ಭಾರತದ ಮೇಲೆ ದಾಳಿ ಮಾಡಿ : ಪಾಕ್‌ ಸೇನಾ ಮುಖ್ಯಸ್ಥಗೆ ಬೆಂಗಳೂರಿಂದಲೇ ಮಹಿಳೆ ಮೊರೆ

KannadaprabhaNewsNetwork |  
Published : Aug 07, 2025, 12:45 AM ISTUpdated : Aug 07, 2025, 04:39 AM IST
pak

ಸಾರಾಂಶ

  ಬೆಂಗಳೂರಿನಲ್ಲಿ ಬಂಧಿತಳಾದ ಶಮಾ ಪರ್ವೀನ್ ಅನ್ಸಾರಿ, ಆಪರೇಷನ್ ಸಿಂದೂರದ ಸಂದರ್ಭದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿ, ಮುಸ್ಲಿಂ ಪ್ರದೇಶಗಳನ್ನೆಲ್ಲ ಏಕೀಕರಿಸುವಂತೆ ಪಾಕ್ ಸೇನಾ ಮುಖ್ಯಸ್ಥ ಜ. ಅಸೀಮ್ ಮುನೀರ್‌ಗೆ ಮನವಿ ಮಾಡಿದ್ದಳು ಎಂಬ ಆಘಾತಕಾರಿ ಸಂಗತಿ ತನಿಖೆ ವೇಳೆ ಹೊರಬಿದ್ದಿದೆ.

 ಅಹಮದಾಬಾದ್: ನಿಷೇಧಿತ ಉಗ್ರ ಸಂಘಟನೆ ಅಲ್‌ ಖೈದಾ ವಿಚಾರಗಳನ್ನು ಹರಡುತ್ತಿದ್ದ ಆರೋಪದ ಮೇಲೆ ಜು.29ರಂದು ಬೆಂಗಳೂರಿನಲ್ಲಿ ಬಂಧಿತಳಾದ ಶಮಾ ಪರ್ವೀನ್ ಅನ್ಸಾರಿ, ಆಪರೇಷನ್ ಸಿಂದೂರದ ಸಂದರ್ಭದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿ, ಮುಸ್ಲಿಂ ಪ್ರದೇಶಗಳನ್ನೆಲ್ಲ ಏಕೀಕರಿಸುವಂತೆ ಪಾಕ್ ಸೇನಾ ಮುಖ್ಯಸ್ಥ ಜ. ಅಸೀಮ್ ಮುನೀರ್‌ಗೆ ಮನವಿ ಮಾಡಿದ್ದಳು ಎಂಬ ಆಘಾತಕಾರಿ ಸಂಗತಿ ತನಿಖೆ ವೇಳೆ ಹೊರಬಿದ್ದಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಅಲ್‌ ಖೈದಾ ವಿಚಾರಗಳನ್ನು ಹರಡುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ನಿವಾಸದಲ್ಲಿಯೇ ಅನ್ಸಾರಿಯನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬಂಧಿಸಿತ್ತು. ಇದೀಗ ಆಕೆಯ ಉಗ್ರಕೃತ್ಯಗಳ ಸಂಚನ್ನು ಎಟಿಎಸ್‌ ಬಹಿರಂಗಪಡಿಸಿದೆ.

ಭಾರತದ ಮೇಲೆ ಪಾಕ್ ದಾಳಿಗೆ ಕರೆ:

ಅನ್ಸಾರಿ 2 ಫೇಸ್‌ಬುಕ್ ಹಾಗೂ 1 ಇನ್‌ಸ್ಟಾಗ್ರಾಂ ಖಾತೆ ಬಳಸುತ್ತಿದ್ದಳು. ಇನ್‌ಸ್ಟಾದಲ್ಲಿ ಸುಮಾರು 10,000 ಹಿಂಬಾಲಕರನ್ನು ಹೊಂದಿದ್ದು, ಪ್ರಚೋದನಕಾರಿ, ಜಿಹಾದಿ ಹಾಗೂ ಭಾರತ ವಿರೋಧಿ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಳು. ಭಾರತ ಪಾಕ್ ವಿರುದ್ಧ ಆಪರೇಷನ್ ಸಿಂದೂರ ಕೈಗೊಂಡ 2 ದಿನಗಳ ಬಳಿಕ, ಅಂದರೆ ಮೇ 9ರಂದು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಅನ್ಸಾರಿ, ಭಾರತದ ಮೇಲೆ ದಾಳಿ ಮಾಡುವ ಸುವರ್ಣಾವಕಾಶವನ್ನು ಬಳಸಿಕೊಳ್ಳುವಂತೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ವಿನಂತಿ ಮಾಡಿದ್ದಳು ಎಂದು ಎಟಿಎಸ್‌ ಮಾಹಿತಿ ನೀಡಿದೆ.

ಮುನೀರ್‌ನ ಫೋಟೋ ಹಂಚಿಕೊಂಡು, ‘ನೀವು ಒಂದು ಸುವರ್ಣಾವಕಾಶ ಹೊಂದಿದ್ದೀರಿ. ಇಸ್ಲಾಮಿನ ಅನುಷ್ಠಾನ, ಮುಸ್ಲಿಂ ಪ್ರದೇಶಗಳ ಏಕೀಕರಣ ಹಾಗೂ ಹಿಂದುತ್ವ ಮತ್ತು ಯಹೂದಿ ಧರ್ಮವನ್ನು ನಿರ್ಮೂಲನೆ ಮಾಡಲು ಖಿಲಾಫತ್ ಯೋಜನೆಯನ್ನು ಸ್ವೀಕರಿಸಿ. ಮುನ್ನುಗ್ಗಿ’ ಎಂದು ಪೋಸ್ಟ್ ಮಾಡಿದ್ದಾಗಿ ಎಟಿಎಸ್‌ ಬಹಿರಂಗಪಡಿಸಿದೆ.

ಪ್ರಚೋದನಕಾರಿ ವಿಡಿಯೋ ಪೋಸ್ಟ್:

ಭಾರತೀಯ ಮುಸ್ಲಿಮರು ಸೇನೆಯನ್ನು ಬೆಂಬಲಿಸಿ, ಪಹಲ್ಗಾಂ ದಾಳಿಯನ್ನು ಖಂಡಿಸುವುದನ್ನು ಬೋಧಕರೊಬ್ಬರು ಟೀಕಿಸಿದ ವಿಡಿಯೋವನ್ನು ಅನ್ಸಾರಿ ಪೋಸ್ಟ್ ಮಾಡಿದ್ದಳು. ಲಾಹೋರ್‌ನ ಲಾಲ್ ಮಸೀದಿಯ ಇಮಾಮ್ ಅಬ್ದುಲ್ ಅಜೀಜ್, ಸಶಸ್ತ್ರ ಕ್ರಾಂತಿಯ ಮೂಲಕ ಭಾರತದಲ್ಲಿ ಖಿಲಾಫತ್ ವ್ಯವಸ್ಥೆಯನ್ನು ಸ್ಥಾಪಿಸುವ ಬಗ್ಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಳು. 

ಅಲ್‌ ಖೈದಾ ನಾಯಕನೊಬ್ಬ ‘ಘಜ್ವಾ-ಎ-ಹಿಂದ್’ ಕುರಿತು ಮಾತನಾಡುವ ಮತ್ತು ಹಿಂದೂ ಸಮುದಾಯ ಹಾಗೂ ಪ್ರಜಾಸತ್ತಾತ್ಮಕ ಆಡಳಿತದ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಕರೆಗಳನ್ನು ನೀಡುವ 3ನೇ ವಿಡಿಯೋವನ್ನು ಹಂಚಿಕೊಂಡಿದ್ದಳು ಎಂದು ಎಟಿಎಸ್‌ ತಿಳಿಸಿದೆ.

ಇನ್‌ಸ್ಟಾಗ್ರಾಂ ಮೂಲಕ ಪ್ರಚೋದನಕಾರಿ ವಿಚಾರಗಳನ್ನು ಹಂಚಿಕೊಂಡ ಆರೋಪದಲ್ಲಿ ಇತ್ತೀಚೆಗಷ್ಟೆ ನಾಲ್ವರನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಂಧಿಸಲಾಗಿತ್ತು. ಆ ಪೈಕಿ ಒಬ್ಬನ ಜೊತೆ ಅನ್ಸಾರಿ ಸಂಪರ್ಕದಲ್ಲಿದ್ದಳು ಎಂದು ತಿಳಿದುಬಂದಿದೆ. ಐವರ ವಿರುದ್ಧವೂ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ