12 ಜಾಗತಿಕ ಟೆಕ್‌ ಹಬ್‌ನಲ್ಲಿ ಬೆಂಗ್ಳೂರು!

KannadaprabhaNewsNetwork |  
Published : May 27, 2025, 11:56 PM ISTUpdated : May 27, 2025, 11:57 PM IST
ಟೆಕ್ ಹಬ್ | Kannada Prabha

ಸಾರಾಂಶ

ಭಾರತದ ಸಿಲಿಕಾನ್‌ ಸಿಟಿ ಎಂಬ ಹಿರಿಮೆ ಹೊಂದಿರುವ ಬೆಂಗಳೂರಿನ ಮುಡಿಗೆ ಈಗ ಇನ್ನೊಂದು ಕಿರೀಟ ಪ್ರಾಪ್ತಿಯಾಗಿದೆ.

ಐಟಿ ಸಿಟಿ 10 ಲಕ್ಷ ಟೆಕ್ಕಿಗಳ ನೆಲೆವೀಡು‘ಗ್ಲೋಬಲ್‌ ಟೆಕ್‌ ಗೈಡ್‌ಬುಕ್‌’ ಪ್ರಶಂಸೆ

==ನವದೆಹಲಿ: ಭಾರತದ ಸಿಲಿಕಾನ್‌ ಸಿಟಿ ಎಂಬ ಹಿರಿಮೆ ಹೊಂದಿರುವ ಬೆಂಗಳೂರಿನ ಮುಡಿಗೆ ಈಗ ಇನ್ನೊಂದು ಕಿರೀಟ ಪ್ರಾಪ್ತಿಯಾಗಿದೆ. ಬೆಂಗಳೂರು ಇದೀಗ ಭರ್ಜರಿ 10 ಲಕ್ಷ ಮಾಹಿತಿ ತಂತ್ರಜ್ಞಾನ ವಲಯದ ಉದ್ಯೋಗಿಗಳನ್ನು ಹೊಂದಿದೆ ಹಾಗೂ ಟಾಪ್‌ 12 ಜಾಗತಿಕ ಟೆಕ್‌ ಹಬ್‌ಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದಿದೆ ಎಂದು ವರದಿಯೊಂದು ತಿಳಿಸಿದೆ.ಸಿಬಿಆರ್‌ಇ ಎಂಬ ರಿಯಲ್‌ ಎಸ್ಟೇಟ್‌ ಸಲಹೆಗಾರ ಕಂಪನಿ 2025ರ ‘ಗ್ಲೋಬಲ್‌ ಟೆಕ್‌ ಟ್ಯಾಲೆಂಟ್‌ ಗೈಡ್‌ಬುಕ್‌’ ಬಿಡುಗಡೆ ಮಾಡಿದ್ದು, 115 ಜಾಗತಿಕ ತಾಂತ್ರಿಕ ಪ್ರತಿಭೆಯ ಮಾರುಕಟ್ಟೆಗಳನ್ನು ಪರಿಗಣಿಸಿದೆ. ಈ ವರದಿಯಲ್ಲಿ, ಮಾರುಕಟ್ಟೆಗಳನ್ನು ಲಭ್ಯತೆ, ಗುಣಮಟ್ಟ ಮತ್ತು ತಾಂತ್ರಿಕ ಪ್ರತಿಭೆಯ ವೆಚ್ಚದ ಆಧಾರದಲ್ಲಿ ಮೌಲ್ಯಮಾಪನ ಮಾಡಿದೆ. ಬಳಿಕ ಪವರ್‌ಹೌಸ್‌ (ದೊಡ್ಡ, ಆಳ ಮತ್ತು ಹೆಚ್ಚು ಸ್ಪರ್ಧಾತ್ಮಕ ಪ್ರತಿಭಾನ್ವಿತರನ್ನು ಹೊಂದಿರುವ 12 ಮಾರುಕಟ್ಟೆಗಳು), ಸ್ಥಾಪಿತ (ಸ್ಥಿರವಾದ ಪ್ರತಿಭೆಗಳುಳ್ಳ 63 ಪ್ರಬುದ್ಧ ಮಾರುಕಟ್ಟೆಗಳು) ಮತ್ತು ಹೊರಹೊಮ್ಮುತ್ತಿರುವ (ಸುಧಾರಣೆ ಸಾಮರ್ಥ್ಯವುಳ್ಳ 40 ಮಾರುಕಟ್ಟೆಗಳು) ಎಂಬ 3 ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

ಬೆಂಗಳೂರಿಗೇಕೆ ಸ್ಥಾನ?:

‘ಚೀನಾದ ಬೀಜಿಂಗ್‌ ಮತ್ತು ಶಾಂಘೈಗಳ ಜತೆ ಬೆಂಗಳೂರು ಏಷ್ಯಾ-ಪೆಸಿಫಿಕ್ ಪ್ರದೇಶದ ಅತಿ ದೊಡ್ಡ ಟೆಕ್‌ ಮಾರುಕಟ್ಟೆಯಾಗಿದ್ದು, 10 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ಇದು ಬೆಂಗಳೂರನ್ನು ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆಯ ನಿರ್ಣಾಯಕ ಕೇಂದ್ರವನ್ನಾಗಿಸುತ್ತದೆ’ ಎಂದು ಸಿಬಿಆರ್‌ಇ ಅಭಿಪ್ರಾಯಪಟ್ಟಿದೆ.

ಸಂಸ್ಥೆಯ ಮುಖ್ಯಸ್ಥ ಹಾಗೂ ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಸಿಇಒ ಆಂಶುಮಾನ್‌ ಮ್ಯಾಗಜಿನ್‌ ಮಾತನಾಡಿ, ‘ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಬೆಂಗಳೂರು ಹೊರಹೊಮ್ಮುತ್ತಿರುವುದು ಡಿಜಿಟಲ್ ನಾವೀನ್ಯತೆ, ಎಐ ಮತ್ತು ಪ್ರತಿಭೆಯಲ್ಲಿ ಭಾರತದ ಕಾರ್ಯತಂತ್ರದ ಆಳವನ್ನು ಪ್ರತಿಬಿಂಬಿಸುತ್ತದೆ. ಅಂತೆಯೇ, ದೆಹಲಿ, ಮುಂಬೈ, ಅಹಮದಾಬಾದ್‌ ಮತ್ತು ಜೈಪುರ ನಗರಗಳು ಕೂಡ ಬೆಳವಣಿಗೆ ಕಾಣುತ್ತಿವೆ’ ಎಂದರು.ಅತ್ತ, ಇಡೀ ದೇಶಕ್ಕೆ ಹೋಲಿಸಿದರೆ ಬೆಂಗಳೂರಲ್ಲೇ ಅತಿ ಹೆಚ್ಚು ಎಐ ಸಂಬಂಧಿತ ಉದ್ಯೋಗಿಗಳಿದ್ದಾರೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

==

ಟೆಕ್‌ ರಾಜಧಾನಿಯ ವಿಶೇಷತೆಗಳೇನು?:

ಬೆಂಗಳೂರಿನ ಶೇ.75ರಷ್ಟು ಜನ ದುಡಿಯುವ ವಯಸ್ಸಿನವರಾಗಿದ್ದು, ಈ ವಿಷಯದಲ್ಲಿ 12 ಟೆಕ್‌ ಹಬ್‌ಗಳ ಪೈಕಿ 4ನೇ ಸ್ಥಾನ ಪಡೆದಿದೆ. 2019ರಿಂದ 2024ರ ನಡುವೆ ದುಡಿಯುವ ವರ್ಗದಲ್ಲಿ ಶೇ.2.4ರಷ್ಟು ಬೆಳವಣಿಗೆಯಾಗಿದೆ

ಟೆಕ್‌ ಉದ್ಯೋಗದಲ್ಲಿ 2018-2023ರ ನಡುವೆ ಶೇ.12ರಷ್ಟು ಏರಿಕೆಯಾಗಿದೆ

ಇಲ್ಲಿ ಅನುಕೂಲಕರ ವ್ಯವಹಾರ ನಿಯಮಗಳು ಮತ್ತು ಸಾಂಸ್ಥಿಕ ಬೆಂಬಲವಿದ್ದು, 28 ಯೂನಿಕಾರ್ನ್‌(8.5 ಸಾವಿರ ಕೋಟಿ ರು. ಮೌಲ್ಯದ ಕಂಪನಿಗಳು) ಇವೆ

ಬೆಂಗಳೂರಿನಲ್ಲಿ ಪ್ರಮುಖ ಶಿಕ್ಷಣ ಸಂಸ್ಥೆಗಳು ಮತ್ತು ಐಟಿ ಕೇಂದ್ರಗಳಿರುವ ಕಾರಣ, ನುರಿತ ಪ್ರತಿಭೆಗಳಿಗೆ ಕೊರತೆಯಿಲ್ಲ. ಎಐ, ಡೇಟಾ ವಿಜ್ಞಾನ, ಎಂಜಿನಿಯರಿಂಗ್ ಮತ್ತು ಉತ್ಪನ್ನ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ.

==

ಟಾಪ್‌ 12 ಟೆಕ್‌ ಹಬ್‌ಗಳು:

ಬೆಂಗಳೂರು, ಬೀಜಿಂಗ್, ಬೋಸ್ಟನ್, ಲಂಡನ್, ನ್ಯೂಯಾರ್ಕ್ ಮೆಟ್ರೋ, ಪ್ಯಾರಿಸ್, ಸ್ಯಾನ್ ಫ್ರಾನ್ಸಿಸ್ಕೋ, ​​ಕೊಲ್ಲಿ ಪ್ರದೇಶ, ಸಿಯಾಟಲ್, ಶಾಂಘೈ, ಸಿಂಗಾಪುರ, ಟೋಕಿಯೊ ಮತ್ತು ಟೊರಂಟೋ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಟ್ರಂಪ್ ತೆರಿಗೆ ಶಾಕ್‌ನಿಂದ ಭಾರತಕ್ಕೆ ನಿರ್ಮಲಾ ರಕ್ಷಣೆ
250 ವರ್ಷಗಳ ನಂತರ ಕೇರಳದಲ್ಲಿ ಕುಂಭಮೇಳ