ನವದೆಹಲಿ: 4 ವರ್ಷಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದ ನಟ ಸುಶಾಂತ್ ಸಿಂಗ್ರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಾರಾಷ್ಟ್ರದ ಮಾಜಿ ಸಿಎಂ, ಶಿವಸೇನೆ (ಯುಬಿಟಿ) ನಾಯಕ ಉದ್ದವ್ ಠಾಕ್ರೆ ಪುತ್ರ ಆದಿತ್ಯಗೆ ಮತ್ತೆ ತನಿಖೆ ಬಿಸಿ ಎದುರಾಗಿದೆ.
ದಿಶಾರನ್ನು ಅತ್ಯಾಚಾರ ಮಾಡಿ ಕೊಲ್ಲಲಾಗಿದೆ. ಪ್ರಭಾವಿಗಳಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯ ಠಾಕ್ರೆ ವಿರುದ್ಧ ಎಫ್‌ಐಆರ್ ದಾಖಲಾಗಬೇಕು. ಸಾವಿನ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ದಿಶಾ ತಂದೆ ಸತೀಶ್ ಸಾಲಿಯಾನ್ ಬುಧವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅಪಪ್ರಚಾರದ ಯತ್ನ: ಆದಿತ್ಯ
ತಮ್ಮ ಮೇಲಿನ ಆರೋಪಕ್ಕೆ ಉದ್ದವ್ ಪುತ್ರ ಆದಿತ್ಯ ಠಾಕ್ರೆ ಪ್ರತಿಕ್ರಿಯಿಸಿದ್ದು, ‘ ನನ್ನ ವಿರುದ್ಧ ಕಳೆದ 5 ವರ್ಷಗಳಿಂದ ಅಪಪ್ರಚಾರ ಮಾಡುವ ಪ್ರಯತ್ನ ನಡೆಯುತ್ತಿದೆ. ನ್ಯಾಯಾಲಯದಲ್ಲಿ ನಮ್ಮ ಪರ ವಾದ ಮಂಡಿಸುತ್ತೇವೆ.’ ಎಂದಿದ್ದಾರೆ.
ಬಾಲಿವುಡ್ ನಟಸುಶಾಂತ್ ಸಿಂಗ್ ರಜಪೂತ್ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ 2020ರ ಜೂ.8ರಂದು ಮುಂಬೈನ ಅಪಾರ್ಟ್‌ಮೆಂಟ್‌ವೊಂದರಲ್ಲಿ 14 ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಕೈವಾಡವಿದೆ ಎನ್ನುವ ಆರೋಪ ಕೇಳಿ ಬಂದಿತ್ತು.
ಬಿಜೆಪಿ ಕಿಡಿ: ಈ ವಿಚಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿದ್ದೂ, ಬಿಜೆಪಿ ಆದಿತ್ಯ ವಿರುದ್ಧ ಕಿಡಿ ಕಾರಿದ್ದು , ಸಾಲಿಯಾನ್ ತಂದೆ ಗ್ಯಾಂಗ್ ರೇಪ್ ಮತ್ತು ಕೊಲೆ ಮಾಡಲಾಗಿದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಅವರು ಹೆಸರಿಸಿರುವ ವ್ಯಕ್ತಿಗಳನ್ನು ಕಸ್ಟಡಿಗೆ ತೆಗೆದು ಕೊಂಡು ವಿಚಾರಣೆ ನಡೆಸಬೇಕು. ಆದಿತ್ಯ ಠಾಕ್ರೆ ಸತ್ಯವನ್ನು ಹೇಳಬೇಕು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು’ ಎಂದಿದೆ.