ಅಯೋಧ್ಯಾ: ಭಾರೀ ಮಳೆಗೆ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ರಾಮಪಥ ರಸ್ತೆಯಲ್ಲಿ ಗುಂಡಿ ಬಿದ್ದು, ರಸ್ತೆ ಜಲಾವೃತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಲೋಕೋಪಯೋಗಿ ಮತ್ತು ಜಲ ನಿಗಮದ ಒಟ್ಟು ಆರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೂನ್ 23 ಮತ್ತು 25 ರಂದು ಮಳೆಯ ನೀರಿಗೆ ರಾಮಪಥ ಜಲಾವೃತವಾಗಿತ್ತು. ಅಲ್ಲದೇ ರಸ್ತೆ ಅಕ್ಕಪಕ್ಕದ ಮನೆಗಳಿಗೂ ಮಳೆಯ ನೀರು ನುಗ್ಗಿತ್ತು. 14 ಕಿ.ಮೀ ವಿಸ್ತರಣೆಯ ರಸ್ತೆಯಲ್ಲಿ 12ಕ್ಕೂ ಹೆಚ್ಚು ಕಡೆ ಗುಂಡಿ ಬಿದ್ದಿತ್ತು. ‘ರಾಮಪಥ ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ಅದರ ಮೇಲಿನ ಪದರವು ಹಾನಿಗೊಳಗಾಗಿದೆ.
ಉತ್ತರ ಪ್ರದೇಶ ಸರ್ಕಾರ ಪ್ರಮುಖ ಆದ್ಯತೆಯಡಿಯಲ್ಲಿ ಮಾಡಿದ ಕೆಲಸದಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ಇದರಿಂದ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಮುಂದೆ ಹೆಚ್ಚಿನ ತನಿಖೆ ನಡೆಯಲಿದೆ’ ಎಂದು ಲೋಕೋಪಯೋಗಿ ಪ್ರಧಾನ ಕಾರ್ಯದರ್ಶಿ ಅಜಯ್ ಚೌಹಾಣ್ ಇಲಾಖೆಯ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ದಿಲ್ಲಿ ಏರ್ಪೋರ್ಟ್ ಛಾವಣಿ ಕುಸಿತ: ದೇಶದ ಎಲ್ಲಾ ನಿಲ್ದಾಣ ಪರಿಶೀಲನೆಗೆ ಕೇಂದ್ರ ಆದೇಶ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಗುಜರಾತ್‌ನ ರಾಜಕೋಟ್ ವಿಮಾನ ನಿಲ್ದಾಣ ಛಾವಣಿ ಕುಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಎಚ್ಚೆತ್ತಿದ್ದು, ದೇಶಾದ್ಯಂತ ಇರುವ ಎಲ್ಲಾ ಸಣ್ಣ ಹಾಗೂ ದೊಡ್ಡ ವಿಮಾನ ನಿಲ್ದಾಣಗಳಿಗೆ ಕಟ್ಟಡಗಳ ವಸ್ತುಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ 2-5 ದಿನದಲ್ಲಿ ವರದಿ ಸಲ್ಲಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿದೆ. ವಿಮಾನ ನಿಲ್ದಾಣಗಳು ಸಲ್ಲಿಸುವ ವರದಿ ಬಳಿಕ ಭದ್ರತೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮತ್ತೊಂದೆಡೆ ದೆಹಲಿಯಲ್ಲಿ ವಿಮಾನ ನಿಲ್ದಾಣ ಕುಸಿತದ ಕಾರಣ ಯಾವುದೇ ವಿಮಾನಯಾನ ಕಂಪನಿಗಳು ಟಿಕೆಟ್ ದರದಲ್ಲಿ ಏರಿಕೆ ಮಾಡಬಾರದು ಎಂದು ಸಚಿವಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.