ನೀವು ಕೋವಿಶೀಲ್ಡ್‌ ಲಸಿಕೆ ಪಡೆದಿದ್ದೀರಾ..? ಇಲ್ಲಿದೆ ಶಾಕಿಂಗ್ ಸಂಗತಿ

KannadaprabhaNewsNetwork |  
Published : Apr 30, 2024, 02:06 AM ISTUpdated : Apr 30, 2024, 05:13 AM IST
ಆಸ್ಟ್ರಾಜೆನಿಕಾ | Kannada Prabha

ಸಾರಾಂಶ

2019-21ರ ಅವಧಿಯಲ್ಲಿ ಇಡೀ ಜಗತ್ತನ್ನು ಕಾಡಿದ ಕೋವಿಡ್‌ ಮಹಾಮಾರಿ ತಡೆಗೆ ತಾನು ಅಭಿವೃದ್ಧಿಪಡಿಸಿದ್ದ ಕೋವಿಡ್‌ ಲಸಿಕೆಯು ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬ್ರಿಟನ್‌ ಮೂಲದ ಆಸ್ಟ್ರಾಜೆನಿಕಾ ಮೊದಲ ಬಾರಿಗೆ ಒಪ್ಪಿಕೊಂಡಿದೆ.

ಲಂಡನ್‌: 2019-21ರ ಅವಧಿಯಲ್ಲಿ ಇಡೀ ಜಗತ್ತನ್ನು ಕಾಡಿದ ಕೋವಿಡ್‌ ಮಹಾಮಾರಿ ತಡೆಗೆ ತಾನು ಅಭಿವೃದ್ಧಿಪಡಿಸಿದ್ದ ಕೋವಿಡ್‌ ಲಸಿಕೆಯು ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬ್ರಿಟನ್‌ ಮೂಲದ ಆಸ್ಟ್ರಾಜೆನಿಕಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. 

ಕೋವಿಡ್‌ ಲಸಿಕೆಗಳ ಅಡ್ಡಪರಿಣಾಮದ ಕುರಿತು ನಾನಾ ವದಂತಿಗಳು ಇದ್ದವಾದರೂ, ಈ ಕುರಿತು ಕಂಪನಿ ಬಹಿರಂಗವಾಗಿ ಒಪ್ಪಿಕೊಂಡಿದ್ದು ಇದೇ ಮೊದಲು.

ಇದೇ ಆಸ್ಟ್ರಾಜೆನಿಕಾ ಲಸಿಕೆಯನ್ನೇ ಭಾರತದ ಪುಣೆ ಮೂಲ ಸೀರಂ ಇನ್‌ಸ್ಟಿಟ್ಯೂಟ್‌ ಕೋವಿಶೀಲ್ಡ್‌ ಹೆಸರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಮತ್ತು ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ನೀಡಿದ್ದ ಲಸಿಕೆ ಕೂಡಾ ಇದೇ ಆಗಿದ್ದ ಕಾರಣ, ಲಂಡನ್‌ ನ್ಯಾಯಾಲಯದಲ್ಲಿ ಆಸ್ಟ್ರಾಜೆನಿಕಾ ನೀಡಿದ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಆಸ್ಟ್ರಾಜೆನಿಕಾ ಕಂಪನಿಯಯು ಆಕ್ಸ್‌ಫರ್ಡ್‌ ವಿವಿ ಸಹಯೋಗದಲ್ಲಿ ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸಿತ್ತು. ಆದರೆ ಈ ಲಸಿಕೆ ಪಡೆದ ಪರಿಣಾಮ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ಅಡ್ಡಪರಿಣಾಮಗಳು ಸಂಭವಿಸಿವೆ ಮತ್ತು ಹಲವು ಸಾವು ಸಂಭವಿಸಿದೆ ಎಂದು ಆರೋಪಿಸಿ ಬ್ರಿಟನ್‌ನ ವಿವಿಧ ನ್ಯಾಯಾಲಯಗಳಲ್ಲಿ ಹಲವು ದೂರು ಸಲ್ಲಿಕೆಯಾಗಿದ್ದವು.ಈ ಪೈಕಿ ಜೇಮಿ ಸ್ಕಾಟ್‌ ಎಂಬುವವರು 2021ರ ಏಪ್ರಿಲ್‌ನಲ್ಲಿ ನಾನು ಲಸಿಕೆ ಪಡೆದ ಬಳಿಕ ಮೆದುಳಿನಲ್ಲಿ ಶಾಶ್ವತ ಗಾಯ ಸಂಭವಿಸಿದೆ ಎಂದು ಆರೋಪಿಸಿದ್ದರು.

ಕಂಪನಿ ಹೇಳಿದ್ದೇನು?:

ಈ ಪ್ರಕರಣದ ವಿಚಾರಣೆ ವೇಳೆ ಆಸ್ಟ್ರಾಜೆನಿಕಾದ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದ್ದು ಅದರಲ್ಲಿ ‘ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯು ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮಗಳಿಗೆ ಕಾರಣವಾಗುವುದು ನಿಜ. ಲಸಿಕೆ ಪಡೆದವರು ಥ್ರೊಂಬೋಸಿಸ್‌ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ತುತ್ತಾದವರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕಡಿಮೆಯ ತೊಂದರೆಗೆ ಒಳಗಾಗುತ್ತಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ’ ಎಂಬುದಾಗಿ ಸಂಸ್ಥೆ ತಪ್ಪೊಪ್ಪಿಕೊಂಡಿದೆ. ಅಸ್ಟ್ರಾಜೆನಿಕಾ ಸಂಸ್ಥೆ ತಯಾರಿಸಿರುವ ಕೋವಿಡ್‌ ಲಸಿಕೆಯು ಭಾರತದಲ್ಲಿ ಕೋವಿಶೀಲ್ಡ್‌ ಹೆಸರಿನಲ್ಲಿ ಉತ್ಪಾದನೆಯಾಗಿ 174 ಕೋಟಿ ಡೋಸ್‌ನಷ್ಟು ಲಸಿಕೆ ನೀಡಲಾಗಿತ್ತು.

70 ಲಕ್ಷ ಸಾವು: ವಿಶ್ವದಾದ್ಯಂತ 78 ಕೋಟಿ ಜನರಿಗೆ ಕೋವಿಡ್‌ ಸೋಂಕು ತಗುಲಿ 70 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಭಾರತದಲ್ಲಿ 45 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ವ್ಯಾಪಿಸಿ 5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ