ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ಇನ್ನಿಲ್ಲ

KannadaprabhaNewsNetwork |  
Published : Dec 31, 2025, 01:45 AM ISTUpdated : Dec 31, 2025, 04:38 AM IST
Zia

ಸಾರಾಂಶ

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ, ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷ (ಬಿಎನ್‌ಪಿ)ದ ಮುಖ್ಯಸ್ಥೆ ಖಲೀದಾ ಜಿಯಾ (80) ಅವರು ವಯೋಸಹಜ ಅನಾರೋಗ್ಯದಿಂದಾಗಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

 ಢಾಕಾ : ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ, ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷ (ಬಿಎನ್‌ಪಿ)ದ ಮುಖ್ಯಸ್ಥೆ ಖಲೀದಾ ಜಿಯಾ (80) ಅವರು ವಯೋಸಹಜ ಅನಾರೋಗ್ಯದಿಂದಾಗಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಮಧುಮೇಹ, ಹೃದಯ, ಕಿಡ್ನಿ ಮತ್ತು ಲಿವರ್‌ ಸೇರಿ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಖಲೀದಾ ಜಿಯಾ ಅವರು ಢಾಕಾದ ಎವರ್‌ಕೇರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬೆಳಗ್ಗೆ 6 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಖಲೀದಾ ಜಿಯಾ ಅವರನ್ನು ಶ್ವಾಸಕೋಶ ಮತ್ತು ಹೃದಯ ಸೋಂಕಿನ ಹಿನ್ನೆಲೆಯಲ್ಲಿ ನ.23ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 36 ದಿನಗಳಿಂದ ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಪ್ರಧಾನಿ ಶೇಖ್‌ ಹಸೀನಾ ಸರ್ಕಾರದ ಪದಚ್ಯುತಿ ಬಳಿಕ ಇನ್ನೆರಡು ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಈ ಹೊತ್ತಿನಲ್ಲೇ ಖಲೀದಾ ಜಿಯಾ ಅವರ ಸಾವು ಬಿಎನ್‌ಪಿ ಕಾರ್ಯತರ್ತರಿಗೆ ತೀವ್ರ ಆಘಾತ ಮೂಡಿಸಿದೆ.

ಖಲೀದಾ ಅವರು ಪುತ್ರ, ಬಿಎನ್‌ಪಿಯ ಪ್ರಭಾರಿ ಮುಖ್ಯಸ್ಥ ತಾರಿಖ್‌ ರೆಹಮಾನ್‌ ಅವರನ್ನು ಅಗಲಿದ್ದಾರೆ.

ಇಂದು ಅಂತ್ಯಕ್ರಿಯೆ:

ಜಿಯಾ ಅವರ ಅಂತ್ಯಕ್ರಿಯೆ ಬುಧವಾರ ನಡೆಯಲಿದ್ದು, ಇದಕ್ಕೂ ಮೊದಲು ಸಂಸತ್ತಿನ ಆವರಣದಲ್ಲಿ ಪ್ರಾರ್ಥನೆ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಢಾಕಾದ ಶೇರ್‌-ಎ-ಬಾಂಗ್ಲಾ ನಗರದಲ್ಲಿರುವ ಜಿಯಾ ಉದ್ಯಾನದಲ್ಲಿರುವ ಪತಿ ಜಿಯಾವುರ್‌ ರೆಹಮಾನ್‌ ಸಮಾಧಿ ಪಕ್ಕದಲ್ಲೇ ಖಲೀದಾ ಅವರನ್ನು ಮಣ್ಣು ಮಾಡಲು ನಿರ್ಧರಿಸಲಾಗಿದೆ ಎಂದು ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಆಸಿಫ್‌ ನಝರುಲ್‌ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾ ಮಾಜಿ ಪ್ರಧಾನಿ ಶೇಖ್‌ ಹಸೀನಾ ಸೇರಿ ವಿಶ್ವಾದ್ಯಂತ ಹಲವು ಗಣ್ಯರು ಖಲೀದಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಜೈಶಂಕರ್‌ ಭಾಗಿ:

ಢಾಕಾದಲ್ಲಿ ನಡೆಯುವ ಖಲೀದಾ ಅಂತ್ಯಕ್ರಿಯೆಯಲ್ಲಿ ಭಾರತದ ಪರವಾಗಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪಾಲ್ಗೊಳ್ಳಲಿದ್ದಾರೆ.

ಭಾರತದಲ್ಲಿ ಹುಟ್ಟಿ ಬಾಂಗ್ಲಾದಲ್ಲಿ ಪ್ರಧಾನಿಯಾದ ಖಲೀದಾ 

ಢಾಕಾ: ಹದಿನೈದನೇ ವಯಸ್ಸಿಗೆ ಮದುವೆ, 35ನೇ ವಯಸ್ಸಿಗೆ ವಿಧವೆ, 45ನೇ ವಯಸ್ಸಿಗೆ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ!ಮೂರು ಬಾರಿ ಬಾಂಗ್ಲಾ ಪ್ರಧಾನಿ ಹುದ್ದೆಗೇರಿದ್ದ ಬಾಂಗ್ಲಾದೇಶ ನ್ಯಾಷನಲಿಷ್ಟ್‌ ಪಕ್ಷ(ಬಿಎನ್‌ಪಿ) ಮುಖ್ಯಸ್ಥೆಯಾಗಿರುವ ಖಲೀದಾ ಜಿಯಾ ಅವರದು ಕೊನೆಯ ವರೆಗೂ ಹೋರಾಟದ ಜೀವನ. ಮಿಲಿಟರಿ ಅಧಿಕಾಲ್ಯ ಪತ್ನಿಯಾಗಿ ಮನೆವಾರ್ತೆ ನೋಡಿಕೊಂಡಿದ್ದ, ರಾಜಕೀಯದ ಗಂಧ ಗಾಳಿಯಿಂದ ದೂರವೇ ಉಳಿದಿದ್ದ ಖಾಲೀದಾ ಜಿಯಾ ಅವರ ರಾಜಕೀಯ ಪ್ರವೇಶ ಹಾಗೂ ಅಧಿಕಾರದ ಪಡಸಾಲೆಯಲ್ಲಿನ ಓಡಾಟಗಳೆಲ್ಲವೂ ಆಕಸ್ಮಿಕ. ರಾಷ್ಟ್ರಪತಿಯಾಗಿದ್ದ ತಮ್ಮ ಪತಿ 1981ರಲ್ಲಿ ಹತ್ಯೆಯಾದ ಬಳಿಕ ಖಲೀದಾ ಅವರು ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸಿದರು. ಮುಖಂಡರು, ಕಾರ್ಯಕರ್ತರ ಒತ್ತಾಯದ ಮೇರೆಗೆ 1983ರಲ್ಲಿ ಬಿಎನ್‌ಪಿ ಜವಾಬ್ದಾರಿ ವಹಿಸಿಕೊಂಡು ಸಾಯುವವರೆಗೂ ಪಕ್ಷದ ಅಧ್ಯಕ್ಷೆಯಾಗಿ ಮುಂದುವರೆದರು. ಮೂರು ದಶಕ ಕಾಲ ಬಾಂಗ್ಲಾ ರಾಜಕಾರಣದ ಮೇಲೆ ಹಿಡಿತ ಸಾಧಿಸಿದ್ದರು.

ದಿಟ್ಟ ಮಹಿಳಾ ರಾಜಕಾರಣಿ:ರಾಜಕೀಯ ಅಸ್ಥಿರತೆ, ಮಿಲಿಟರಿ ಧಂಗೆಗೆ ಹೆಸರುವಾಸಿಯಾದ ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಇಬ್ಬರು ಮಹಿಳಾ ನಾಯಕರಾದ ಶೇಖ್‌ ಹಸೀನಾ ಮತ್ತು ಖಲೀದಾ ಜಿಯಾ ಅವರ ಹೆಸರು ಸದಾ ಸ್ಮರಿಸಲಾಗುತ್ತದೆ. ಪರಸ್ಪರ ಬದ್ಧವೈರಿಗಳಾಗಿದ್ದ ಇಬ್ಬರೂ ಮುಖಂಡರು ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ವಿಚಾರದಲ್ಲಿ ಮಾತ್ರ ಮಹತ್ವದ ಪಾತ್ರವಹಿಸಿದವರು ಮತ್ತು ಬಾಂಗ್ಲಾವನ್ನು ಸುದೀರ್ಘ ಅವಧಿ ವರೆಗೆ ಮುನ್ನಡೆಸಿದವರು.

ಭಾರತದ ಸಂಪರ್ಕ:ಸ್ವಾತಂತ್ರ್ಯಪೂರ್ವದಲ್ಲಿ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ 1945ರಲ್ಲಿ ಜನಿಸಿದ ಖಲೀದಾ ಜಿಯಾ 1960ರಲ್ಲಿ ಸೇನಾಧಿಕಾರಿಯಾಗಿದ್ದ ಜಿಯಾವುರ್‌ ರೆಹಮಾನ್‌ರನ್ನು 15ನೇ ವಯಸ್ಸಿನಲ್ಲಿ ಮದುವೆಯಾದರು. ಭಾರತದಲ್ಲೇ ಆರಂಭಿಕ ಶಿಕ್ಷಣ ಪಡೆದಿದ್ದ ಖಲೀದಾ ಬಾಂಗ್ಲಾ ವಿಮೋಚನಾ ಹೋರಾಟದ ವೇಳೆ ಮಕ್ಕಳೊಂದಿಗೆ ಕೆಲ ಸಮಯ ತಲೆಮರೆಸಿಕೊಂಡು ಓಡಾಡಿದ್ದರು. ಕೆಲಕಾಲ ಗೃಹಬಂಧನದಲ್ಲೂ ಇದ್ದರು. 

 ಬಾಂಗ್ಲಾ ವಿಮೋಚನೆ ಬಳಿಕ ಖಲೀದಾರ ಪತಿ ಜಿಯಾವುರ್‌ ರೆಹಮಾನ್‌ ರಾಷ್ಟ್ರಪತಿಯಾದರು. ಆ ಬಳಿಕ ಅವರು 1978ರಲ್ಲಿ ಬಿಎನ್‌ಪಿ ಪಕ್ಷವನ್ನೂ ಕಟ್ಟಿದರು. 1981ರಲ್ಲಿ ಸೇನಾ ದಂಗೆ ಯಲ್ಲಿ ಜಿಯಾವುರ್‌ ಹತ್ಯೆಯಾಯಿತು. ಹೀಗಾಗಿ ಖಲೀದಾ 1983ರಲ್ಲಿ ಅನಿವಾರ್ಯವಾಗಿ ಪಕ್ಷದ ನೇತೃತ್ವವಹಿಸಿದರು. ಬಳಿಕ ಬಾಂಗ್ಲಾದಲ್ಲಿ ನಿರಂಕುಶವಾದಿ ಆಡಳಿತ ವಿರುದ್ಧ ಬಿಎನ್‌ಪಿಯ ಹೋರಾಟದ ನೇತೃತ್ವ ವಹಿಸಿ 1991ರಲ್ಲಿ ಅಚ್ಚರಿ ಎಂಬಂತೆ ಮೊದಲ ಮಹಿಳಾ ಪ್ರಧಾನಿಯಾಗುವ ಮೂಲಕ ಇತಿಹಾಸ ನಿರ್ಮಿಸಿದರು. ಸ್ವಾತಂತ್ರ್ಯಾನಂತರ ಮುಸ್ಲಿಂ ರಾಷ್ಟ್ರವೊಂದನ್ನು ಮುನ್ನಡೆಸಿದ ಎರಡನೇ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಗೆಕೂ ಪಾತ್ರವಾದರು.  ಬಳಿಕ 1996ಲ್ಲಿ ಮತ್ತೆ ಪ್ರಧಾನಿಯಾದರೂ ಅವರ ಆಡಳಿತಾವಧಿ 16 ದಿನಕ್ಕೆ ಸೀಮಿತವಾಗಿತ್ತು. 2001ರಲ್ಲಿ ಇನ್ನೊಮ್ಮೆ ಪ್ರಧಾನಿ ಹುದ್ದೆಗೇರಿದ ಖಲೀದಾ, 2006ರಲ್ಲಿ ಅಧಿಕಾರದಿಂದ ಕೆಳಗಿಳಿದರು. 2007ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಖಲೀದಾ ಅವರು ಕೆಲಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.

ಮುಸ್ಲಿಂ ದೇಶವೊಂದರ 2ನೇ ಮಹಿಳಾ ಪ್ರಧಾನಿ:

ಮುಸ್ಲಿಂ ರಾಷ್ಟ್ರವೊಂದರಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ 2ನೇ ಮಹಿಳೆ (ಮೊದಲ ಮಹಿಳೆ ಬೆನಜಿರ್‌ ಭುಟ್ಟೋ) ಎಂಬ ಹೆಗ್ಗಳಿಕೆಗೆ ಖಲೀದಾ ಪಾತ್ರರಾಗಿದ್ದರು. 

ಭಾರತ ವಿರೋಧಿ ನಿಲುವು

ಅವಾಮಿ ಲೀಗ್‌ನ ನಾಯಕಿ ಶೇಖ್ ಹಸೀನಾ ಭಾರತದ ಪರ ಸ್ನೇಹಪರತೆ ತೋರುತ್ತಿದ್ದರೆ, ಭಾರತದಲ್ಲೇ ಹುಟ್ಟಿ ಬೆಳೆದ ಖಲೀದಾ ಜಿಯಾ ಮಾತ್ರ ಇದಕ್ಕೆ ತದ್ವಿರುದ್ಧ. ಭಾರತದ ಬದಲು ಪಾಕಿಸ್ತಾನ ಹಾಗೂ ಚೀನಾ ಜತೆಗೆ ಹೆಚ್ಚು ಆತ್ಮೀಯತೆ ಹೊಂದಿದ್ದರು. ಖಲೀದಾ ಪ್ರಧಾನಿಯಾಗಿದ್ದ 2001-2006ರ ಅವಧಿಯಲ್ಲಿ ಬಾಂಗ್ಲಾ-ಭಾರತದ ನಡುವಿನ ಸಂಬಂಧ ತೀರಾ ಹದಗೆಟ್ಟಿತ್ತು. ಜಮಾತ್ ಜತೆ ಸೇರಿಕೊಂಡು ಭಾರತ ವಿರೋಧಿ ಚಟುವಟಿಕೆಗೆ ನೆರವು ನೀಡಿದ ಆರೋಪ ಅವರ ಮೇಲಿದೆ. ಉಲ್ಫಾದಂಥ ಉಗ್ರ ಸಂಘಟನೆಗಳನ್ನು ಸ್ವಾತಂತ್ರ್ಯಹೋರಾಟಗಾರರೆಂದು ಕರೆಯುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇನ್ನು ಮುಂದೆ ಜಿಮೇಲ್‌ ಐಡಿ ಬದಲಿಸಿದ್ರೂ ಡೇಟಾ ನಷ್ಟವಿಲ್ಲ
ಹೊಸ ವರ್ಷಕ್ಕೆ ಏನೆಲ್ಲಾ ಬದಲಾಗುತ್ತಿದೆ ?