ದೇಶದ ಸರ್ವೋಚ್ಚ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಕುರಿತ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ತನ್ನ ಪೂರ್ವಾನುಮತಿ ಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಕುರಿತ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ತನ್ನ ಪೂರ್ವಾನುಮತಿ ಬೇಕಿಲ್ಲ, ಆದರೆ ಅಟಾರ್ನಿ ಜನರಲ್ ಅವರ ಒಪ್ಪಿಗೆ ಅಗತ್ಯ. ಅವರು ಒಪ್ಪಿಗೆ ನೀಡಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
''''ನೀವು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಹುದು. ಆದರೆ, ಈ ರೀತಿ ಪ್ರಕರಣ ದಾಖಲಿಸಲು ನಮ್ಮ ಅನುಮತಿ ಬೇಕಿಲ್ಲ, ಈ ಕುರಿತು ಅಟಾರ್ನಿ ಜನರಲ್ ಅವರಿಗೆ ಮನವಿ ಸಲ್ಲಿಸಿ, ಅವರು ಅನುಮತಿ ನೀಡಲಿದ್ದಾರೆ'''' ಎಂದು ನ್ಯಾಯಮೂರ್ತಿ ಬಿ.ಆರ್.ಗವಿ ಮತ್ತು ನ್ಯಾ. ಎ.ಜಿ.ಮಸೀಹ್ ಅವರ ಪೀಠವು ವಕೀಲರೊಬ್ಬರಿಗೆ ತಿಳಿಸಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ವಕ್ಫ್ ತಿದ್ದುಪಡಿ ಪ್ರಕರಣ ಮತ್ತು ವಿಧೇಯಕಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿಪಡಿಸುವ ವಿಚಾರ ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ನ್ಯಾಯಾಂಗವೇ ಕಾನೂನು ರೂಪಿಸುವುದಾದರೆ ಸಂಸತ್ತು, ವಿಧಾನಸಭೆಗಳೆಲ್ಲ ಯಾಕೆ ಬೇಕು? ಅವುಗಳನ್ನು ಬಂದ್ ಮಾಡುವುದೇ ಒಳಿತು ಎಂದು ಹೇಳಿದ್ದರು. ಜತೆಗೆ, ದೇಶದಲ್ಲಿ ನಡೆಯುತ್ತಿರುವ ನಾಗರಿಕ ನಾಗರಿಕ ಸಂಘರ್ಷಕ್ಕೆ ಸಿಜೆಐ ಕಾರಣ ಎಂದು ಆರೋಪಿಸಿದ್ದರು.
ದುಬೆ ಅವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಸಂಬಂಧ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡುವಂತೆ ಕೋರಿ ಅಟಾರ್ನಿ ಜನರಲ್ ಅವರಿಗೆ ಈಗಾಗಲೇ ವಕೀಲರೊಬ್ಬರು ಪತ್ರ ಬರೆದು ಮನವಿ ಮಾಡಿದ್ದಾರೆ.