿಶಾ ಮತ್ತು ಆಂಧ್ರದಲ್ಲಿ ಸಮುದ್ರ ತೀರಕ್ಕೆ ತೆರಳದಂತೆ ಪ್ರವಾಸಿಗರಿಗೆ ಹಾಗೂ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಮೋಂಥಾ ಚಂಡಮಾರುತ ಹಾಗೂ ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಅ.28ರ ವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತವು ಭಾನುವಾರ ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ಆಂಧ್ರಪ್ರದೇಶದ ಉತ್ತರ ಭಾಗ ಹಾಗೂ ಒಡಿಶಾಗೆ ಅಪ್ಪಳಿಸುವ ಸಾಧ್ಯತೆ ಇದೆ.
ಜತೆಗೆ, ಅರಬ್ಬಿ ಸಮುದ್ರದ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಈ ಎರಡರ ಪರಿಣಾಮದಿಂದ ರಾಜ್ಯದಲ್ಲಿ ಮಳೆ ಆಗಲಿದೆ. ಅದರಲ್ಲೂ ಕರಾವಳಿ, ಉತ್ತರ ಒಳನಾಡು ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಳಿದಂತೆ ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗದಲ್ಲಿ ಅ.28ರ ವರೆಗೆ ಮೋಡ ಕವಿದ ವಾತಾವರಣ ಮತ್ತು ಮಳೆ ಸುರಿಯುವ ಸಾಧ್ಯತೆ ಇದೆ.
ಈ ಕಾರಣಕ್ಕೆ ಮುಂದಿನ ಎರಡು ದಿನ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಅ.27ಕ್ಕೆ ಬೆಳಗಾವಿ, ಧಾರಾವಾಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.