ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳು ಈ ಬಾರಿಯ ಚಳಿಗೆ ತತ್ತರಿಸಿ ಹೋಗಿದ್ದು, ಅಲ್ಲಲ್ಲಿ ತಾಪಮಾನ ತೀವ್ರ ಕುಸಿತಗೊಂಡಿದೆಯಲ್ಲದೇ ದಟ್ಟ ಮಂಜಿನಿಂದ ಗೋಚರತೆಯ ಪ್ರಮಾಣ ಕುಸಿಯುತ್ತಿದೆ.
ಭಾನುವಾರ ಮುಂಜಾನೆ ದೆಹಲಿಯಲ್ಲಿ ಕೇವಲ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ಬಾರಿಯ ಚಳಿಗಾಲದಲ್ಲೇ ಅತೀ ಕನಿಷ್ಠ ತಾಪಮಾನವಾಗಿದೆ. ಕಾಶ್ಮೀರದಲ್ಲಿ ಮೈನಸ್ 4.2 ಡಿಗ್ರಿ, ರಾಜಸ್ಥಾನದಲ್ಲಿ 3 ಡಿಗ್ರಿಗೆ ಉಷ್ಣಾಂಶ ಕುಸಿದಿದೆ.
ಹೀಗಾಗಿ ದಿಲ್ಲಿ ಹಾಗೂ ಉತ್ತರ ಭಾರತದ100 ವಿಮಾನಗಳ ಸಂಚಾರ ವಿಳಂಬವಾಗಿದ್ದು, 3-4 ತಾಸು ತಡವಾಗಿ ಸಂಚರಿಸಿವೆ. ರೈಲು-ರಸ್ತೆ ಸಂಚಾರದಲ್ಲೂ ವ್ಯತ್ಯಯವಾಗಿದೆ. ಈ ನಡುವೆ, ಚಳಿಗಾಲ ರಜೆ ಬಳಿಕ ದೆಹಲಿಯಲ್ಲಿ ಶಾಲೆಗಳು ಸೋಮವಾರದಿಂದ ಪುನರಾರಂಭ ಆಗುತ್ತಿದ್ದರೂ, ಚಳಿ ಕಾರಣ ಬೆಳಗ್ಗೆ 9 ಗಂಟೆ ನಂತರವೇ ಶಾಲೆ ಆರಂಭಿಸಬೇಕು. ಅದಕ್ಕೂ ಮುನ್ನ ಆರಂಭಿಸಕೂಡದು. ಸಂಜೆ 5 ಗಂಟೆಯೊಳಗೆ ತರಗತಿ ಮುಗಿಸಬೇಕು ಎಂದು ಸೂಚಿಸಲಾಗಿದೆ.
ಕಾಶ್ಮೀರದಲ್ಲೂ ಕೊರೆವ ಚಳಿ: ಜಮ್ಮು-ಕಾಶ್ಮೀರದಲ್ಲೂ ತಾಪಮಾನ ಪಾತಾಳಕ್ಕೆ ಕುಸಿದಿದ್ದು, ಶ್ರೀನಗರದಲ್ಲಿ ಶನಿವಾರ ರಾತ್ರಿ ಕನಿಷ್ಠ ತಾಪಮಾನ ಮೈನಸ್ 4.2 ಡಿಗ್ರಿ ದಾಖಲಾಗಿದೆ. ಅಲ್ಲದೇ ಹಿಮಪಾತವೂ ತೀವ್ರವಾಗಿದೆ. ಇನ್ನು ಜಮ್ಮುವಿನ ಗರಿಷ್ಠ ತಾಪಮಾನವು ಕೇವಲ 8.9 ಡಿಗ್ರಿ ಇದೆ.
ರಾಜಸ್ಥಾನದಲ್ಲೂ ಶೀತ ಅಲೆ: ರಾಜಸ್ಥಾನದ ಪಿಲಾನಿಯಲ್ಲಿ 3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು ಇದು ರಾಜ್ಯದಲ್ಲೇ ಅತ್ಯಂತ ಶೀತ ಪ್ರದೇಶ ಎನಿಸಿಕೊಂಡಿದೆ. ಹಲವು ಭಾಗಗಳಲ್ಲಿ ದಟ್ಟ ಮಂಜು ಮತ್ತು ಚಳಿ ಮುಂದುವರೆದಿದ್ದು, ಬಹುತೇಕ ಕಡೆ ತಾಪಮಾನ 10 ಡಿಗ್ರಿಗಿಂತ ಕಡಿಮೆಯಾಗಿದೆ.
ರೈಲು, ವಿಮಾನ ಪ್ರಯಾಣಕ್ಕೆ ತೊಂದರೆ: ದೆಹಲಿಯಲ್ಲಿ ಪ್ರತಿ ಚಳಿಗಾಲದಲ್ಲಿ ಕಂಡು ಬರುವ ಸರಾಸರಿ ತಾಪಮಾನವಾದ 4 ಡಿಗ್ರಿಗಿಂತ ಕಡಿಮೆ ತಾಪ (3.5 ಡಿಗ್ರಿ) ಭಾನುವಾರ ದಾಖಲಾಗಿದೆ. ಶನಿವಾರವೂ ತಾಪಮಾನ 3.6 ಡಿಗ್ರಿಯಷ್ಟು ದಾಖಲಾಗಿತ್ತು.
ಈ ನಡುವೆ ಅತಿಯಾದ ಮಂಜಿನಿಂದ ದೆಹಲಿಗೆ ಹೋಗುವ/ ದಿಲ್ಲಿಯಿಂದ ನಿರ್ಗಮಿಸುವ 22 ರೈಲುಗಳು 1 ರಿಂದ 6 ಗಂಟೆಗಳ ಕಾಲ ವಿಳಂಬವಾಗಿ ಆಗಮಿಸಿವೆ. ಅಲ್ಲದೇ ಪ್ರತಿಕೂಲ ಹವಾಮಾನದಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದ ಅನೇಕ ವಿಮಾನಗಳ ಮಾರ್ಗಗಳನ್ನು ಬದಲಿಸಲಾಗಿದೆ. ವಿಮಾನಗಳು ಸರಾಸರಿ 3-4 ತಾಸು ವಿಳಂಬವಾಗಿ ಸಂಚರಿಸಿವೆ.