- ಆದರೆ ಭಾರತದಿಂದ ಗಡೀಪಾರು ಅನುಮಾನ
ಢಾಕಾ: ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ತಮ್ಮ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಗಡೀಪಾರು ಮಾಡಬೇಕು ಎಂದು ಬಾಂಗ್ಲಾದೇಶ ಸರ್ಕಾರ ಭಾರತಕ್ಕೆ ಕೋರಿದೆ.‘ಹಸೀನಾ ಮೇಲೆ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪ ಹೊರಿಸಲಾಗಿದೆ, ಮತ್ತು ಎರಡನೇ ದೇಶವು ಅವರಿಗೆ ಆಶ್ರಯ ನೀಡಿದರೆ, ಅದು ಅತ್ಯಂತ ಆಕ್ಷೇಪಾರ್ಹ ಕೃತ್ಯ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ನ್ಯಾಯದ ತತ್ವಗಳ ಉಲ್ಲಂಘನೆಯಾಗುತ್ತದೆ. ಈ ಶಿಕ್ಷೆಗೊಳಗಾದ ಪರಾರಿಯಾದವರಿಗೆ ಯಾವುದೇ ರೀತಿಯ ಆಶ್ರಯ ನೀಡದೆ ಬಾಂಗ್ಲಾದೇಶಕ್ಕೆ ಒಪ್ಪಿಸಬೇಕು’ ಎಂದು ಅದು ಕೋರಿದೆ.
ಗಡೀಪಾರು ಅನುಮಾನ:ಆದರೆ ಭಾರತವು ಹಸೀನಾ ಗಡೀಪಾರು ಮಾಡುವುದು ಅನುಮಾನ. ಏಕೆಂದರೆ ರಾಜಕೀಯ ಕಾರಣಕ್ಕೆ ಗಡೀಪಾರು ಮಾಡುವಂತಿಲ್ಲ ಎಂಬ ಅಂಶ ಭಾರತ-ಬಾಂಗ್ಲಾ ಗಡೀಪಾರು ಒಪ್ಪಂದದಲ್ಲಿದೆ.
ಕಳೆದ 1 ವರ್ಷದಿಂದ ಹಸೀನಾ ದಿಲ್ಲಿಯಲ್ಲಿ ವಾಸವಿದ್ದಾರೆ. ಆದರೆ ಅಧಿಕೃತವಾಗಿ ರಾಜಾಶ್ರಯ ಪಡೆದಿಲ್ಲ. ‘ಸುರಕ್ಷತಾ ಕಾರಣಗಳಿಗಾಗಿ ಅವರು ಭಾರತದಲ್ಲಿದ್ದಾರೆ’ ಎಂದು ಭಾರತ ಸರ್ಕಾರ ಹೇಳಿತ್ತು.==
ಹಸೀನಾ ಮುಂದೇನು?- ಹಸೀನಾಗೆ ಬಾಂಗ್ಲಾದೇಶ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ ಸುಪ್ರೀಂ ಕೋರ್ಟ್ ಮೇಲ್ಮನವಿ ವಿಭಾಗದ ಮುಂದೆ ಅವರು ಖುದ್ದು ಹಾಜರಾಗುವುದು ಕಡ್ಡಾಯ.- ಸದ್ಯದ ಪರಿಸ್ಥಿತಿಯಲ್ಲಿ ಅವರು ಬಾಂಗ್ಲಾದೇಶಕ್ಕೆ ಮರಳುವದು ಅನುಮಾನ. ಮರಳಿದರೆ ಜೈಲಿನಲ್ಲಿದ್ದುಕೊಂಡೇ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ
- ಭಾರತವು ಹಸೀನಾ ಗಡೀಪಾರು ಮಾಡುವುದು ಅನುಮಾನ. ಏಕೆಂದರೆ ರಾಜಕೀಯ ಕಾರಣಕ್ಕೆ ಗಡೀಪಾರು ಮಾಡುವಂತಿಲ್ಲ ಎಂಬ ಅಂಶ ಭಾರತ-ಬಾಂಗ್ಲಾ ಗಡೀಪಾರು ಒಪ್ಪಂದದಲ್ಲಿದೆ.==
ಬಾಂಗ್ಲಾ ಹಿತಾಸಕ್ತಿ ಕಾಯಲು ಬದ್ಧ: ಭಾರತ ಪ್ರತಿಕ್ರಿಯೆಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ನೀಡಿದ ಗಲ್ಲು ಶಿಕ್ಷೆಗೆ ಪ್ರತಿಕ್ರಿಯೆ ನೀಡಿರುವ ಭಾರತ ವಿದೇಶಾಂಗ ಸಚಿವಾಲಯ, ‘ತೀರ್ಪನ್ನು ಔಪಚಾರಿಕವಾಗಿ ಗಮನಿಸಿದ್ದೇವ. ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಬದ್ಧರಾಗಿದ್ದೇವೆ " ಎಂದು ಹೇಳಿದೆ.‘ನಿಕಟ ನೆರೆಯ ರಾಷ್ಟ್ರವಾಗಿ, ಭಾರತವು ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಬದ್ಧವಾಗಿದೆ. ಶಾಂತಿ, ಪ್ರಜಾಪ್ರಭುತ್ವ, ಸೇರ್ಪಡೆ ಮತ್ತು ಸ್ಥಿರತೆಯು ಆ ದೇಶದ ಹಿತಾಸಕ್ತಿಗೆ ಮುಖ್ಯ. ಆ ನಿಟ್ಟಿನಲ್ಲಿ ನಾವು ಯಾವಾಗಲೂ ಎಲ್ಲಾ ಪಾಲುದಾರರೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುತ್ತೇವೆ’ ಎಂದು ಹೇಳಿದೆ.
==ಇದು ರಾಜಕೀಯ ಪ್ರೇರಿತ, ಪಕ್ಷಪಾತಿ ತೀರ್ಪು: ಹಸೀನಾ
- ಮರಣದಂಡನೆ ಶಿಕ್ಷೆ ತಿರಸ್ಕರಿಸಿದ ಬಾಂಗ್ಲಾ ಮಾಜಿ ಪ್ರಧಾನಿನವದೆಹಲಿ: ಬಾಂಗ್ಲಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ನೀಡಿರುವ ಮರಣದಂಡನೆ ಶಿಕ್ಷೆಯನ್ನು ಮಾಜಿ ಪ್ರಧಾನಿ ಶೇಖ್ ಹಸೀನಾ ತಿರಸ್ಕರಿಸಿದ್ದಾರೆ. ‘ಇದು ಸಂಪೂರ್ಣ ಪಕ್ಷಪಾತಿ ಹಾಗೂ ರಾಜಕೀಯಪ್ರೇರಿತ ತೀರ್ಪು ಆಗಿದೆ’ ಎಂದು ಅವರು ಆರೋಪಿಸಿದ್ದಾರೆ.ತೀರ್ಪಿನ ಬಳಿಕ ಲಿಖಿತ ಹೇಳಿಕೆ ನೀಡಿರುವ ಅವರು, ‘ನನ್ನ ವಿರುದ್ಧದ ಆರೋಪದ ವಿಚಾರಣೆಯನ್ನು ನನ್ನ ಅನುಪಸ್ಥಿತಿಯಲ್ಲಿ ನಡೆಸಲಾಗಿದೆ.ನ್ಯಾಯಮಂಡಳಿಯು ನನಗಾಗಲಿ, ಅವಾಮಿ ಲೀಗ್ ಪಕ್ಷಕ್ಕಾಗಲಿ ಸಮರ್ಥನೆಗೆ ನ್ಯಾಯೋಚಿತವಾಗಿ ನನಗೆ ವಾದಕ್ಕೆ ಅವಕಾಶ ನೀಡಿಲ್ಲ. ಆ ನ್ಯಾಯಮಂಡಳಿಯ ನ್ಯಾಯಾಧೀಶರು ಮತ್ತು ವಕೀಲರು ಹಾಲಿ ಸರ್ಕಾರದ ಪರ ಬಹಿರಂಗವಾಗಿಯೇ ಸಹಾನುಭೂತಿ ವ್ಯಕ್ತಪಡಿಸಿದವರು’ ಎಂದಿದ್ದಾರೆ.
‘ಇದೊಂದು ಅಕ್ರಮ ನ್ಯಾಯಮಂಡಳಿ. ಈ ನ್ಯಾಯಮಂಡಳಿಯ ತೀರ್ಪು ಚುನಾಯಿತ ಸರ್ಕಾರದ ಪ್ರಧಾನಮಂತ್ರಿಯನ್ನು ಹತ್ಯೆಮಾಡುವ ಉದ್ದೇಶ ಹಾಗೂ ಅವಾಮಿ ಲೀಗ್ ಪಕ್ಷವನ್ನು ನಾಶಮಾಡುವ ಸಂಚನ್ನು ಬಯಲು ಮಾಡುತ್ತಿದೆ’ ಎಂದಿದ್ದಾರೆ.‘ಸಾಕ್ಷ್ಯಗಳನ್ನು ನ್ಯಾಯಯುತವಾಗಿ ಪರಿಶೀಲಿಸುವ ನೈಜ ನ್ಯಾಯಮಂಡಳಿ ಮುಂದೆ ವಿಚಾರಣೆಗೆ ಒಳಗಾಗಲು ನನಗೆ ಹೆದರಿಕೆ ಇಲ್ಲ. ಆದರೆ, ಇದು ಜನಾದೇಶವಿಲ್ಲದ ಸರ್ಕಾರ ಸ್ಥಾಪಿಸಿದ ತಥಾಕಥಿತ ನ್ಯಾಯಮಂಡಳಿ. ಇದೇ ಕಾರಣಕ್ಕೆ ನನ್ನ ಮೇಲಿನ ಆರೋಪಗಳನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಮಂದೆ ಮಂಡಿಸುವಂತೆ ಮಧ್ಯಂತರ ಸರ್ಕಾರಕ್ಕೆ ಸವಾಲು ಹಾಕುತ್ತಲೇ ಬಂದಿದ್ದೇನೆ’ ಎಂದು ಇದೇ ವೇಳೆ ಹಸೀನಾ ಹೇಳಿದ್ದಾರೆ.
‘ಈ ಸರ್ಕಾರಕ್ಕೆ ನಿಜವಾಗಿಯೂ ನ್ಯಾಯ ಒದಗಿಸುವ ಉದ್ದೇಶ ಇಲ್ಲ. ಬದಲಾಗಿ ಅವಾಮಿ ಲೀಗ್ ಪಕ್ಷವನ್ನು ಬಲಿಪಶು ಮಾಡುವುದು ಮತ್ತು ಯೂನಸ್ ಮತ್ತು ಮಧ್ಯಂತರ ಸರ್ಕಾರದ ಸಚಿವರ ವೈಫಲ್ಯಗಳನ್ನು ಮರೆಮಾಚುವುದಷ್ಟೇ ಅವರ ಗುರಿ ಇದ್ದಂತಿದೆ. ಅವ್ಯವಸ್ಥೆಯ ಆಗರವಾಗಿರುವ, ಹಿಂಸಾತ್ಮಕ ಮತ್ತು ಸಾಮಾಜಿಕವಾಗಿ ಹಿಂದಕ್ಕೆ ಕರೆದೊಯ್ಯುವ ಯೂನುಸ್ ಸರ್ಕಾರದಲ್ಲಿ ಕೋಟ್ಯಂತರ ಮಂದಿ ಬಾಂಗ್ಲಾದೇಶಿಗರು ನಲುಗುತ್ತಿದ್ದಾರೆ. ಈ ಸರ್ಕಾರ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ’ ಎಂದು ಹಸೀನಾ ಅಭಿಪ್ರಾಯಪಟ್ಟಿದ್ದಾರೆ.==
ತೀರ್ಪಿನ ವಿರುದ್ಧ ಕೆಲವೆಡೆ ಪ್ರತಿರೋಧ, ಕೆಲವಡೆ ಸಂಭ್ರಮ-ಢಾಕಾ ವಿವಿ ವಿದ್ಯಾರ್ಥಿಗಳಿಂದ ಸಿಹಿ ಹಂಚಿ ಸಡಗರ
ಪಿಟಿಐ ಢಾಕಾಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಗಲ್ಲು ಶಿಕ್ಷೆಯ ತೀರ್ಪು ಪ್ರಕಟವಾಗುತ್ತಿದ್ದಂತೆ, ದೇಶಾದ್ಯಂತ ಹಲವೆಡೆ ಸಂಘರ್ಷ, ಅಹಿತಕರ ಘಟನೆಗಳು ನಡೆದರೆ, ಇನ್ನು ಕೆಲವೆಡೆ ಜನ ಸಿಹಿ ಹಂಚಿ ಸಂಭ್ರಮಪಟ್ಟ ದೃಶ್ಯಗಳು ಕಂಡುಬಂದವು.
ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಈ ನಡುವೆಯೂ ರಾಜಧಾನಿ ಢಾಕಾ ಸೇರಿದಂತೆ ವಿವಿಧ ಕಡೆಗಳಲ್ಲಿ ತೀರ್ಪಿನ ವಿರುದ್ಧ ರೊಚ್ಚಿಗೆದ್ದ ಜನ ಪ್ರತಿಭಟನೆ ತೋರಿದರು. ಪೊಲೀಸ್ ಠಾಣೆ ಸಂಕೀರ್ಣದಲ್ಲಿ ಬೆಂಕಿ ಹಚ್ಚಿದ್ದಲ್ಲದೆ, ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರ ನಿವಾಸದ ಹೊರಗೆ 2 ಕಚ್ಚಾ ಬಾಂಬ್‌ಗಳನ್ನು ಸ್ಫೋಟಿಸಿದರು. ಇನ್ನು ಕೆಲವೆಡೆ ಮರದ ಕೊಂಬೆ ಹಾಗೂ ಟಯರ್‌ಗಳನ್ನು ಸುಡುವ ಮೂಲಕ ರಸ್ತೆ ತಡೆಗೆ ಯತ್ನಿಸಲಾಯಿತು.ಮುಜಿಬುರ್ ಮನೆ ಧ್ವಂಸಕ್ಕೆ ಯತ್ನ:ಪ್ರತಿಭಟನಾಕಾರರು ಹಸೀನಾ ಅವರ ತಂದೆ, ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಢಾಕಾದಲ್ಲಿರುವ ಮನೆಯನ್ನು ಕೆಡವಲು ಯತ್ನಿಸಿದ ಘಟನೆ ನಡೆಯಿತು. ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿದರು.ಸಿಹಿ ಹಂಚಿ ಸಂಭ್ರಮ:ಹಸೀನಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕಾಗಿ ಢಾಕಾ ವಿವಿ ವಿದ್ಯಾರ್ಥಿಗಳು ಸಿಹಿ ಹಂಚಿ ಸಂಭ್ರಮಿಸಿದರು. ತೀರ್ಪಿಗೂ ಮುನ್ನ ವಿವಿಯ ಶಿಕ್ಷಕ-ವಿದ್ಯಾರ್ಥಿ ಕೇಂದ್ರದ ಎದುರು ಬೃಹತ್ ಪರದೆ ಮೇಲೆ ತೀರ್ಪಿನ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 11ರಿಂದಲೇ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ತೀರ್ಪು ಘೋಷಣೆಯಾಗುತ್ತಿದ್ದಂತೆ ಸಂಭ್ರಮಾಚರಣೆ ಮಾಡಿದರು.