ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 80 ವರ್ಷಗಳ ಹಿಂದೆ ಸ್ಥಾಪಿಸಿದ್ದ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ದೇಶದ ಹೆಮ್ಮೆಯ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಇದೀಗ ‘ಮಹಾರತ್ನ’ ಸ್ಥಾನಮಾನ ನೀಡಲಾಗಿದೆ.
ನವದೆಹಲಿ: ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 80 ವರ್ಷಗಳ ಹಿಂದೆ ಸ್ಥಾಪಿಸಿದ್ದ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ದೇಶದ ಹೆಮ್ಮೆಯ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಇದೀಗ ‘ಮಹಾರತ್ನ’ ಸ್ಥಾನಮಾನ ನೀಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅನುಮತಿಯ ಬೆನ್ನಲ್ಲೇ ಕೇಂದ್ರ ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ಎಚ್‌ಎಎಲ್‌ಗೆ ‘ಮಹಾರತ್ನ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆ’ ಎಂಬ ಮಾನ್ಯತೆಯನ್ನು ನೀಡಿದೆ. ಈ ಗೌರವಕ್ಕೆ ಭಾಜನವಾದ ದೇಶದ 14ನೇ ಸರ್ಕಾರಿ ಸ್ವಾಮ್ಯದ ಕಂಪನಿ ಎಂಬ ಹಿರಿಮೆಗೆ ಎಚ್ಎಎಲ್ ಭಾಜನವಾಗಿದೆ.
ಎಚ್‌ಎಎಲ್‌ಗೆ ಈ ಸ್ಥಾನ ನೀಡಬೇಕು ಎಂದು ಈ ಹಿಂದೆ ಎರಡು ಅತ್ಯುನ್ನತ ಸಮಿತಿಗಳು ಶಿಫಾರಸು ಮಾಡಿದ್ದವು. ಹಣಕಾಸು ಕಾರ್ಯದರ್ಶಿ ನೇತೃತ್ವದ ಅಂತರ ಸಚಿವಾಲಯ ಸಮಿತಿ ಹಾಗೂ ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದ ಪರಮೋಚ್ಚ ಸಮಿತಿಗಳು ಎಚ್‌ಎಎಲ್ ಪರ ವರದಿ ನೀಡಿದ್ದವು. ಇದೀಗ ಕಂಪನಿಗೆ ಆ ಗೌರವ ದೊರೆತಂತಾಗಿದೆ.
ಬಿಎಚ್‌ಇಎಲ್, ಬಿಪಿಸಿಎಲ್, ಕೋಲ್ ಇಂಡಿಯಾ, ಗೇಲ್, ಎಚ್‌ಪಿಸಿಎಲ್, ಇಂಡಿಯನ್ ಆಯಿಲ್, ಎನ್‌ಟಿಪಿಸಿ, ಒಎನ್‌ಜಿಸಿ, ಪವರ್ ಗ್ರಿಡ್, ಸೇಲ್, ಆಯಿಲ್ ಇಂಡಿಯಾ, ಆರ್‌ಇಸಿ, ಪಿಎಫ್‌ಸಿ ಕಂಪನಿಗಳಿಗೆ ಈಗಾಗಲೇ ಈ ಸ್ಥಾನ ದೊರೆತಿದೆ.
‘ಮಹಾರತ್ನ’ದಿಂದ ಲಾಭ ಏನು?
- ಈ ಸ್ಥಾನ ಪಡೆಯುವ ಕಂಪನಿಗೆ ಹೆಚ್ಚಿನ ಸ್ವಾಯತ್ತೆ ದೊರಕುತ್ತದೆ. ಹಣಕಾಸು ಸ್ವಾತಂತ್ರ್ಯ ಸಿಗುತ್ತದೆ
- ಯಾವುದೇ ಮಿತಿ ಇಲ್ಲದೆ ಹೊಸ ಸಾಮಗ್ರಿ ಖರೀದಿ ಅಥವಾ ಬದಲಾವಣೆಗೆ ಹಣ ವೆಚ್ಚ ಮಾಡಬಹುದು
- ಕೇಂದ್ರದ ಬಜೆಟ್ ಅನುದಾನದ ಖಾತ್ರಿಗಾಗಿ ಕಾಯದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು
- ಸರ್ಕಾರದ ಅನುಮತಿ ಇಲ್ಲದೆ ಒಟ್ಟು ಮೌಲ್ಯದ 15% ಅಥವಾ ₹1000 ಕೋಟಿ ಅನ್ನು ಹೂಡಬಹುದು
ಯಾವ ಕಂಪನಿಗೆ ಸಿಗುತ್ತೆ?
- ವಾರ್ಷಿಕ 25 ಸಾವಿರ ಕೋಟಿ ರು. ವಹಿವಾಟು ನಡೆಸುವ ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ
- ಕಳೆದ 3 ವರ್ಷಗಳ ಅವಧಿಯಲ್ಲಿ ಸರಾಸರಿ 5000 ಕೋಟಿ ರು.ಗಿಂತ ಹೆಚ್ಚು ಲಾಭ ಗಳಿಸಿರುವ ಕಂಪನಿಗೆ
- ಎಚ್‌ಎಎಲ್ 28162 ಕೋಟಿ ರು. ವಹಿವಾಟು, 7595 ಕೋಟಿ ರು. ಲಾಭ ಹೊಂದಿರುವ ಕಾರಣಕ್ಕೆ ಸಿಕ್ಕಿದೆ