ಮಧುಕರ ನಾರಾಯಣ
ಐಜ್ವಾಲ್ (ಮಿಜೋರಾಂ) : ಈಶಾನ್ಯ ಭಾರತದ ರಾಜ್ಯ ಮಿಜೋರಾಂಗೆ ಸಂಪರ್ಕ ಕಲ್ಪಿಸುವ ಬೈರಾಬಿ- ಸೈರಾಂಗ್ ಹೊಸ ರೈಲು ಮಾರ್ಗ ಹಲವು ಕಾರಣಗಳಿಂದ ವಿಶೇಷವೆನಿಸಿದೆ. ಈ ಮಾರ್ಗ ದೇಶದ ಗಡಿ ರಕ್ಷಣೆ ದೃಷ್ಟಿಯಿಂದ ಅತಿ ಮಹತ್ವದ್ದೆನಿಸಿದೆ.
ದೇಶದ ಈಶಾನ್ಯ ಭಾಗದ ಸಣ್ಣ ರಾಜ್ಯವಾದ ಮಿಜೋರಾಂ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಗಡಿ ಹಂಚಿಕೊಂಡಿದೆ. ಜತೆಗೆ ಅತ್ಯಂತ ಸೂಕ್ಷ್ಮವಾದ ನಮ್ಮ ದೇಶದ ತ್ರಿಪುರಾ, ಮಣಿಪುರ ರಾಜ್ಯ ಅಕ್ಕಪಕ್ಕದಲ್ಲಿದೆ. ಒಂದೆಡೆ ವಿದೇಶಿ ಆಕ್ರಮಣಕ್ಕೆ ಸುಲಭ ಮಾರ್ಗವೆನಿಸಿದರೆ ಇನ್ನೊಂದೆಡೆ ಅಕ್ರಮ ನುಸುಳುಕೋರರಿಗೆ ಅನುಕೂಲಕರ ವಾತಾವರಣವಿದೆ.
ಭೌಗೋಳಿಕವಾಗಿ ಮಿಜೋರಾಂ ಅತ್ಯಂತ ದುರ್ಗಮ ಪರ್ವತ ಶ್ರೇಣಿಗಳು, ದಟ್ಟ ಕಾಡುಗಳಿಂದ ಕೂಡಿದೆ. ಆಧುನಿಕ ಸೌಲಭ್ಯಗಳು ಕಡಿಮೆ ಇವೆ. ರಸ್ತೆ ಮಾರ್ಗದಲ್ಲಿ ನಮ್ಮ ಸೈನ್ಯ ಗಡಿ ತಲುಪಲು ಕನಿಷ್ಠ 24 ಗಂಟೆ ಬೇಕಾಗುತ್ತದೆ. ಈಗ ರೈಲು ಮಾರ್ಗ ನಿರ್ಮಿಸಿದ್ದರಿಂದ ಐದಾರು ತಾಸುಗಳಲ್ಲಿ ಗಡಿ ತಲುಪಬಹುದಾಗಿದೆ ಎಂದು ಈ ಮಾರ್ಗ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡು ಕಾರ್ಯನಿರ್ವಾಹಕ ಅಭಿಯಂತರರೊಬ್ಬರು ಹೇಳುತ್ತಾರೆ.
ಮಿಜೋರಾಂ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಅಥವಾ ಕೃಷಿ ಅತ್ಯಂತ ಕಠಿಣ ಕಾರ್ಯ. ಇಲ್ಲಿಯ ಜನರು ಅರಣ್ಯ ಉತ್ಪನ್ನ, ಕರಕುಶಲ ವಸ್ತುಗಳ ತಯಾರಿಕೆ ಹಾಗೂ ಹಣ್ಣು- ತರಕಾರಿ ಮಾರಾಟದಿಂದ ಜೀವನ ಸಾಗಿಸುತ್ತಾರೆ. ಅಲ್ಲಿಯ ಜನರಿಗೆ ಈಗ ತಮ್ಮ ಉತ್ಪನ್ನಗಳನ್ನು ಬೇರೆಡೆ ಸುಲಭವಾಗಿ ಕಳುಹಿಸಲು ಈ ರೈಲು ಮಾರ್ಗ ನೆರವಾಗಲಿದೆ. ಈ ರಾಜ್ಯದಲ್ಲಿ ಸಮೃದ್ಧ ನೈಸರ್ಗಿಕ ಸಂಪತ್ತಿದೆ, ಶ್ರೀಮಂತ ಸಂಸ್ಕೃತಿಯಿದೆ. ಆದರೆ, ಹೊರಜಗತ್ತಿಗೆ ಅಜ್ಞಾತವಾಗಿದೆ. ಹೀಗಾಗಿ ಪ್ರವಾಸೋದ್ಯಮ ಬೆಳವಣಿಗೆಗೆ ಅವಕಾಶ ತೆರೆದುಕೊಳ್ಳಲಿದೆ.
2025ರ ಆಗಸ್ಟ್‌ನಲ್ಲಿ ಐಆರ್‌ಸಿಟಿಸಿ ಮಿಜೋರಾಂ ಸರ್ಕಾರದೊಂದಿಗೆ 2 ವರ್ಷಗಳ ಅವಧಿಗೆ ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ಒಪ್ಪಂದ ಮಾಡಿಕೊಂಡಿದೆ. ಜತೆಗೆ ಇಲ್ಲಿಯ ಜನರ ಶಿಕ್ಷಣ, ಆರೋಗ್ಯ ಸೇವೆಯೂ ಸುಲಭವಾಗಲಿದೆ.
ಸವಾಲುಗಳು: ದೇಶದಲ್ಲಿ ಅತ್ಯಂತ ಕಠಿಣ ಸವಾಲುಗಳ ನಡುವೆ ರೈಲ್ವೆ ಇಲಾಖೆ ಮಾರ್ಗಗಳನ್ನು ನಿರ್ಮಿಸಿದೆ. ಹಲವು ತಾಂತ್ರಿಕ ಕೌಶಲಗಳಿಂದ ಸೈ ಎನಿಸಿಕೊಂಡಿದೆ. ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಚೆನಾಬ್ ಸೇತುವೆ, ಪಂಜಾಬ್ ವಲಯದಲ್ಲಿ ನಿರ್ಮಿಸಿದ 11.215 ಕಿಮೀ ಉದ್ದದ ಸುರಂಗ, ರಾಮೇಶ್ವರಂ ಬಳಿ ನಿರ್ಮಿಸಿದ ಪಂಬನ್ ಸೇತುವೆ ರೈಲ್ವೆ ಇಲಾಖೆಯ ತಾಂತ್ರಿಕ ಕೌಶಲದ ಹಿರಿಮೆಯನ್ನು ಎತ್ತಿ ಹಿಡಿದಿವೆ.
ಬಹುಹಿಂದೆಯೇ ನಿರ್ಮಿಸಿದ ಕೊಂಕಣ ರೈಲು ಮಾರ್ಗವೂ ಇಲಾಖೆಯ ಖ್ಯಾತಿ ಹೆಚ್ಚಿಸಿತ್ತು. ಅವೆಲ್ಲವುಗಳ ನಡುವೆ ಬೈರಾಬಿ- ಸೈರಾಂಗ್ ವಿಭಿನ್ನ ಸವಾಲುಗಳನ್ನು ಎದುರಿಸಿದೆ. ಇಲ್ಲಿ ಪ್ರತಿ ವರ್ಷ ಕೇವಲ 4–5 ತಿಂಗಳು (ನವೆಂಬರ್–ಮಾರ್ಚ್) ಮಾತ್ರ ಕೆಲಸ ಮಾಡಲು ಸಾಧ್ಯವಿದೆ. ಏಪ್ರಿಲ್–ಅಕ್ಟೋಬರ್ ನಡುವೆ ಭಾರಿ ಮಳೆಯಿಂದ ಕಾರ್ಯ ನಿಂತುಹೋಗುತ್ತದೆ. ಕಠಿಣ ಗುಡ್ಡಗಾಡು, ಆಳವಾದ ಕಣಿವೆಗಳಲ್ಲಿ ಸುರಂಗಗಳು ಮತ್ತು ಎತ್ತರದ ಸೇತುವೆಗಳು ನಿರ್ಮಾಣ ಮಾಡುವ ಸವಾಲನ್ನು ಗೆಲ್ಲಲಾಗಿದೆ.
ಇಲ್ಲಿಯ ಭೂಪದರ, ಕಲ್ಲುಗಳ ನಡುವೆ ನೀರು ನುಗ್ಗುವುದರಿಂದ ನಿರ್ಮಾಣ ಕಾರ್ಯ ಅತ್ಯಂತ ಕಠಿಣವಾಗಿದೆ. ಕೆಲವೆಡೆ ರಸ್ತೆಗಳಲ್ಲಿ ಭೂಕುಸಿತ ಸಾಮಾನ್ಯ, ಸಣ್ಣ ಮಳೆಯಾದರೂ ರಸ್ತೆ ಜಾರುತ್ತದೆ. ಭಾರಿ ಸಾಮಗ್ರಿಗಳ ಸಾಗಾಟ ಅತ್ಯಂತ ಕಷ್ಟಕರ. ರೈಲು ಮಾರ್ಗ ನಿರ್ಮಾಣಕ್ಕೆ ಬೇಕಾದ ಯಾವುದೇ ಸಾಮಗ್ರಿಗಳೂ ಸ್ಥಳೀಯವಾಗಿ ಲಭ್ಯವಿಲ್ಲ. ಜತೆಗೆ ಸ್ಥಳೀಯ ಕಾರ್ಮಿಕರ ಕೊರತೆಯಿದೆ. ಇತರ ರಾಜ್ಯಗಳಿಂದ ಕಾರ್ಮಿಕರನ್ನು ತರಬೇಕಾಗುತ್ತದೆ. ಮರಳು, ಕಲ್ಲು ಚಿಪ್ಪು ಮುಂತಾದ ಸಾಮಗ್ರಿಗಳು ಮಿಜೋರಾಂನಲ್ಲಿ ಲಭ್ಯವಿಲ್ಲ. ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ ಹಾಗೂ ಇತರ ರಾಜ್ಯಗಳಿಂದ ತರಬೇಕಾಗಿದೆ. ಈ ಎಲ್ಲ ಸವಾಲುಗಳ ನಡುವೆ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ.
ಬೈರಾಬಿ- ಸೈರಾಂಗ್ ಹೊಸ ರೈಲು ಮಾರ್ಗ ಯೋಜನೆಯನ್ನು ತಾಂತ್ರಿಕತೆಯ ವಿಸ್ಮಯ ಎನ್ನಬಹುದು. ಹಲವು ಕಠಿಣ ಸವಾಲುಗಳನ್ನು ಎದುರಿಸಿ ನಮ್ಮ ಅಭಿಯಂತರರು ಈ ಮಾರ್ಗ ನಿರ್ಮಿಸಿದ್ದಾರೆ. ಇದು ಆತ್ಮನಿರ್ಭರ ಭಾರತ ಸಂಕಲ್ಪದ ಶಕ್ತಿಯಾಗಿದೆ. ಅತ್ಯಂತ ಕಠಿಣ ಭೌಗೋಳಿಕ ಪರಿಸರದಲ್ಲಿ ಇಂತಹ ಯೋಜನೆ ಅನುಷ್ಠಾನ ಮಾಡಲಾಗಿದೆ.
- ಕಪಿಂಜಲ ಕೆ. ಶರ್ಮಾ, ಸಿಪಿಆರ್‌ಒ, ನಾರ್ತ್ ಫ್ರಂಟಿಯರ್ ರೈಲ್ವೆ
ಈ ಹೊಸ 51.38 ಕಿಮೀ ಬೈರಾಬಿ – ಸೈರಾಂಗ್ ರೈಲು ಮಾರ್ಗದ ಮೂಲಕ ಈಶಾನ್ಯ ರಾಜ್ಯಗಳಿಗೆ ಮೊದಲ ಬಾರಿಗೆ ಸಂಪರ್ಕ ಲಭಿಸುತ್ತಿದೆ. ಇದರಿಂದ ಮಿಜೋರಾಂ ರಾಜಧಾನಿಯಾದ ಐಜ್ವಾಲ್‌ಗೆ ರೈಲು ಸಂಪರ್ಕ ಲಭ್ಯವಾಗುವ ಜತೆಗೆ ಪ್ರದೇಶದ ಆರ್ಥಿಕತೆ, ಪ್ರವಾಸೋದ್ಯಮ ಹಾಗೂ ಇತರ ಕ್ಷೇತ್ರಗಳ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ.
- ಬಿ. ರಾಧಾರಾಣಿ, ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ, ಹುಬ್ಬಳ್ಳಿ