ರಾಮಂಪುರ: ನಕಲಿ ಜನನ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್, ಅವರ ಪತ್ನಿ ತಜೀನ್ ಫಾತಿಮಾ ಮತ್ತು ಪುತ್ರ ಅಬ್ದುಲ್ಲಾ ಆಜಂ ಅವರಿಗೆ ಇಲ್ಲಿನ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಮೂವರನ್ನೂ ಸಹ ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡು ರಾಂಪುರ ಜಿಲ್ಲಾ ಜೈಲಿಗೆ ವರ್ಗಾಯಿಸಲಾಗಿದೆ. ತೀರ್ಪಿನ ಬಳಿಕ ಜೈಲಿಗೆ ತೆರಳುವ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆಜಂ ಖಾನ್, ಇಂದು ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ನಿರ್ಧಾರಕ್ಕೂ, ನ್ಯಾಯಕ್ಕೂ ವ್ಯತ್ಯಾಸವಿದೆ ಎಂದು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಏನಿದು ಪ್ರಕರಣ?: ತಮ್ಮ ಪುತ್ರ ಅಬ್ದುಲ್ಲಾ ಆಜಂಗೆ ನಕಲಿ ಪ್ರಮಾಣ ಪತ್ರ ಪಡೆದುಕೊಳ್ಳಲು ಆಜಂ ಖಾನ್ ಮತ್ತು ಅವರ ಪತ್ನಿ ನೆರವು ನೀಡಿದ್ದಾರೆ. ಅಬ್ದುಲ್ಲಾಗೆ ರಾಂಪುರ ಮುನ್ಸಿಪಲ್‌ನಲ್ಲಿ 1993ರ ಜ.1ರಂದು ಜನ್ಮತಾಳಿದ್ದರ ಬಗ್ಗೆ ಪ್ರಮಾಣ ಪತ್ರ ನೀಡಿದ್ದರೆ, ಲಖನೌದಲ್ಲಿ ನೀಡಿದ ಪ್ರಮಾಣ ಪತ್ರದಲ್ಲಿ ಜನ್ಮದಿನಾಂಕವನ್ನು 1990ರ ಸೆ.30 ಎಂದು ನಮೂದಿಸಲಾಗಿದೆ ಎಂದು ಬಿಜೆಪಿ ಶಾಸಕ ಅಕ್ಷಯ್ ಸಕ್ಸೇನಾ 2019ರಲ್ಲಿ ದೂರು ನೀಡಿದ್ದರು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ಬುಧವಾರ ಮೂವರಿಗೂ ತಲಾ 7 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಅಬ್ದುಲ್ಲಾ ಆಜಂ ಈಗಾಗಲೇ ಹಲ್ಲೆ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ತಮ್ಮ ಶಾಸಕ ಸ್ಥಾನವನ್ನು ಸಹ ಕಳೆದುಕೊಂಡಿದ್ದಾರೆ.