ಭಾರತ-ಪಾಕ್‌ ಸಂಘರ್ಷಕ್ಕಿದೆ ಸುದೀರ್ಘ ಇತಿಹಾಸ

KannadaprabhaNewsNetwork | Updated : May 08 2025, 04:54 AM IST
Follow Us

ಸಾರಾಂಶ

ಭಾರತ ಮತ್ತು ಪಾಕ್‌ ನಡುವಿನ ಮಿಲಿಟರಿ ಉದ್ವಿಗ್ನತೆ ಇದೇ ಮೊದಲೇನಲ್ಲ. ಅದಕ್ಕೆ 1947ರಿಂದಲೂ ಸುದೀರ್ಘ ಇತಿಹಾಸವಿದೆ.

ನವದೆಹಲಿ: ಪಹಲ್ಗಾಂನಲ್ಲಿ ನಡೆದ ನರಮೇಧದ ಪ್ರತೀಕಾರವಾಗಿ ಭಾರತ ಪಾಕ್‌ ಭಯೋತ್ಪಾದಕ ಸಂಘಟನೆ ಜೈಶ್ - ಎ- ಮುಹಮ್ಮದ್‌ ಭದ್ರಕೋಟೆ ಬಹವಾಲ್ಪುರ ಸೇರಿದಂತೆ 9 ಉಗ್ರ ನೆಲೆಗಳನ್ನು ಆಪರೇಷನ್ ಸಿಂದೂರ ಕಾರ್ಯಾಚರಣೆ ಹೆಸರಿನಲ್ಲಿ ಧ್ವಂಸ ಮಾಡಿ ತಕ್ಕ ಉತ್ತರ ನೀಡಿದೆ. ಭಾರತ ಮತ್ತು ಪಾಕ್‌ ನಡುವಿನ ಮಿಲಿಟರಿ ಉದ್ವಿಗ್ನತೆ ಇದೇ ಮೊದಲೇನಲ್ಲ. ಅದಕ್ಕೆ 1947ರಿಂದಲೂ ಸುದೀರ್ಘ ಇತಿಹಾಸವಿದೆ. ಭಾರತ ಮತ್ತು ಪಾಕ್‌ ಮಿಲಿಟರಿ ಮುಖಾಮುಖಿಗಳ ಇತಿಹಾಸವು ಭಾರತದ ಸ್ವಾತಂತ್ರ್ಯ ನಂತರದ ಮೊದಲ ಯುದ್ಧದಿಂದ ಆರಂಭಗೊಂಡಿತ್ತು. ಅದು ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿಗೆ ಪ್ರತೀಕಾರವಾಗಿ 2019ರ ಬಾಲ್‌ಕೋಟ್‌ನಲ್ಲಿ ನಡೆದ ಸರ್ಜಿಕಲ್‌ ಸ್ಟ್ರೈಕ್‌ವರಗೆ ವಿಸ್ತರಿಸಿದೆ.

1947( ಭಾರತ- ಪಾಕ್ ಮೊದಲ ಯುದ್ಧ):

ಈ ಯುದ್ಧವನ್ನು ಮೊದಲ ಕಾಶ್ಮೀರ ಯುದ್ಧ ಅಂತಲೂ ಕರೆಯುತ್ತಾರೆ. ಈ ಯುದ್ಧವು ಆಗಷ್ಟೇ ಸ್ವತಂತ್ರ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಆಗಿನ ಜಮ್ಮು ಮತ್ತು ಕಾಶ್ಮೀರದ ಮೇಲೆ ರಾಜಪ್ರಭುತ್ವದ ವಿಚಾರಕ್ಕೆ ಪ್ರಾರಂಭವಾಯಿತು. 1947ರ ಅಕ್ಟೋಬರ್‌ನಲ್ಲಿ ಈ ಯುದ್ಧ ಆರಂಭಗೊಂಡಿತು. ಪಾಕಿಸ್ತಾನ ಮೂಲವಾಯಿತು. ಇದಕ್ಕೆ ಪ್ರತಿಯಾಗಿ ಮಹಾರಾಜ ಹರಿ ಸಿಂಗ್ ಜಮ್ಮು ಮತ್ತು ಕಾಶ್ಮೀರವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುತ್ತಾನೆ. ನಂತರ ಭಾರತವು ಆ ಪ್ರದೇಶವನ್ನು ರಕ್ಷಿಸಲು ಸೈನ್ಯವನ್ನು ಕಳುಹಿಸಿತು, ಇದು ಎರಡು ರಾಷ್ಟ್ರಗಳ ನಡುವೆ ಪೂರ್ಣ ಪ್ರಮಾ ಣದ ಸಂಘರ್ಷಕ್ಕೆ ಕಾರಣವಾಯಿತು. 1949ರ ಜನವರಿ ತನಕವೂ ಯುದ್ಧ ಮುಂದುವರೆಯಿತು. ಆ ಬಳಿ ವಿಶ್ವಸಂಸ್ಥೆಯು ಮಧ್ಯಸ್ಥಿಕೆಯಿಂದಾಗ ಕದನ ವಿರಾಮ ಜಾರಿಗೆ ಬಂದಿತು. ಪರಿಣಾಮ ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕಾಶ್ಮೀರ ವಿಭಜನೆಯಾಯಿತು.

1965( ಭಾರತ - ಪಾಕ್ ಎರಡನೇ ಯುದ್ಧ):

1965ರ ಆಗಸ್ಟ್‌ 5 ರಂದು ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಸಶಾಸ್ತ್ರ ಸಂಘರ್ಷ ಪ್ರಾರಂಭವಾಯಿತು. ಸ್ಥಳೀಯ ದಂಗೆಕೋರರ ವೇಷಧರಿಸಿ ಸಾವಿರಾರು ಪಾಕಿಸ್ತಾನಿ ಸೈನಿಕರು ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಯಾದ್ಯಂತ ಭಾರತದ ಪ್ರದೇಶಕ್ಕೆ ನುಸುಳಿದಾಗ ಪ್ರಾರಂಭವಾಯಿತು. ಆಪರೇಷನ್‌ ಜಿಬ್ರಾಲ್ಟರ್‌ ಎಂದು ಕರೆಯಲ್ಪಡುವ ಈ ರಹಸ್ಯ ಕಾರ್ಯಾಚರಣೆಯು ಸ್ಥಳೀಯ ದಂಗೆಯನ್ನು ಪ್ರಚೋದಿಸುವ ಗುರಿಯನ್ನು ಹೊಂದಿತ್ತು. ಭಾರತದ ಮಿಲಿಟರಿ ಪಡೆ ಇದಕ್ಕೆ ಪ್ರತಿದಾಳಿ ಮೂಲಕ ಪ್ರತಿಕ್ರಿಯಿಸಿತು. ಇದು ಅಂತರಾಷ್ಟ್ರೀಯ ಗಡಿಯಲ್ಲಿ ಪೂರ್ಣ ಪ್ರಮಾಣದ ಯುದ್ಧವಾಗಿ ಮುಂದುವರೆದು 1965ರ ಸೆಪ್ಟೆಂಬರ್ 23ರ ತನಕ ಮುಂದುವರೆಯಿತು. ಸೋವಿಯತ್‌ ಒಕ್ಕೂಟ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರು. 

1971( ಬಾಂಗ್ಲಾ ವಿಮೋಚನಾ ಯುದ್ಧ):

1971ರ ಭಾರತ - ಪಾಕ್‌ ಯುದ್ಧವು ಪೂರ್ವ ಪಾಕಿಸ್ತಾನದ( ಈಗಿನ ಬಾಂಗ್ಲಾದೇಶ) ಮೇಲೆ ಪಾಕಿಸ್ತಾನಿ ಸೇನೆಯ ದಮನ ನೀತಿ ಮತ್ತು ಅದರ ಸ್ವಾತಂತ್ರ್ಯದ ಬೇಡಿಕೆಯ ಕಾರಣಕ್ಕೆ ನಡೆಯಿತು. ಬಾಂಗ್ಲಾದ ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸುವ ಸಲುವಾಗಿ ಭಾರತವು ಯುದ್ಧದಲ್ಲಿ ಮಧ್ಯಪ್ರವೇಶಿಸಿತು.

ಪಶ್ಚಿಮ ಮತ್ತು ಪೂರ್ವ ಎರಡೂ ಕಡೆಗಳಲ್ಲಿ ತೀವ್ರತರದ ಹೋರಾಟದ ಬಳಿಕ ಪಾಕಿಸ್ತಾನಿ ಪಡೆಗಳು 1971ರ ಡಿ.15ರಂದು ಶರಣಾದವು. ಈ ಯುದ್ಧವು ಬಾಂಗ್ಲಾದೇಶವನ್ನು ಸ್ವತಂತ್ರ ರಾಷ್ಟ್ರವಾಗಿ ರಚಿಸಲು ಕಾರಣವಾಯಿತು. 

1999( ಕಾರ್ಗಿಲ್ ಯುದ್ಧ):

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಅತ್ಯಂತ ಮಹತ್ವದ ಸಂಘರ್ಷ ಕಾರ್ಗಿಲ್ ಯುದ್ಧ. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನಿ ಪಡೆಗಳು ಮತ್ತು ಭಯೋತ್ಪಾದಕರು ಶಿಖರಗಳನ್ನು ಆಕ್ರಮಿಸಿಕೊಂಡ ನಂತರ ಮೇನಿಂದ ಜುಲೈ ತನಕ ನಡೆಯಿತು.

ವಾಯುಪಡೆಯ ಆಪರೇಷನ್ ಸಫೇದ್‌ ಸಾಗರ ಬೆಂಬಲದೊಂದಿಗೆ ಭಾರತವು ಪ್ರದೇಶವನ್ನು ಮರಳಿ ಪಡೆಯಲು ಆಪರೇಷನ್ ವಿಜಯ್ ಪ್ರಾರಂಭಿಸಿತು. ಜು.26ರಂದು ಭಾರತವು ಕಾರ್ಗಿಲ್ ಪ್ರದೇಶದಲ್ಲಿ ತನ್ನ ನಿಯಂತ್ರಣ ಮರಳಿ ಪಡೆಯುವುದರೊಂದಿಗೆ ಯುದ್ಧ ಕೊನೆಗೊಂಡಿತು. ಆ ದಿನವನ್ನು ಈಗ ಕಾರ್ಗಿಲ್ ವಿಜಯ್‌ ದಿವಸ್‌ ಎಂದು ಗುರುತಿಸಲಾಗಿದೆ.

 2016 (ಉರಿ ದಾಳಿ/ಸರ್ಜಿಕಲ್‌ ಸ್ಟ್ರೈಕ್‌):

ಜಮ್ಮು ಕಾಶ್ಮೀರದ ಉರಿಯಲ್ಲಿ ಭಾರತೀಯ ಸೇನಾ ನೆಲೆ ಮೇಲೆ 2016ರ ಸೆ.18ರಂದು ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಭಾರತ ಸೆ.28,29ರಂದು ಗಡಿ ನಿಯಂತ್ರಣ ರೇಖೆಯ ಬಳಿ ಸರ್ಜಿಕಲ್ ನಡೆಸಿತ್ತು.

ಪಾಕ್ ಆಕ್ರಮಿತ ಪ್ರದೇಶದಲ್ಲಿನ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತು. ಆ ದಾಳಿಯಲ್ಲಿ ಅನೇಕ ಭಯೋತ್ಪಾದಕರು ಹತರಾಗಿದ್ದರು.

2019( ಪುಲ್ವಾಮ ದಾಳಿ/ಏರ್‌ ಸ್ಟ್ರೈಕ್‌) :

2019ರ ಫೆಬ್ರವರಿ 26 ರಂದು 40 ಸಿಆರ್‌ಪಿಎಫ್‌ ಯೋಧರನ್ನು ಬಲಿ ತೆಗೆದುಕೊಂಡ ಪುಲ್ವಾಮಾ ಭಯೋತ್ಪಾದಕ ದಾಳಿಗೆ ನಡೆದ ಪ್ರತೀಕಾರವಿದು. ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲ್‌ಕೋಟ್‌ನಲ್ಲಿರುವ ಜೈಶ್‌ - ಎ - ಮೊಹಮ್ಮದ್‌ (ಜೆಎಂ) ಭಯೋತ್ಪಾದಕರ ತರಬೇತಿ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತು.

ಫೈಟರ್‌ ಜೆಟ್‌ಗಳನ್ನು ಬಳಸಿ ಭಾರತವು ಪಾಕಿಸ್ತಾನದೊಳಗಿನ ಶಿಬಿರವನ್ನು ಗುರಿಯಾಗಿಸಿಕೊಂಡಿತು.ನಿದು 1971ರ ಯುದ್ಧದ ನಂತರ ನಡೆದ ಮೊದಲ ವೈಮಾನಿಕ ದಾಳಿ.