ರಾಮಮಂದಿರಕ್ಕೆ ಚಿನ್ನ ಲೇಪಿತ ಬಾಗಿಲು ಅಳವಡಿಕೆ

KannadaprabhaNewsNetwork |  
Published : Jan 10, 2024, 01:45 AM ISTUpdated : Jan 10, 2024, 01:07 PM IST
Ram Mandir

ಸಾರಾಂಶ

ಅಯೋಧ್ಯೆಯಲ್ಲಿ ಸಾಗುವಾನಿ ಮರದ ಮೇಲೆ ಚಿನ್ನದ ಲೇಪನ ಮಾಡಲಾಗಿದೆ. ಮರುನಿರ್ಮಾಣದ ಕಾರ್ಯ ನಿರ್ವಹಿಸುತ್ತಿರುವ ಕಂಪನಿ ಮಾಹಿತಿ ನೀಡಿದ್ದು, ವಿಶ್ವದ ಪ್ರಮುಖ ಸ್ಥಳಗಳ ಮಾದರಿ ಆಧರಿಸಿ ಅಯೋಧ್ಯೆ ಅಭಿವೃದ್ಧಿ ಮಾಡಲಾಗುತ್ತಿದೆ.

ಅಯೋಧ್ಯೆ: ಜ.22ರಂದು ಉದ್ಘಾಟನೆಗೊಳ್ಳಲಿರುವ ಪವಿತ್ರ ರಾಮಮಂದಿರದ ಗರ್ಭಗುಡಿಗೆ ಚಿನ್ನ ಲೇಪಿತ ದ್ವಾರವನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.

ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿರುವ ಗರ್ಭಗೃಹಕ್ಕೆ ಈ ದ್ವಾರವನ್ನು ಅಳವಡಿಸಲಾಗಿದೆ. ಈ ದ್ವಾರವನ್ನು ಹೈದರಾಬಾದ್‌ ಮೂಲದ ಕುಶಲಕರ್ಮಿ ನಿರ್ಮಾಣ ಮಾಡಿದ್ದಾರೆ.
ಈ ದ್ವಾರದ ಮೇಲೆ ಆನೆಗಳು ಮತ್ತು ಕಮಲದ ಹೂಗಳ ಚಿತ್ರವನ್ನು ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಇದರ ನಿರ್ಮಾಣಕ್ಕಾಗಿ ಮಹಾರಾಷ್ಟ್ರದಿಂದ ಸಾಗುವಾನಿ ಮರಗಳನ್ನು ತರಲಾಗಿದ್ದು, ಇದರ ಮೇಲೆ ಸೂಕ್ಷ್ಮ ಕುಸರಿ ಕೆಲಸಗಳನ್ನು ಮಾಡಲಾಗಿದೆ. 

ಮೊದಲಿಗೆ ಈ ದ್ವಾರದ ಮೇಲೆ ತಾಮ್ರದ ಲೇಪನವನ್ನು ಮಾಡಿ, ಅದರ ಮೇಲೆ ಚಿನ್ನದ ಲೇಪನ ಮಾಡಲಾಗಿದೆ.ರಾಮಮಂದಿರ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಜ.22ರಂದು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದೆ.

ನಿತ್ಯ 3 ಲಕ್ಷ ಜನರ ತಾಳಿಕೊಳ್ಳುವಂತೆ ಅಯೋಧ್ಯೆ ಪುನರಾಭಿವೃದ್ಧಿ
ಪವಿತ್ರ ರಾಮಮಂದಿರ ಉದ್ಘಾಟನೆಯ ಬಳಿಕ ಅಯೋಧ್ಯೆಗೆ ಪ್ರತಿನಿತ್ಯ ಸುಮಾರು 3 ಲಕ್ಷ ಜನ ಭೇಟಿ ನೀಡಬಹುದು. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆ ನಗರವನ್ನು ಮರುನಿರ್ಮಾಣ ಮಾಡಲಾಗುತ್ತಿದೆ ಎಂದು ಈ ಜವಾಬ್ದಾರಿ ಹೊತ್ತಿರುವ ದೀಕ್ಷು ಕುಕ್ರೇಜಾ ಹೇಳಿದ್ದಾರೆ. 

ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿನ ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ದಟ್ಟಣೆಯನ್ನು ನಿವಾರಿಸಲು ಸಕಲ ಕ್ರಮ ಕೈಗೊಳ್ಳಲಾಗಿದೆ. ಧರ್ಮಶಾಲೆಗಳು (ವಿಶ್ರಾಂತಿ ಕೊಠಡಿ) ಮತ್ತು ಹೋಂಸ್ಟೇಗಳ ನಿರ್ಮಾಣದತ್ತ ಹೆಚ್ಚಿನ ಗಮನ ಹರಿಸಲಾಗಿದೆ.

 ಅಯೋಧ್ಯೆಯ ಮೊದಲ ಹಂತದ ಅಭಿವೃದ್ಧಿಯಲ್ಲಿ ಸಂಪರ್ಕ ಜಾಲದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.ಆಧ್ಯಾತ್ಮಿಕ್ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅಯೋಧ್ಯೆ ವಿಶ್ವದ ಪ್ರಮುಖ ಪ್ರವಾಸಿ ತಾಣವಾಗಬಹುದು. 

ಹೀಗಾಗಿ ಪ್ರವಾಸಿಗಳ ಸಂಖ್ಯೆಯು ಹೆಚ್ಚಬಹುದು. ಆದ್ದರಿಂದ ನಾವು ವಿಶಾಲವಾದ ರಸ್ತೆಗಳು, ಅಗತ್ಯ ಸೇತುವೆಗಳು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ಮಾಣ ಮಾಡಿದ್ದೇವೆ. 

ಇದಕ್ಕಾಗಿ ವಿದೇಶಗಳಲ್ಲಿರುವ ವ್ಯಾಟಿಕನ್‌ ಸಿಟಿ, ಜೆರುಸಲೇಂ ಮತ್ತು ಕಾಂಬೋಡಿಯಾ ಹಾಗೂ ಭಾರತದ್ದೇ ಸ್ಥಳಗಳಾದ ತಿರುಪತಿ ಮತ್ತು ಅಮೃತಸರಗಳನ್ನು ಅಧ್ಯಯನ ನಡೆಸಿದ್ದೇವೆ. ಬಳಿಕ ಅಯೋಧ್ಯೆ ನಿರ್ಮಾಣದ ಯೋಜನೆ ಸಿದ್ಧಪಡಿಸಲಾಗಿದೆ.

 ಮುಂದಿನ 10 ವರ್ಷಗಳಲ್ಲಿ 85 ಸಾವಿರ ಕೋಟಿ ರು. ವೆಚ್ಚದಲ್ಲಿ ಅಯೋಧ್ಯೆ ಹೊಸ ರೂಪ ಪಡೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳ ಜೊತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದ ಅಭಿವೃದ್ಧಿ ನಮ್ಮ ಗುರಿಯಾಗಿತ್ತು. 

ಈಗಾಗಲೇ ಇವುಗಳ ಉದ್ಘಾಟನೆಯಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯ ಜೊತೆಗೆ ನಾವು ಪರಿಸರದ ಉಳಿಸಿಕೊಳ್ಳುವ ನಿಟ್ಟಿನಲ್ಲೂ ಈ ಯೋಜನೆಯನ್ನು ರೂಪಿಸಿದ್ದೇವೆ ಎಂದು ಅವರು ಹೇಳಿದರು.

ಸಿ.ಪಿ.ಕುಕ್ರೇಜಾ ಆರ್ಕಿಟೆಕ್ಟ್‌ ಕಂಪನಿ ಅಯೋಧ್ಯೆ ಮರುನಿರ್ಮಾಣದ ಯೋಜನೆ ರೂಪಿಸಿದ್ದು, ಈ ಕಂಪನಿ ಈ ಮೊದಲು ದೆಹಲಿಯ ಏರೋಸಿಟಿ ಮತ್ತು ದ್ವಾರಕದ ಯಶೋಭೂಮಿಯನ್ನು ನಿರ್ಮಾಣ ಮಾಡಿತ್ತು.

ಮಂದಿರ ಉದ್ಘಾಟನೆ ದಿನ 31 ವರ್ಷದ ಮೌನ ವ್ರತ ಮುರಿಯಲಿರುವ 85ರ ವೃದ್ಧೆ: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗುವವರೆಗೂ ತಾನು ಮಾತನಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಕಳೆದ 31 ವರ್ಷದಿಂದ ‘ಮೌನ ವ್ರತ’ ತಾಳಿದ್ದ 85 ವರ್ಷದ ವೃದ್ಧೆಯೊಬ್ಬರು ಜ.22ರಂದು ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ದಿನ ತಮ್ಮ ವ್ರತ ಮುರಿಯಲಿದ್ದಾರೆ.

 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ದಿನದಂದೇ ಮಂದಿರಕ್ಕಾಗಿ ಮೌನ ವ್ರತ ತಾಳಿದ್ದ ಜಾರ್ಖಂಡ್‌ನ ಧನಬಾದ್‌ ನಿವಾಸಿ ಸರಸ್ವತಿ ದೇವಿ ಎಂಬ ವೃದ್ಧೆ ಅಯೋಧ್ಯೆಯಲ್ಲಿ ‘ಮೌನಿ ದೇವಿ’ ಎಂದೇ ಪ್ರಸಿದ್ಧರಾಗಿದ್ದಾರೆ.

ಈಗಾಗಲೇ ಮಂದಿರ ಉದ್ಘಾಟನೆಗೆ ಸರಸ್ವತಿ ಅಯೋಧ್ಯೆಗೆ ಆಗಮಿಸಿದ್ದಾರೆ. ಶ್ರೀರಾಮನ ಪರಭಕ್ತೆಯಾಗಿರುವ ಸರಸ್ವತಿ 1992ರಿಂದ ಕೇವಲ ಸಂಜ್ಞೆ ಮೂಲಕವೇ ಸಂವಹನ ನಡೆಸುತ್ತಿದ್ದಾರೆ. 

2020ರಿಂದ ದಿನಕ್ಕೆ ಒಂದು ಗಂಟೆ ಮಾತ್ರ ಮಾತನಾಡುತ್ತಿದ್ದರು. ಬಳಿಕ ಮಂದಿರ ಶಂಕುಸ್ಥಾಪನೆ ದಿನ ಪೂರ್ತಿ ಮೌನ ವ್ರತ ತಾಳಿದ್ದರು. ಮಂದಿರದ ಬಗ್ಗೆ ಅವರು ತುಂಬಾ ಉತ್ಸುಕರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಜ.22ಕ್ಕೆ ಉ.ಪ್ರದೇಶದ ಶಿಕ್ಷಣ ಸಂಸ್ಥೆಗಳಿಗೆ ರಜೆ: ಜ.22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ರಾಜ್ಯಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ. 

ಮಂಗಳವಾರ ಈ ಘೋಷಣೆ ಮಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜ.22 ರಂದು ಅಯೋಧ್ಯೆ ಮಂದಿರದ ಉದ್ಘಾಟನೆ ಕಾರ್ಯಕ್ರಮ ‘ರಾಷ್ಟ್ರೀಯ ಹಬ್ಬ’ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಅಂದು ರಾಜ್ಯದ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಬೇಕು ಎಂದು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ