ಢಾಕಾ: ಹಿಂದೂಗಳನ್ನು ಮನೆಯೊಳಗೆ ಕೂಡಿಹಾಕಿ ಬೆಂಕಿ ಹಚ್ಚಿದ ಸರಣಿ ಘಟನೆಗಳ ಬೆನ್ನಲ್ಲೇ, ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕರೊಬ್ಬರ ಮನೆ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಸಿಲ್ಹೆಟ್‌ನ ಉಪಜಿಲ್ಲೆಯಾದ ಗೊವೈನ್‌ಘಾಟ್ ಎಂಬಲ್ಲಿದ್ದ ಶಿಕ್ಷಕ ಬಿರೇಂದ್ರ ಕುಮಾರ್ ದೇ ಅವರ ಮನೆಯಲ್ಲಿ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಇದರ ವಿಡಿಯೋದಲ್ಲೊ ಬೆಂಕಿ ಮನೆಯನ್ನು ಆವರಿಸಿಕೊಳ್ಳುತ್ತಿರುವುದು ಮತ್ತು ಒಳಗಿದ್ದವರು ಹೊರಬರಲು ಹೆಣಗಾಡುವುದನ್ನು ಕಾಣಬಹುದಾಗಿದೆ. ಘಟನೆ ಬೆನ್ನಲ್ಲೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಗಳು, ‘ಬೆಂಕಿಗೆ ಕಾರಣ ಶಾರ್ಟ್ ಸರ್ಕಿಟ್ ಇರಬಹುದು’ ಎಂದಿದ್ದಾರೆ.
ದೇ ಕೂಡ, ‘ಹಿಂದೂ-ಮುಸಲ್ಮಾನರು ಸಾಮರಸ್ಯದಿಂದಿದ್ದೇವೆ. ಯಾರೊಂದಿಗೂ ದ್ವೇಷವಿಲ್ಲ’ ಎನ್ನುವ ಮೂಲಕ ಉದ್ದೇಶಪೂರ್ವಕ ದಾಳಿ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಆದರೆ, ಹಿಂದೂಗಳನ್ನು ಗುರಿಯಾಗಿಸಿಕೊಂಡು ಕ್ರೌರ್ಯಗಳು ನಡೆಯುತ್ತಿರುವ ಹೊತ್ತಿನಲ್ಲಿ ಈ ಘಟನೆ ಸಂಭವಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ಘಟನೆ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, ‘ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರು ಪದೇ ಪದೇ ದಾಳಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇಂತಹ ಕೋಮು ಘಟನೆಗಳನ್ನು ತ್ವರಿತವಾಗಿ ಮತ್ತು ದೃಢವಾಗಿ ನಿಭಾಯಿಸಬೇಕು’ ಎಂದು ಆಗ್ರಹಿಸಿದ್ದಾರೆ.