‘ಜಾಮೀನು ಎಂಬುದು ಕಾನೂನು, ಜೈಲೆಂಬುದು ಅಪವಾದ’ ಎಂಬ ಶಾಸನಾತ್ಮಕ ತತ್ವಗಳು, ಕಾನೂನು ಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆಯಡಿ ಬಂಧಿತರಿಗೂ ಅನ್ವಯವಾಗುತ್ತದೆ.
ಪಿಟಿಐ ನವದೆಹಲಿ
‘ಜಾಮೀನು ಎಂಬುದು ಕಾನೂನು, ಜೈಲೆಂಬುದು ಅಪವಾದ’ ಎಂಬ ಶಾಸನಾತ್ಮಕ ತತ್ವಗಳು, ಕಾನೂನು ಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆಯಡಿ ಬಂಧಿತರಿಗೂ ಅನ್ವಯವಾಗುತ್ತದೆ. ಅರ್ಹ ಪ್ರಕರಣಗಳಲ್ಲೂ ನ್ಯಾಯಾಲಯಗಳು ಜಾಮೀನು ನಿರಾಕರಿಸುತ್ತಾ ಹೋದಲ್ಲಿ ಅದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.2022ರಲ್ಲಿ ಬಿಹಾರದ ಪಟನಾದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರ್‍ಯಾಲಿ ಮೇಲಿನ ದಾಳಿ ಸಂಚಿನ ಪ್ರಕರಣದಲ್ಲಿ ಬಂಧಿತ ಆರೋಪಿಗೆ ಜಾಮೀನು ನೀಡುವ ವೇಳೆ ನ್ಯಾ। ಅಭಯ್ ಎ.ಓಕಾ ಮತ್ತು ನ್ಯಾ। ಅಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.ಇತ್ತೀಚೆಗೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಕರಣದಲ್ಲೂ, ‘ಆರೋಪಿಗೆ ತ್ವರಿತ ನ್ಯಾಯಾಲಯದ ಹಕ್ಕನ್ನು ನಿರಾಕರಿಸಲಾಗಿದೆ. ಜಾಮೀನು ಎಂಬುದು ಕಾನೂನು, ಜೈಲೆಂಬುದು ಅಪವಾದ ಎಂಬ ತತ್ವಗಳನ್ನು ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳು ಇನ್ನಾದರೂ ಪರಿಪಾಲಿಸುವ ಸಮಯ ಇದಾಗಿದೆ’ ಎಂದು ತೀಕ್ಷ್ಣ ನುಡಿಗಳಲ್ಲಿ ಹೇಳಿ ಜಾಮೀನು ನೀಡಿತ್ತು.ಏನಿದು ಪ್ರಕರಣ?:
ಮೋದಿ ಹತ್ಯೆ ಸಂಚಿನಲ್ಲಿ ಭಾಗಿ ಆಗಿದ್ದ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರಿಗೆ ತನ್ನ ಮನೆಯನ್ನು ಬಾಡಿಗೆ ಕೊಟ್ಟಿದ್ದ ಕಾರಣಕ್ಕೆ ಬಿಹಾರದ ಪಟನಾದ ಜಲಾಲುದ್ದೀನ್ ಖಾನ್ ಎಂಬಾತನ ವಿರುದ್ಧ ಎನ್‌ಐಎ, ಉಗ್ರ ನಿಗ್ರಹಕ್ಕೆ ಸಂಬಂಧಿಸಿದ ಕಠಿಣವಾದ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈತನಿಗೆ ಅಧೀನ ನ್ಯಾಯಾಲಯ ಮತ್ತು ಹೈಕೋರ್ಟ್ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಆತ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ.ಈತನಿಗೆ ಮಂಗಳವಾರ ಜಾಮೀನು ನೀಡಿದ ನ್ಯಾಯಾಲಯ ಇದೆ ವೇಳೆ, ‘ಪ್ರಾಸಿಕೂಷನ್ ಹೊರಿಸಿದ ಆರೋಪ ಎಷ್ಟೇ ಗಂಭೀರವಾಗಿದ್ದರೂ, ಕಾನೂನಿನ ಅನ್ವಯ ಜಾಮೀನು ಅರ್ಜಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ನ್ಯಾಯಾಲಯಗಳ ಹೊಣೆ. ಜಾಮೀನು ಎನ್ನುವುದು ಕಾನೂನು, ಜೈಲು ಅಪವಾದ. ಈ ನಿಯಮ ವಿಶೇಷ ಶಾಸನಗಳ ಅನ್ವಯ ಕಾನೂನುಗಳಿಗೂ ಅನ್ವಯವಾಗುತ್ತದೆ. ಹೀಗಾಗಿ ಅರ್ಹ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸುವುದು ನಾಗರಿಕರಿಗೆ ಸಂವಿಧಾನದ 21ನೇ ವಿಧಿಯ ಅನ್ವಯ ನೀಡಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದು ಹೇಳಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.