-42 ಅಡಿ ಎತ್ತರದ ಸ್ತಂಭದ ಮೇಲೆ, 10 ಅಡಿ ಎತ್ತರದ ಧ್ವಜ
-ಭಾಗ್ವತ್ ಸೇರಿ ಗಣ್ಯರ ಸಮ್ಮುಖದಲ್ಲಿ ಮೋದಿ ಧ್ವಜಾರೋಹಣ-ಸೋನಭದ್ರ ಬುಡಕಟ್ಟು ಸಮುದಾಯಕ್ಕೆ ವಿಶೇಷ ಆಹ್ವಾನ-ಬಾಬ್ರಿ ಮಸೀದಿ ವ್ಯಾಜ್ಯಗಾರನ ಪುತ್ರಗೂ ವಿಶೇಷ ಆಮಂತ್ರಣ
ಅಯೋಧ್ಯೆ: ಇಲ್ಲಿನ ಭವ್ಯ ರಾಮಮಂದಿರದ ನಿರ್ಮಾಣಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಮಂಗಳವಾರ ಅಭಿಜಿತ್ ಲಗ್ನದ ಶುಭ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಡಾ. ಮೋಹನ್ ಭಾಗ್ವತ್ ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಆರೋಹಣ ಮಾಡಿದರು. ಈ ವೇಳೆ ಪ್ರಧಾನಿ ಕೊಂಚ ಭಾವುಕರಾದಂತೆ ಕಂಡುಬಂದರು.ಧ್ವಜದ ವಿಶೇಷತೆ:ಶಿಖರದ ಮೇಲೆ ಸ್ಥಾಪಿಸಲಾದ 42 ಅಡಿ ಎತ್ತರದ ಧ್ವಜಸ್ತಂಭವನ್ನು 360 ಡಿಗ್ರಿ ತಿರುಗುವಂತೆ ವಿನ್ಯಾಸಗೊಳಿಸಲಾಗಿದೆ. ಧ್ವಜವು ಕೇಸರಿ ಬಣ್ಣ ಹಾಗೂ ತ್ರಿಕೋನಾಕೃತಿಯಲ್ಲಿದೆ. 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿದೆ. ಇದರ ಮೇಲೆ ಸೂರ್ಯ, ‘ಓಂ’ ಹಾಗೂ ಕೋವಿದಾರ ಮರವನ್ನು ಚಿತ್ರಿಸಲಾಗಿದೆ. ‘ಓಂ’ ಶುಭಸೂಚಕವಾದರೆ, ಸೂರ್ಯನ ಚಿತ್ರ ರಾಮನ ವಂಶವಾದ ಸೂರ್ಯವಂಶವನ್ನು ಸೂಚಿಸುತ್ತದೆ. ಕೋವಿದಾರ ವೃಕ್ಷವು ತ್ರೇತಾಯುಗದಲ್ಲಿ ಅಯೋಧ್ಯೆಯ ರಾಜಲಾಂಛನವಾಗಿತ್ತು. ಭರತನ ಸೈನ್ಯದ ಧ್ವಜದ ಮೇಲೂ ಇದನ್ನು ಚಿತ್ರಿಸಲಾಗಿತ್ತು. ಹಾಗಾಗಿ ರಾಮರಾಜ್ಯದ ಪ್ರತೀಕವಾಗಿ ಧ್ವಜದ ಮೇಲೆ ಇದನ್ನು ಚಿತ್ರಿಸಲಾಗಿದೆ. ಬಿಸಿಲು, ಮಳೆ ಮತ್ತು ಗಾಳಿಯ ವಿರುದ್ಧ ಬಾಳಿಕೆ ಬರುವಂಥ ರೇಷ್ಮೆ ದಾರಗಳು ಮತ್ತು ಪ್ಯಾರಾಚೂಟ್ ದರ್ಜೆಯ ಬಟ್ಟೆಯನ್ನು ಬಳಸಿ ಧ್ವಜವನ್ನು ತಯಾರಿಸಲಾಗಿದೆ.
ವನವಾಸಿಗಳೇ ವಿಶೇಷ ಆಹ್ವಾನಿತರು:ಶ್ರೀರಾಮ 14 ವರ್ಷಕಾಲ ವನವಾಸದಲ್ಲಿದ್ದಾಗ ಬುಡಕಟ್ಟು ಜನರೇ ಆತನ ಒಡನಾಡಿಗಳಾಗಿದ್ದರು. ಹಾಗಾಗಿ ಕಾರ್ಯಕ್ರಮಕ್ಕೆ ಸೋನಭದ್ರ ಬುಡಕಟ್ಟು ಸಮುದಾಯ ಪ್ರತಿನಿಧಿಗಳನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಬಾಬ್ರಿ ಮಸೀದಿ ಪ್ರಕರಣದ ಮುಖ್ಯ ವ್ಯಾಜ್ಯದಾರನ ಪುತ್ರನೂ ವಿಶೇಷ ಆಹ್ವಾನಿತರಾಗಿದ್ದು ಗಮನ ಸೆಳೆಯಿತು.==
ಆಧುನಿಕ ತಂತ್ರಜ್ಞಾನ ಬಳಸಿ ಧ್ವಜಾರೋಹಣಮೋದಿ ಬಟನ್ ಒತ್ತುತ್ತಲೇ ಮೇಲೇರಿದ ಧ್ವಜ
10 ಸೆಕೆಂಡ್‌ನಲ್ಲಿ 191 ಅಡಿ ಎತ್ತರಕ್ಕೆ ರವಾನೆ
ಅಯೋಧ್ಯೆ: ಮಂಗಳವಾರ ಅಯೋಧ್ಯೆಯ ರಾಮಮಂದಿರದಲ್ಲಿ ಸಾಂಪ್ರದಾಯಿಕ ವಿಧಾನದ ಬದಲಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಧ್ವಜಾರೋಹಣ ಮಾಡಲಾಯಿತು. ಕೈಯಿಂದ ಹಗ್ಗವನ್ನು ಎಳೆಯುವ ಬದಲಿಗೆ, ವೇದಿಕೆಯಲ್ಲಿ ನಮಸ್ಕಾರ ಮುದ್ರೆಯಲ್ಲಿರುವ ಬಟನ್ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ಮೋದಿ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಮಸ್ಕಾರ ಮುದ್ರೆಯ ಸಾಂಕೇತಿಕ ಕೈಯನ್ನು ತಿರುಗಿಸಿ ಬಟನ್ ಒತ್ತಿದರು. ಇದರಿಂದ ಕಂಪ್ಯೂಟರ್ ನಿಯಂತ್ರಿತ ಸ್ವಯಂಚಾಲಿತ ವ್ಯವಸ್ಥೆ ಕಾರ್ಯಗತಗೊಂಡು ಕೇವಲ 10 ಸೆಕೆಂಡ್‌ಗಳಲ್ಲಿ ದೇವಾಲಯದ 191 ಅಡಿ ಗೋಪುರದ ತುದಿಯವರೆಗೆ ಧ್ವಜ ಏರಿತು. ಸೇನಾ ಅಧಿಕಾರಿಗಳ ಸಲಹೆಯಂತೆ ಈ ಧ್ವಜಸ್ತಂಭವನ್ನು ವಿನ್ಯಾಸಗೊಳಿಸಲಾಗಿತ್ತು. ಇದರಲ್ಲಿ 360 ಡಿಗ್ರಿ ತಿರುಗಬಲ್ಲ ಬಾಲ್ ಬೇರಿಂಗ್ ವ್ಯವಸ್ಥೆಯಿದ್ದು, ಗಾಳಿಯ ದಿಕ್ಕಿನೊಂದಿಗೆ ಧ್ವಜ ಸುಲಭವಾಗಿ ತಿರುಗುತ್ತದೆ. ಧ್ವಜವು ಗಂಟೆಗೆ 60 ಕಿ.ಮೀ. ವೇಗದವರೆಗಿನ ಗಾಳಿಯನ್ನೂ ತಡೆದುಕೊಳ್ಳಬಲ್ಲದು.==
ಮೂಡುಬಿದಿರೆಯ ರಾಜೇಶ್ ಶೆಟ್ಟಿ ವಿದ್ಯುತ್ ದೀಪಾಲಂಕಾರ- ಪ್ರಾಣ ಪ್ರತಿಷ್ಠೆ ವೇಳೆಯೂ ಇವರದ್ದೇ ದೀಪಾಲಂಕಾರಅಯೋಧ್ಯೆ: ಇಲ್ಲಿನ ರಾಮ ಮಂದಿರಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಬಾಲರಾಮನ ಶಿಲೆ, ಅದರ ಶಿಲ್ಪಿ, ಪೇಜಾವರ ಶ್ರೀಗಳು ಸೇರಿ ಈಗ ಇನ್ನೊಂದು ಕಿರೀಟ ಕರ್ನಾಟಕದ ಮುಡಿಗೇರಿದೆ. ಪ್ರಾಣ ಪ್ರತಿಷ್ಠೆ ಮತ್ತು ಮಂಗಳವಾರ ಜರುಗಿದ ಧ್ವಜಾರೋಹಣದ ಹಿಂದಿನ ದಿನದ ವಿದ್ಯುತ್ ದೀಪಾಲಂಕಾರದ ಹೊಣೆಯನ್ನು ಕನ್ನಡಿಗ ರಾಜೇಶ್ ಶೆಟ್ಟಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ ರಾಜೇಶ್ ಶೆಟ್ಟಿ ಅವರು ಶಂಕರ್ ಎಲೆಕ್ಟ್ರಿಕಲ್ಸ್ ಸರ್ವೀಸಸ್ ಇಂಡಿಯಾ ಪ್ರೈ.ಲಿ ಕಂಪನಿ ಮೂಲಕ ರಾಮ ಮಂದಿರಕ್ಕೆ ವಿದ್ಯುತ್ ದೀಪದ ಅಲಂಕಾರ ನಿರ್ವಹಿಸಿದ್ದಾರೆ. ಈ ಸೋಮವಾರ ದೇಗುಲದ ಗೋಪುರದಲ್ಲಿ ಪ್ರದರ್ಶನಗೊಂಡ ಸೀತಾರಾಮ ವಿವಾಹ, ಎಲ್‌ಇಡಿ ಸೇರಿ ಇತರೆ ವಿದ್ಯುತ್ ದೀಪಾಲಂಕಾರಗಳನ್ನು ಇವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
==