‘ಸಿಂದೂರ’ ಸುದ್ದಿಗೋಷ್ಠಿಗೆ ಮಹಿಳಾ ಅಧಿಕಾರಿಗಳ ಮುಂದಾಳತ್ವ!

KannadaprabhaNewsNetwork | Updated : May 08 2025, 04:51 AM IST
Follow Us

ಸಾರಾಂಶ

ಪಹಲ್ಗಾಂ ನರಮೇಧದ ಪ್ರತಿಯಾಗಿ ಪಾಕಿಸ್ತಾನದ ಮತ್ತು ಪಿಒಕೆ ಮೇಲೆ ಭಾರತ ನಡೆಸಿದ ‘ಆಪರೇಷನ್‌ ಸಿಂದೂರ್‌’ ಬಗ್ಗೆ ಮಾಹಿತಿ ನೀಡಲು ನಡೆದ ಪತ್ರಿಕಾಗೋಷ್ಠಿಯ ಮುಂದಾಳತ್ವವನ್ನು ಇಬ್ಬರು ಮಹಿಳಾ ಅಧಿಕಾರಿಗಳು ವಹಿಸಿಕೊಂಡದ್ದು ವಿಶೇಷವಾಗಿತ್ತು.

ನವದೆಹಲಿ: ಪಹಲ್ಗಾಂ ನರಮೇಧದ ಪ್ರತಿಯಾಗಿ ಪಾಕಿಸ್ತಾನದ ಮತ್ತು ಪಿಒಕೆ ಮೇಲೆ ಭಾರತ ನಡೆಸಿದ ‘ಆಪರೇಷನ್‌ ಸಿಂದೂರ್‌’ ಬಗ್ಗೆ ಮಾಹಿತಿ ನೀಡಲು ನಡೆದ ಪತ್ರಿಕಾಗೋಷ್ಠಿಯ ಮುಂದಾಳತ್ವವನ್ನು ಇಬ್ಬರು ಮಹಿಳಾ ಅಧಿಕಾರಿಗಳು ವಹಿಸಿಕೊಂಡದ್ದು ವಿಶೇಷವಾಗಿತ್ತು. ಉಗ್ರದಾಳಿಯಲ್ಲಿ ತಮ್ಮ ಪತಿಯನ್ನು ಕಳೆದುಕೊಂಡು ಸಿಂದೂರ ವಂಚಿತರಾದ ಮಹಿಳೆಯರಿಗೆ ನ್ಯಾಯ ಕೊಡಿಸಲು ನಡೆಸಲಾದ ಕಾರ್ಯಾಚರಣೆಯ ಬಗ್ಗೆ ವಿವರಿಸುವ ಜವಾಬ್ದಾರಿಯನ್ನು ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಮತ್ತು ಕರ್ನಲ್‌ ಸೋಫಿಯಾ ಖುರೇಷಿ ಅವರಿಗೆ ವಹಿಸಲಾಗಿತ್ತು. ಈ ಮೂಲಕ ಮಹತ್ವದ ಸಂದೇಶ ರವಾನಿಸಲಾಗಿದೆ. 

ವ್ಯೋಮಿಕಾ ಸಿಂಗ್‌ ಯಾರು?:

ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಅವರು ಭಾರತೀಯ ವಾಯುಪಡೆಯ ವಿಶಿಷ್ಟ ಹೆಲಿಕಾಪ್ಟರ್ ಪೈಲಟ್. 2004ರಲ್ಲಿ ವಾಯುಪಡೆಗೆ ಸೇರ್ಪಡೆಗೊಂಡ ಇವರು ಜಮ್ಮು ಕಾಶ್ಮೀರ, ಭಾರತದ ಈಶಾನ್ಯ ಭಾಗ ಸೇರಿದಂತೆ ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ‘ಚೇತಕ್‌’ ಮತ್ತು ‘ಚೀತಾ’ ಹೆಲಿಕಾಪ್ಟರ್‌ಗಳನ್ನು ಹಾರಿಸಿದ್ದಾರೆ. 2019ರ ಡಿ.18ರಂದು ಇವರಿಗೆ ಪರ್ಮನೆಂಟ್‌ ಕಮಿಷನ್‌(ನಿವೃತ್ತಿಯ ವರೆಗೂ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಅವಕಾಶ) ನೀಡಲಾಗಿದೆ. ಸಿಂಗ್‌ ಅವರು ಹಲವು ರಕ್ಷಣಾ ಕಾರ್ಯಾಚರಣೆಗಳ ಭಾಗವಾಗಿದ್ದರು. 2021ರಲ್ಲಿ ಹಿಮಾಚಲ ಪ್ರದೇಶದ ಮಣಿರಾಂಗ್‌ ಪರ್ವತ ಏರಿದ ವಾಯುಪಡೆಯ ಮಹಿಳಾ ವಿಭಾಗದಲ್ಲೂ ವ್ಯೋಮಿಕಾ ಇದ್ದರು.

ಸೋಫಿಯಾ ಖುರೇಷಿ ಯಾರು?:

2016ರಲ್ಲಿ ಪುಣೆಯಲ್ಲಿ ನಡೆದ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಕರ್ನಲ್‌ ಸೋಫಿಯಾ ಖುರೇಷಿ(35). ಮೂಲತಃ ಸೈನಿಕ ಕುಟುಂಬಕ್ಕೆ ಸೇರಿದವರಾದ ಇವರು, ಪ್ರಸ್ತುತ ಮಿಲಿಟರಿ ಸಂವಹನಗಳನ್ನು ನಿರ್ವಹಿಸುವ ಸಿಗ್ನಲ್ಸ್‌ ವಿಭಾಗದ ಅಧಿಕಾರಿ. ಸೇನೆಯ ಉನ್ನತ ಹುದ್ದೆಗಳಲ್ಲಿ ಲಿಂಗ ಸಮಾನತೆಯ ಬಗ್ಗೆ 2020ರಲ್ಲಿ ತೀರ್ಪು ಹೊರಡಿಸಿದ್ದ ಸುಪ್ರೀಂ ಕೋರ್ಟ್‌, ಖುರೇಷಿ ಅವರ ಸಾಧನೆಯನ್ನೂ ಆ ಸಂದರ್ಭದಲ್ಲಿ ಬಣ್ಣಿಸಿತ್ತು. 2006ರಲ್ಲಿ ಕಾಂಗೋದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲೂ ಖುರೇಷಿ ಇದ್ದರು.

ಮಹಿಳಾ ಅಧಿಕಾರಿಗಳೇಕೆ ಸುದ್ದಿಗೋಷ್ಠಿಗೆ?

ಸಿಂದೂರ ಎಂಬುದು ಭಾರತೀಯ ವಿವಾಹಿತ ಮಹಿಳೆಯರಿಗೆ ಪವಿತ್ರ. 25 ಭಾರತೀಯ ಪುರುಷರನ್ನು ಕೊಂದ ಉಗ್ರರು ಅವರ ಪತ್ನಿಯರ ಸಿಂದೂರ ಅಳಿಸಿ ಹಾಕಿದ್ದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿಯೇ ಮಹಿಳಾ ಅಧಿಕಾರಿಗಳನ್ನು ಕಳಿಸಿ ಆಪರೇಶನ್‌ ಸಿಂಧೂರದ ಮಾಹಿತಿಯನ್ನು ಕೊಡಿಸಿ ಸಂದೇಶ ಸಾರಲಾಗಿದೆ ಎಂದು ಮೂಲಗಳು ಹೇಳಿವೆ.