ದೆಹಲಿ ವಿಧಾನಸಭೆಗೆ ಮಾಜಿ ದೆಹಲಿ ಮಾಜಿ ಮುಖ್ಯಮಂತ್ರಿ, ಕಲ್ಕಾಜಿ ಕ್ಷೇತ್ರದ ಆಪ್‌ ಶಾಸಕಿ ಆತಿಶಿ ಪ್ರತಿಪಕ್ಷ ನಾಯಕಿ

KannadaprabhaNewsNetwork | Updated : Feb 24 2025, 05:17 AM IST

ಸಾರಾಂಶ

ದೆಹಲಿ ಮಾಜಿ ಮುಖ್ಯಮಂತ್ರಿ, ಕಲ್ಕಾಜಿ ಕ್ಷೇತ್ರದ ಆಪ್‌ ಶಾಸಕಿ ಆತಿಶಿ ಅವರನ್ನು ದೆಹಲಿ ವಿರೋಧ ಪಕ್ಷದ ನಾಯಕಿನ್ನಾಗಿ ಆಮ್ ಆದ್ಮಿ ಪಕ್ಷದ ಶಾಸಕರು ಸರ್ವಾನುಮತದಿಂದ ಭಾನುವಾರ ಆಯ್ಕೆ ಮಾಡಿದ್ದಾರೆ.

ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ, ಕಲ್ಕಾಜಿ ಕ್ಷೇತ್ರದ ಆಪ್‌ ಶಾಸಕಿ ಆತಿಶಿ ಅವರನ್ನು ದೆಹಲಿ ವಿರೋಧ ಪಕ್ಷದ ನಾಯಕಿನ್ನಾಗಿ ಆಮ್ ಆದ್ಮಿ ಪಕ್ಷದ ಶಾಸಕರು ಸರ್ವಾನುಮತದಿಂದ ಭಾನುವಾರ ಆಯ್ಕೆ ಮಾಡಿದ್ದಾರೆ. 

ಆಪ್ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ನಡೆದ 22 ಶಾಸಕರ ಸಭೆಯಲ್ಲಿ ಆತಿಶಿ ಹೆಸರು ಅಂತಿಮವಾಗಿದೆ. ಫೆ.24ರಿಂದ ದೆಹಲಿ ವಿಧಾನಸಭೆಯ ಅಧಿವೇಶನ ಆರಂಭವಾಗಲಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಬಿಜೆಪಿಯು ಈ ಅಧಿವೇಶನದಲ್ಲಿ ಹಿಂದಿನ ಆಪ್ ಸರ್ಕಾರದ ಕಾರ್ಯಶೈಲಿಯ ಕುರಿತ 14 ಸಿಎಜಿ ವರದಿಯನ್ನು ಮಂಡಿಸುವುದಾಗಿ ಹೇಳಿದೆ.

ಬಿಹಾರ ಚುನಾವಣೆಗೂ ಮುನ್ನ ನಿತೀಶ್‌ ಪುತ್ರ ನಿಶಾಂತ್‌ ರಾಜಕೀಯಕ್ಕೆ?

ಪಟನಾ: ಬಿಹಾರ ವಿಧಾನಸಭೆ ಚುನಾವಣೆ ಈ ವರ್ಷಾಂತ್ಯಕ್ಕೆ ನಡೆಯಲಿದ್ದು, ಅದಕ್ಕೂ ಮುನ್ನ ಜೆಡಿಯು ನಾಯಕ ಹಾಗೂ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್‌ ರಾಜಕೀಯಕ್ಕೆ ಪ್ರವೇಶಿಸಬಹುದು ಎಂಬ ಊಹಾಪೋಹಗಳು ಹರಡಿವೆ.ಈ ವಿಷಯದ ಬಗ್ಗೆ ಅವರಾಗಲಿ ಅಥವಾ ಅವರ ತಂದೆಯಾಗಲಿ ಇಲ್ಲಿಯವರೆಗೆ ಮಾತನಾಡಿಲ್ಲ. ಆದರೆ ನಿಶಾಂತ್‌ ರಾಜಕೀಯಕ್ಕೆ ಬರುತ್ತಾರೆ ಎಂದು ಅಲ್ಲಲ್ಲಿ ಪೋಸ್ಟರ್‌ಗಳನ್ನು ಅವರ ಬೆಂಬಲಿಗರು ಹಾಕಿದ್ದಾರೆ. ಈ ಬಗ್ಗೆ ಜೆಡಿಯು ನಾಯಕರು ಮಾತನಾಡಿ, ‘ಅಭಿಮಾನಿಗಳು ಅದನ್ನು ಹಾಕಿರಬಹುದು. ಅದು ಪಕ್ಷದ ನಿಲುವಲ್ಲ’ ಎಂದಿದ್ದಾರೆ.

ಈ ನಡುವೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಾತನಾಡಿ, ‘ನಿಶಾಂತ್‌ ರಾಜಕೀಯಕ್ಕೆ ಬಂದರೆ ಜೆಡಿಯು ಉಳಿಯಲಿದೆ. ಇಲ್ಲದಿದ್ದರೆ ಜೆಡಿಯುವನ್ನು ಬಿಜೆಪಿ ಹಾಗೂ ಮಿತ್ರರು ಆಪೋಶನ ತೆಗೆದುಕೊಳ್ಳಲಿದ್ದಾರೆ’ ಎಂದಿದ್ದಾರೆ.ಇತ್ತೀಚೆಗೆ ನಿಶಾಂತ್‌ ಅವರು, ‘ನನ್ನ ತಂದೆ ಈಗಲೂ 100% ಫಿಟ್‌ ಆಗಿದ್ದಾರೆ. ಅವರಿಗೇ ಮುಂದಿನ ಚುನಾವಣೆಯಲ್ಲಿ ಮತ ಹಾಕಿ’ ಎಂದಿದ್ದರು.

ಕುಟುಂಬ ಯೋಜನೆಯಿಂದ ಸಂಸತ್‌ ಸೀಟು ಕುಸಿತದ ಆತಂಕ: ಸ್ಟಾಲಿನ್‌

ಚೆನ್ನೈ: ತಮಿಳುನಾಡಿನಲ್ಲಿ ಕುಟುಂಬ ನಿಯಂತ್ರಣ ಯೋಜನೆಯನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಿದ ಪರಿಣಾಮವಾಗಿ ತಮಿಳುನಾಡು ಮುಂದಿನ ಕ್ಷೇತ್ರ ಮರುವಿಂಗಡಣೆ ವೇಳೆ ತನ್ನ ಲೋಕಸಭಾ ಕ್ಷೇತ್ರಗಳು ಕಡಿತಗೊಳ್ಳುವ ಆತಂಕ ಇದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹೇಳಿದ್ದಾರೆ. 

ಡಿಎಂಕೆ ಪಕ್ಷದ ನಾಯಕರ ಮದುವೆ ಸಮಾರಂಭದಲ್ಲಿ ಮಾತನಾಡಿದ ಸ್ಟಾಲಿನ್‌, ಕುಟುಂಬ ನಿಯಂತ್ರಣ ಯೋಜನೆಯು ಮಕ್ಕಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಒಳ್ಳೆ ಯೋಜಿತ ಕುಟುಂಬವನ್ನು ರೂಪಿಸುತ್ತದೆ. ತಮಿಳುನಾಡು ಈ ಯೋಜನೆಯನ್ನು ಪ್ರತಿ ಬಾರಿಯೂ ಪರಿಪಕ್ವವಾಗಿ ಜಾರಿ ಮಾಡಿದ ಪರಿಣಾಮ ಇಂದು ಈ ಸ್ಥಿತಿಗೆ ಬಂದಿದ್ದೇವೆ. ಜನಸಂಖ್ಯಾ ಆಧರಿತ ಕ್ಷೇತ್ರ ಮರುವಿಂಗಡಣೆಯಲ್ಲಿ ರಾಜ್ಯಕ್ಕೆ ಲೋಕಸಭಾ ಪ್ರಾತಿನಿಧ್ಯವು ಕುಸಿಯುವ ಭೀತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ತಮಿಳುನಾಡಿನಲ್ಲಿ ಪ್ರಸ್ತುತ 39 ಲೋಕಸಭಾ ಕ್ಷೇತ್ರಗಳಿವೆ.

ಈ ಹಿಂದೆ 16 ಸಂಪತ್ತುಗಳ ಪ್ರತೀಕವಾಗಿ ತಮಿಳರು 16 ಮಕ್ಕಳ ಹೆರಬೇಕು ಎಂದು ಸ್ಟಾಲಿನ್‌ ಹೇಳಿದ್ದರು.

ಪನ್ನೀರ್‌ಸೆಲ್ವಂಗೆ ಎಐಎಡಿಎಂಕೆಯಲ್ಲಿ ಸ್ಥಾನವಿಲ್ಲ: ಪಳನಿಸ್ವಾಮಿ

ಚೆನ್ನೈ: ಎಐಎಡಿಎಂಕೆ ಉಚ್ಚಾಟಿತ ನಾಯಕ ಒ. ಪನ್ನೀರ್‌ಸೆಲ್ವಂ ಅವರನ್ನು ಪಕ್ಷಕ್ಕೆ ವಾಪಸ್‌ ತೆಗೆದುಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಪಳನಿಸ್ವಾಮಿ ಹೇಳಿದ್ದಾರೆ. ಎಐಎಡಿಎಂಕೆಗೆ ಮರು ಸೇರ್ಪಡೆ ಬಗ್ಗೆ ಪನ್ನೀರ್‌ ಸೆಲ್ವಂ ಇಂಗಿತ ವ್ಯಕ್ತ ಪಡಿಸಿದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.ಮಾಜಿ ಮುಖ್ಯಮಂತ್ರಿ ದಿ. ಕೆ. ಜಯಲಲಿತಾರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಈ ಕುರಿತು ಮಾತನಾಡಿದ ಪಳನಿಸ್ವಾಮಿ, ‘ತೋಳ ಮತ್ತು ಕುರಿಗಳು ಸಹಬಾಳ್ವೆ ನಡೆಸಬಹುದೇ? ಕಳೆಗಳು ಮತ್ತು ಬೆಳೆಗಳು ಸುಗ್ಗಿಯ ಭಾಗವಾಗಬಹುದೇ? ನಿಷ್ಠಾವಂತ ಮತ್ತು ದೇಶದ್ರೋಹಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬಹುದೇ? ಇಲ್ಲ ಎನ್ನುವ ದೃಢವಾದ ಧ್ವನಿ ನಾನು ಕೇಳುತ್ತಿದ್ದೇನೆ’ ಎಂದರು.

 ಈ ಮೂಲಕ ಪನ್ನೀರ್‌ ಸೆಲ್ವಂಗೆ ಪಕ್ಷದಲ್ಲಿ ಸ್ಥಾನವಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಕೆಲವು ದಿನಗಳ ಹಿಂದೆ ಪನ್ನೀರ್‌ ಸೆಲ್ವಂ ‘ನಾನು, ಟಿಟಿವಿ ದಿನಕರನ್ ಮತ್ತು ಶಶಿಕಲಾ ಯಾವುದೇ ಷರತ್ತಿರದೇ ಎಐಎಡಿಎಂಕೆ ಜೊತೆ ಒಂದಾಗಲು ಸಿದ್ಧರಿದ್ದೇವೆ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು’ ಎಂದಿದ್ದರು.

ಬಾಂಗ್ಲಾದಲ್ಲಿ ಸ್ಟಾರ್‌ಲಿಂಕ್‌ ಸೇವೆ: ಮಸ್ಕ್‌ಗೆ ಯೂನಸ್‌ ಆಹ್ವಾನ

ಢಾಕಾ: ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರನ್ನು ಬಾಂಗ್ಲಾದೇಶಕ್ಕೆ ಬರುವಂತೆ ಅಲ್ಲಿನ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌ ಆಹ್ವಾನಿಸಿದ್ದಾರೆ. ಜೊತೆಗೆ, ಉಪಗ್ರಹ ಆಧಾರಿತ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸೇವೆ ಆರಂಭಿಸಲು ಮನವಿ ಮಾಡಿದ್ದಾರೆ.ಈ ಸಂಬಂಧ ಫೆ.19ರಂದು ಮಸ್ಕ್‌ಗೆ ಪತ್ರ ಬರೆದಿರುವ ಯೂನಸ್‌, ‘ಬಾಂಗ್ಲಾದೇಶದಲ್ಲಿ ಸ್ಟಾರ್‌ಲಿಂಕ್‌ ಸೇವೆ ಒದಗಿಸುವುದರಿಂದ ಉದ್ಯಮಶೀಲ ಯುವಕರು, ಮಹಿಳೆಯರು ಹಾಗೂ ಗ್ರಾಮೀಣ ಪ್ರದೇಶದ ಸಮುದಾಯಗಳಿಗೆ ಸಹಕಾರಿಯಾಗುವ ಬದಲಾವಣೆಯಾಗಲಿದೆ. ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ’ ಎಂದು ತಿಳಿಸಿದ್ದಾರೆ.

ಅಂತೆಯೇ, ಮುಂದಿನ 90 ದಿನಗಳಲ್ಲಿ ಸ್ಟಾರ್‌ಲಿಂಕ್‌ ಸೇವೆ ಲಭ್ಯವಾಗಿಸಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡುವಲ್ಲಿ ಸ್ಪೇಸ್‌ಎಕ್ಸ್‌ ತಂಡದೊಂದಿಗೆ ಸಹಕರಿಸುವಂತೆ ತಮ್ಮ ಉನ್ನತ ಪ್ರತಿನಿಧಿಯಾಗಿರುವ ಖಲೀಲುರ್‌ ರಹಮಾನ್‌ ಅವರಿಗೆ ಸೂಚಿಸಿದ್ದಾರೆ.

Share this article