ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರಕ್ಕೆ ಸುರಕ್ಷತೆ ನಿರ್ವಹಣೆಗೆ ಕೊಡಲಾಗುವ ಅತ್ಯುನ್ನತ ಪುರಸ್ಕಾರವಾದ ‘ಸ್ವೋರ್ಡ್ ಆಫ್ ಆನರ್’ ಪ್ರಶಸ್ತಿ ಲಭಿಸಿದೆ.
ಇದನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿರುವ ನೃಪೇಂದ್ರ ಮಿಶ್ರಾ ಧೃಡಪಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಸ್ವೋರ್ಡ್ ಆಫ್ ಆನರ್ ಪ್ರಶಸ್ತಿಯನ್ನು ಬ್ರಿಟಿಷ್ ಸುರಕ್ಷತಾ ಸಮಿತಿ ನೀಡುತ್ತದೆ. ಈ ಪ್ರಶಸ್ತಿ ಪಡೆಯಲು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ‘5 ಸ್ಟಾರ್ ’ಪಡೆಯುವುದು ಅಗತ್ಯವಾಗಿದೆ.
ಅಂತೆಯೇ, ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಬಹುರಾಷ್ಟ್ರೀಯ ಕಂಪನಿಯಾದ ಲಾರ್ಸೆನ್ & ಟೂಬ್ರೊಗೆ ನಿರ್ಮಾಣದ ವೇಳೆ ತೆಗೆದುಕೊಂಡ ಸುರಕ್ಷತಾ ಕ್ರಮಗಳಿಗಾಗಿಯೂ ರಾಷ್ಟ್ರೀಯ ಸುರಕ್ಷತಾ ಮಂಡಳಿ ‘ಗೋಲ್ಡನ್ ಟ್ರೋಫಿ’ ನೀಡಲಿದೆ.
ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ಲಾರ್ಸೆನ್ & ಟೂಬ್ರೊ ಹಾಗೂ ಟಾಟಾ ಕನ್ಸಲ್ಟಿಂಗ್‌ನ ಎಂಜಿನಿಯರ್‌ಗಳು ರಾಮ ಮಂದಿರದ ನಿರ್ಮಾಣ ಮಾಡತ್ತಿದ್ದಾರೆ.
ಅಡ್ವಾಣಿ ಆರೋಗ್ಯ ಸ್ಥಿರ, ಶೀಘ್ರ ಡಿಸ್‌ಚಾರ್ಜ್ ಸಂಭವ
ನವದೆಹಲಿ: ಶನಿವಾರ ಇಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯ ಸ್ಥಿರವಾಗಿದೆ. ಅವರ ತಪಾಸಣೆ ಫಲಿತಾಂಶ ಪರಿಶೀಲಿಸಿದ ನಂತರ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ ಎಂದು ಆಸ್ಪತ್ರೆ ಮೂಲಗಳು ಭಾನುವಾರ ತಿಳಿಸಿವೆ. 97 ವರ್ಷದ ಅಡ್ವಾಣಿ, ವಯಸ್ಸಿಗೆ ಸಂಬಂಧಿಸಿದ ಮತ್ತು ನರವೈಜ್ಞಾನಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಹಾಗೂ ಐಸಿಯನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪೋಲೋ ನ್ಯೂರೋ ವಿಭಾಗದ ಹಿರಿಯ ತಜ್ಞ ಡಾ ವಿನೀತ್ ಸೂರಿ ಅವರು ಅಡ್ವಾಣಿ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ.
10 ದಿನದಲ್ಲಿ ಪುಷ್ಪ-2 ಭರ್ಜರಿ ₹1292 ಕೋಟಿ ಕಲೆಕ್ಷನ್
ಹೈದರಾಬಾದ್: ಬಿಡುಗಡೆಯಾದ ದಿನದಿಂದಲೂ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಸಿನಿಮಾ ಯಶಸ್ವಿಯಾಗಿ ಮುನ್ನುಗುತ್ತಿದೆ. ಕೇವಲ 10 ದಿನದಲ್ಲಿಯೇ ₹1292 ಕೋಟಿ ಕಲೆಕ್ಷನ್ ಮಾಡಿದ್ದು ಜವಾನ್, ಕೆಜಿಎಫ್- 2 ಸಿನಿಮಾದ ದಾಖಲೆ ಮೀರಿಸಿದೆ.
ಈ ಬಗ್ಗೆ ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು,‘2024ರಲ್ಲಿ ಭಾರತೀಯ ಚಿತ್ರರಂಗದ ಅತಿಹೆಚ್ಚು ಗಳಿಕೆ. ವಿಶ್ವದಾದ್ಯಂತ 10 ದಿನಗಳಲ್ಲಿ 1292 ಕೋಟಿ ರು.’ ಎಂದು ಬರೆದುಕೊಂಡಿದೆ.ಶನಿವಾರದವರೆಗಿನ ಬಾಕ್ಸ್ ಆಫೀಸ್ ಲೆಕ್ಕಾಚಾರದ ಪ್ರಕಾರ ಈಗಾಗಲೇ ಪುಷ್ಪ-2 ಸಿನಿಮಾ ಶಾರುಖ್ ಅಭಿನಯದ ಜವಾನ್, ಯಶ್ ಅಭಿನಯದ ಕೆಜಿಎಫ್ ಸಿನಿಮಾವನ್ನು ಮೀರಿಸಿದ್ದು, ರಾಜಾಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ದಾಖಲೆ ಮುರಿಯುವ ತವಕದಲ್ಲಿದೆ.
ಅಲ್ಲು ಅರ್ಜುನ್ ಬಂಧನ, ಬಿಡುಗಡೆ ಬಳಿಕದ ಮೊದಲ ದಿನದಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದ್ದುಶುಕ್ರವಾರ ಸಿನಿಮಾ 51 ಕೋಟಿ ರು. ಸಂಪಾದಿಸಿದ್ದರೆ, ಶನಿವಾರ 86 ಕೋಟಿ ರು. ಗಳಿಕೆ ಮಾಡಿದೆ ಎನ್ನಲಾಗಿದೆ.
ಚಳಿಗೆ ಉತ್ತರ ಭಾರತ ಗಡಗಡ!
ನವದೆಹಲಿ: ಈ ಬಾರಿಯ ಚಳಿಗಾಲದಲ್ಲಿ ಉತ್ತರ ಭಾರತ ಅಕ್ಷರಶಃ ನಡುಗತೊಡಗಿದೆ. ರಾಷ್ಟ್ರ ರಾಜಧಾನಿ ದೆಹಲಿ, ಬಿಸಿಲಿಗೆ ಹೆಸರಾಗಿರುವ ರಾಜಸ್ಥಾನ ಹಾಗೂ ಈಶಾನ್ಯ ರಾಜ್ಯ ಒಡಿಶಾ ರಾಜ್ಯಗಳಲ್ಲಿ ಭಾನುವಾರ ತಾಪಮಾನ ತೀರಾ ಕುಸಿದಿದೆ.
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ -5 ಡಿಗ್ರಿ ಇದೆ. ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ಶೀತ ಅಲೆಯಿದ್ದು, ಫತೇಪುರದಲ್ಲಿ ತಾಪಮಾನ ಸತತ 3ನೇ ದಿನವೂ ಶೂನ್ಯಕ್ಕಿಂತ ಕೆಳಗೆ ಕುಸಿದು -1.2 ಡಿ.ಸೆ. ತಲುಪಿದೆ. ರಾಜ್ಯದ ಹಲವು ಕಡೆಗಳಲ್ಲಿ ತಾಪಮಾನ 10 ಡಿ.ಸೆ.ಗಿಂತ ಕೆಳಗಿಳಿದಿದೆ.ಒಡಿಶಾದ ಉತ್ತರ ಭಾಗದಲ್ಲಿ ಶೀತದ ಅಲೆಯಿಂದಾಗಿ ಮಿತಿ ಮೀರಿದ ಚಳಿಯಿದ್ದು, ಮಯೂರ್‌ಭಂಜ್‌ನ ರಾಮತೀರ್ಥದಲ್ಲಿ ತಾಪಮಾನ 3 .ಡಿಗ್ರಿ ವರದಿಯಾಗಿದೆ. ಇದು ರಾಜ್ಯದ ಈ ಸೀಸನ್‌ನ ಅತಿ ಕನಿಷ್ಠ.
ಇನ್ನು ದೆಹಲಿಯಲ್ಲಿ ತಾಪಮಾನ 4.5 ಡಿ.ಸೆ.ಗೆ ಇಳಿದಿದೆ. ಇದು ಈ ಚಳಿಗಾಲದ ಅತಿ ಕಡಿಮೆ ತಾಪಮಾನ. ಅತ್ತ ದೆಹಲಿಯ ವಾಯುಗುಣಮಟ್ಟವೂ ಕಳಪೆಯಾಗಿದ್ದು, 257 ಅಂಕ ಪಡೆದಿದೆ.
2026ರ ಮಾರ್ಚ್‌ನಲ್ಲಿ ಭಾರತ ನಕ್ಸಲಿಸಂ ಮುಕ್ತ: ಅಮಿತ್ ಶಾಜಗದಲ್ಪುರ(ಛತ್ತೀಸ್‌ಗಢ): ಮುಂದಿನ 2026ರ ಮಾರ್ಚ್ ತಿಂಗಳೊಳಗೆ ದೇಶವು ನಕ್ಸಲಿಸಂನಿಂದ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.‘ಬಸ್ತರ್ ಒಲಿಂಪಿಕ್ಸ್''''''''ನಲ್ಲಿ ಭಾನುವಾರ ಮಾತನಾಡಿದ ಅವರು, ನಕ್ಸಲರು ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗಬೇಕು, ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮುಖ್ಯವಾಹಿನಿಗೆ ಬರುವ ನಕ್ಸಲರ ಪುನರ್ವಸತಿಯ ಹೊಣೆ ಸರ್ಕಾರಕ್ಕೆ ಸೇರಿದ್ದು. ಮಾ.31, 2026ರೊಳಗೆ ನಕ್ಸಲಿಸಂ ಅನ್ನು ಛತ್ತೀಸ್‌ಗಡದಿಂದ ಬುಡಸಮೇತ ಕಿತ್ತುಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಬದ್ಧವಾಗಿವೆ. ಒಮ್ಮೆ ಛತ್ತೀಸ್‌ಗಡ ನಕ್ಸಲಿಸಂನಿಂದ ಮುಕ್ತವಾದರೆ, ಇಡೀ ದೇಶ ಕೂಡ ಈ ಪಿಡುಗಿನಿಂದ ಮುಕ್ತವಾಗಲಿದೆ’ ಎಂದರು.
ಮುಷ್ತಾಕ್ ಅಲಿ ರೀತಿ ಶಕ್ತಿ ಕಪೂರ್ ಅಪಹರಣಕ್ಕೂ ಸಂಚು ರೂಪಿಸಿದ್ದ ಗ್ಯಾಂಗ್
ಬಿಜ್ನೋರ್/ಮೇರಠ್ (ಯುಪಿ): ಸ್ತ್ರೀ-2 ಖ್ಯಾತಿಯ ನಟ ಮುಷ್ತಾಕ್ ಅಲಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು. ಮುಷ್ತಾಕ್ ಅಲಿಯನ್ನು ಅಪಹರಿಸಿದ ರೀತಿಯಲ್ಲಿಯೇ ಹಿರಿಯ ನಟ ಶಕ್ತಿ ಕಪೂರ್ ಅಪಹರಣಕ್ಕೆ ತಂಡ ಸಂಚು ರೂಪಿಸಿತ್ತು ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.ನ.20ರಂದು ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ಮುಷ್ತಾಕ್ ಅಲಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ನಟ ನೀಡಿದ ದೂರಿನನ್ವಯ ತನಿಖೆಗಿಳಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರ ವಿಚಾರಣೆ ವೇಳೆ ಈ ತಂಡ ಹಿರಿಯ ನಟ ಶಕ್ತಿ ಕಪೂರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ನೆಪದಲ್ಲಿ ಅಪಹರಣಕ್ಕೆ ಸಂಚು ರೂಪಿಸಿದ್ದರು. ಇದೇ ರೀತಿ ಕಾರ್ಯಕ್ರಮಕ್ಕೆ ಬರಲು 5 ಲಕ್ಷ ರು. ನೀಡಲಾಗಿತ್ತು. ಆದರೆ ಹೆಚ್ಚಿನ ಮುಂಗಡ ಹಣದ ಬೇಡಿಕೆಯಿಂದ ಒಪ್ಪಂದ ಮುರಿದು ಬಿದ್ದಿತ್ತು ಎನ್ನುವುದು ಬಯಲಾಗಿದೆ. ಇನ್ನು ಈ ತಂಡ ಇತರ ನಟ- ನಟಿಯರ ಅಪಹರಣ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.