ಸಂವಿಧಾನಕ್ಕೆ ಕಾಂಗ್ರೆಸ್ ಅಪಚಾರ ಮಾಡಿದೆ. ಸಂವಿಧಾನ ಶಿಲ್ಪಿ ಡಾ। ಬಿ.ಆರ್. ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್ ಅವಮಾನಿಸಿತ್ತು. ಅಲ್ಲದೆ, ಕ್ರಾಂತಿಕಾರಿ ಬಸವಣ್ಣ ರಿಂದ ಸ್ಥಾಪಿತವಾದ ಅನುಭವ ಮಂಟಪವನ್ನೇ ಇಂದು ವಕ್ಫ್ ತನ್ನ ಆಸ್ತಿಯೆಂದು ಹೇಳಲಾರಂಭಿಸಿದೆ ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ
ನವದೆಹಲಿ: ಸಂವಿಧಾನಕ್ಕೆ ಕಾಂಗ್ರೆಸ್ ಅಪಚಾರ ಮಾಡಿದೆ. ಸಂವಿಧಾನ ಶಿಲ್ಪಿ ಡಾ। ಬಿ.ಆರ್. ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್ ಅವಮಾನಿಸಿತ್ತು. ಅಲ್ಲದೆ, ಕ್ರಾಂತಿಕಾರಿ ಬಸವಣ್ಣ ರಿಂದ ಸ್ಥಾಪಿತವಾದ ಅನುಭವ ಮಂಟಪವನ್ನೇ ಇಂದು ವಕ್ಫ್ ತನ್ನ ಆಸ್ತಿಯೆಂದು ಹೇಳಲಾರಂಭಿಸಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಅತನಾಡಿದ ಅವರು, ‘ಬಸವಣ್ಣನವರು ಪ್ರಜಾಪ್ರಭುತ್ವದ ತತ್ವಗಳನ್ನು ಬಿತ್ತಿದ ಅನುಭವ ಮಂಟಪವನ್ನು ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್‌ನ ಜಾತ್ಯಾತೀತತೆಯ ವಿಕೃತ ಬ್ರಾಂಡ್‌ನ ಪರಿಣಾಮವಾಗಿದೆ. ಪ್ರಜಾಪ್ರಭುತ್ವಕ್ಕೆ ಮಾದರಿ ಎನ್ನಬಹುದಾದ, ಕ್ರಾಂತಿಕಾರಿ ಬಸವಣ್ಣ ರಿಂದ ಸ್ಥಾಪಿತವಾದ ಅನುಭವ ಮಂಟಪವನ್ನೇ ಇಂದು ವಕ್ಫ್ ತನ್ನ ಆಸ್ತಿಯೆಂದು ಹೇಳಲಾರಂಭಿಸಿದೆ. ಕಾಂಗ್ರೆಸ್ ಸೆಕ್ಯುಲರಿಸಂ ದುರಂತ ಮಾದರಿಗೆ ಇದೊಂದು ಉದಾಹರಣೆ’ ಎಂದರು.‘
ಆರೆಸ್ಸೆಸ್ ಡಾ. ಅಂಬೇಡ್ಕರ್ ಅವರನ್ನು ವಿರೋಧಿಸಿತು ಎಂಬುದು ಸಂಪೂರ್ಣ ಸುಳ್ಳು. ಗಮನಾರ್ಹ ವಿಚಾರ ಎಂದರೆ ಅವರನ್ನು ಕಾಂಗ್ರೆಸ್ ಸೋಲಿಸಲು ಪ್ರಯತ್ನಿಸಿತು. ಆದರೆ ಆರ್‌ಎಸ್‌ಎಸ್ ಪ್ರಚಾರಕರು, ಅಂಬೇಡ್ಕರರ ಚುನಾವಣಾ ಏಜೆಂಟ್ ಆಗಿ ಕಾರ್ಯನಿರ್ವಹಿಸಿದರು’ ಎಂದು ಸ್ಮರಿಸಿದರು.‘1951ರಲ್ಲಿ ಸಂವಿಧಾನದ 1ನೇ ತಿದ್ದುಪಡಿ ಹಾಗೂ 1975ರಲ್ಲಿ ಸಂವಿಧಾನದ 356ನೇ ವಿಧಿಯ ದುರುಪಯೋಗಗಳು ಕಾಂಗ್ರೆಸ್ ಪಕ್ಷ ಸಂವಿಧಾನದ ಮೇಲೆ ನಡೆಸಿದ ಆಕ್ರಮಣಗಳು. ಆದದರೆ ಬಿಜೆಪಿ ಅವರ ದಾಳಿಗಳ ವಿರುದ್ಧ ಹೋರಾಡಿದೆ ಮತ್ತು ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಿದೆ’ ಎಂದು ಪ್ರಹಾರ ನಡೆಸಿದರು.
‘ನವೆಂಬರ್ 26, 1957 ರಂದು ದ್ರಾವಿಡ ಚಳವಳಿಯ ಪಿತಾಮಹ ಇವಿ ರಾಮಸ್ವಾಮಿ ನಾಯ್ಕರ್ ಅವರು ಸಂವಿಧಾನವನ್ನು ಸುಟ್ಟುಹಾಕಿದರು ಮತ್ತು ನಮ್ಮ ಪ್ರಜಾಪ್ರಭುತ್ವದ ಅಡಿಪಾಯವನ್ನು ಅವಮಾನಿಸಿದರು. ಇಂದು, ಡಿಎಂಕೆ, ಅವರ ನಿಷ್ಠ ಸೈದ್ಧಾಂತಿಕ ಅನುಯಾಯಿಗಳು, ಸಂವಿಧಾನದ ರಕ್ಷಕರು ಎಂದು ಧೈರ್ಯದಿಂದ ಹೇಳಿಕೊಳ್ಳುತ್ತಾರೆ. ಇದು ಬೂಟಾಟಿಕೆ ಅಲ್ಲವವೇ’ ಎಂದು ಪ್ರಶ್ನಿಸಿದರು.‘
1974ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ತಮಿಳುನಾಡಿನ ರಾಮೇಶ್ವರಂ ಕರಾವಳಿಯಲ್ಲಿ ಕಚ್ಚತೀವು ಎಂದು ಕರೆಯಲ್ಪಡುವ ಒಂದು ಪ್ರಮುಖ ಆಯಕಟ್ಟಿನ ದ್ವೀಪವನ್ನು ಶ್ರೀಲಂಕೆಗೆ ಬಿಟ್ಟುಕೊಟಟಿತು. ಅಗತ್ಯ ಸಾಂವಿಧಾನಿಕ ಪ್ರಕ್ರಿಯೆ ಅನುಸರಿಸದೇ ಸಂವಿಧಾನವನ್ನು ಗಾಳಿಗೆ ತೂರಲಾಯಿತು’ ಎಂದು ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.