ಶ್ರೀರಾಮನ ನೆಲೆ ವಾಸ್ತು ಶಿಲ್ಪದ ಅದ್ಭುತ

KannadaprabhaNewsNetwork | Updated : Jan 23 2024, 08:16 AM IST

ಸಾರಾಂಶ

ಅಯೋಧ್ಯೆ ರಾಮಮಂದಿರದಲ್ಲಿ 32 ಮೆಟ್ಟಿಲು ಏರಿದರೆ ಸಿಗಲಿದೆ ರಾಮದರ್ಶನ. ದೇಗುಲದ ಸುತ್ತಲೂ ಇವೆ ಐದು ಮಂಟಪಗಳು. ಇದನ್ನು ಸಂಪೂರ್ಣ ಅಚ್ಚುಕಟ್ಟಾಗಿ ವಾಸ್ತುಶಿಲ್ಪದ ನಿಯಮಗಳನ್ನು ಬಳಸಿ ನಿರ್ಮಿಸಲಾಗಿದೆ. ಈ ನಡುವೆ ಮಂದಿರಕ್ಕೆ ಮುಕೇಶ್‌ ಅಂಬಾನಿ 2.5 ಕೋಟಿ ರು. ದೇಣಿಗೆ ನೀಡಿದ್ದಾರೆ.

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ದೇಗುಲ ನವಯುಗದ ವಾಸ್ತುಶಿಲ್ಪದ ಅದ್ಭುತ ಎಂಬ ಹಿರಿಮೆ ಪಡೆದುಕೊಂಡಿದೆ. ಹಲವಾರು ತಾಂತ್ರಿಕ ಸವಾಲುಗಳನ್ನು ಮೆಟ್ಟಿ ಈ ದೇಗುಲ ತಲೆ ಎತ್ತಿರುವುದು ವಿಶೇಷ.

ಇಡೀ ದೇಗುಲ ಒಟ್ಟು ಮೂರು ಅಂತಸ್ತನ್ನು ಒಳಗೊಂಡಿದೆ. ದೇಗುಲಕ್ಕೆ ಬರುವ ಯಾತ್ರಿಕರು ಸಿಂಹದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಏರಿದರೆ ಅಲ್ಲಿ ಐದು ಮಂಟಪಗಳು ಸಿಗುತ್ತವೆ. 

ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಹಾಗೂ ಕೀರ್ತನೆ ಮಂಟಪ ಅವು. ಅಲ್ಲೇ ಒಂದು ಕಡೆ ಸೀತಾ ಬಾವಿ ಇದೆ. ಅದನ್ನು ಭಕ್ತಾದಿಗಳು ವೀಕ್ಷಣೆ ಮಾಡಬಹುದು.

ಈ ದೇಗಲ ನಾಗರ ಶೈಲಿಯಲ್ಲಿದೆ. ಪೂರ್ವದಿಂದ ಪಶ್ಚಿಮಕ್ಕೆ 380 ಅಡಿ ಉದ್ದ, 250 ಅಡಿ ಅಗಲ, 161 ಅಡಿ ಎತ್ತರವಿದೆ. ಪ್ರತಿಯೊಂದು ಮಹಡಿಯೂ 20 ಅಡಿ ಎತ್ತರವಿದ್ದು, ಒಟ್ಟಾರೆ 392 ಕಂಬಗಳು ಹಾಗೂ 44 ದ್ವಾರಗಳನ್ನು ಹೊಂದಿವೆ.ದೇಗುಲಕ್ಕೆ ಚೌಕಾಕಾರದ ಪರಿಧಿ ಇದೆ. 

ಇಂತಹ ಪರಿಧಿ ದಕ್ಷಿಣ ಭಾರತದಲ್ಲಿ ಮಾತ್ರ ಕಾಣ ಸಿಗುವಂತಹದ್ದು.ದೇಗುಲ ನಿರ್ಮಾಣ ವೇಳೆ ಎಂಜಿನಿಯರ್‌ಗಳಿಗೆ ಬಹುದೊಡ್ಡ ಅಡ್ಡಿಯೇ ಎದುರಾಗಿತ್ತು. 

ತೇವಾಂಶ ಇದ್ದ ಕಾರಣ ಅಲ್ಲಿ ಅಡಿಪಾಯ ಹಾಕುವುದೇ ಕಷ್ಟವಿತ್ತು. ಹೀಗಾಗಿ ಎಂಜಿನಿಯರ್‌ಗಳು ಕಲ್ಲುಗಳನ್ನು ಬಳಸಿ ಕೃತಕ ಅಡಿಪಾಯವನ್ನು ಹಾಕಿದರು ಎನ್ನುತ್ತಾರೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌.

ಸಿಂಹದ್ವಾರದ ಮೂಲಕ 32 ಮೆಟ್ಟಿಲು ಏರುವ ಸ್ಥಳದಲ್ಲಿ ಆನೆ, ಸಿಂಹ, ಹನುಮಂತ ಹಾಗೂ ಗರುಡ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಮರಳುಶಿಲೆಯಿಂದಲೇ ಈ ಮೂರ್ತಿಗಳನ್ನು ಕೆತ್ತಲಾಗಿದೆ ಎಂಬುದು ವಿಶೇಷ.

ಮಂದಿರಕ್ಕೆ ಮುಕೇಶ್‌ ಅಂಬಾನಿ ₹2.5 ಕೋಟಿ ದೇಣಿಗೆ

ಇಲ್ಲಿ ಉದ್ಘಾಟನೆಗೊಂಡ ನೂತನ ರಾಮ ಮಂದಿರಕ್ಕೆ ರಿಲಾಯನ್ಸ್‌ ಸಮೂಹ ಸಂಸ್ಥೆಯ ನಿರ್ದೇಶಕ ಮುಕೇಶ್‌ ಅಂಬಾನಿ ಅವರು 2.51 ಕೋಟಿ ರು, ದೇಣಿಗೆ ನೀಡಿದ್ದಾರೆ.

ಸೋಮವಾರ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಮುಕೇಶ್‌ ಅಂಬಾನಿ ಸೇರಿ ನೀತಾ ಅಂಬಾನಿ, ಆಕಾಶ್‌ ಅಂಬಾನಿ, ಪತ್ನಿ ಶ್ಲೋಕ ಅಂಬಾನಿ, ಬಾವಿ ಪತ್ನಿ ರಾಧಿಕಾ ಮರ್ಚೆಂಟ್‌ ಜೊತೆ ಅನಂತ್‌ ಹಾಗೂ ಇಷಾ ಅಂಬಾನಿ ದಂಪತಿಗಳು ಆಗಮಿಸಿದ್ದರು. 

ಇತ್ತೀಚೆಗೆ ಕೇದಾರನಾಥ ಹಾಗೂ ಬದರೀನಾಥಕ್ಕೆ ತೆರಳಿದ್ದ ಮುಕೇಶ್‌ ಎರಡೂ ಕಡೆಗೂ ತಲಾ 2.5 ಕೋಟಿ ರು. ದೇಣಿಗೆ ನೀಡಿದ್ದರು.

Share this article