ಮುಂಬರುವ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ - ಯೂನಸ್‌ ಭೇಟಿ ಸಂಭವ

KannadaprabhaNewsNetwork | Updated : Mar 24 2025, 04:47 AM IST

ಸಾರಾಂಶ

ಮುಂಬರುವ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಹಂಗಾಮಿ ಮುಖ್ಯಸ್ಥ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರು ಪ್ರಧಾನಿ ಅವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ

ನವದೆಹಲಿ: ಮುಂಬರುವ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಹಂಗಾಮಿ ಮುಖ್ಯಸ್ಥ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಬಾಂಗ್ಲಾ ಪ್ರಧಾನಿ ಆಗಿದ್ದ ಶೇಖ್‌ ಹಸೀನಾ ಭಾರತಕ್ಕೆ ಪರಾರಿ ಆದ ಬಳಿಕ ಹಿಂದೂಗಳ ಮೇಲೆ ಬಾಂಗ್ಲಾದಲ್ಲಿ ಭಾರಿ ದೌರ್ಜನ್ಯ ನಡೆದಿದೆ. ಇದಾದ ಬಳಿಕ 2 ದೇಶಗಳ ಸಂಬಂಧ ಹಳಸಿದೆ. ಹೀಗಾಗಿ ಯೂನಸ್, ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿರುವುದು ಕುತೂಹಲ ಕೆರಳಿಸಿದೆ.

ಇಸ್ರೇಲ್‌ ಯುದ್ಧ: ಸಾವಿನ ಸಂಖ್ಯೆ 50 ಸಾವಿರಕ್ಕೆ ಏರಿಕೆ

ದೇರ್‌ ಅಲ್‌ ಬಲಾಹ್‌: ಕಳೆದ ಎರಡೂವರೆ ವರ್ಷದಿಂದ ನಡೆಯುತ್ತಿರುವ ಇಸ್ರೇಲ್‌ ಹಮಾಸ್‌ ಯುದ್ಧದಲ್ಲಿ ಈವರೆಗೆ ಗಾಜಾಪಟ್ಟಿಯಲ್ಲಿ 50,000 ಜನರು ಬಲಿಯಾಗಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ಹೇಳಿದೆ.ಭಾನುವಾರದ ತಮ್ಮ ಹೇಳಿಕೆಯಲ್ಲಿ ಇಲಾಖೆ ಮಾಹಿತಿ ನೀಡಿದೆ. ಯುದ್ಧದಿಂದಾಗಿ 1.13 ಲಕ್ಷ ಜನರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.

ಅ.7, 2023ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ಗುಂಡಿನ ದಾಳಿ ಮಾಡಿ 1200ಕ್ಕೂ ಹೆಚ್ಚಿನ ಜನರನ್ನು ಬಲಿ ಪಡೆದು, 251ಕ್ಕೂ ಹೆಚ್ಚಿನ ಜನರನ್ನು ಒತ್ತೆಯಾಳಾಗಿ ಪಡೆದಿದ್ದರು. ಇದರ ಬೆನ್ನಲ್ಲೇ ಇಸ್ರೇಲ್‌ ಪಡೆಗಳು ಗಾಜಾ ಮೇಲೆ ಯುದ್ಧ ಆರಂಭಿಸಿದ್ದವು.

ಜಮ್ಮುವಿನಲ್ಲಿ ಭೀಕರ ಎನ್‌ಕೌಂಟರ್: 5 ಉಗ್ರರು ಪರಾರಿ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಭಾನುವಾರ ಸಂಜೆ 4-5 ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಬಾಲಕಿಯೊಬ್ಬಳು ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಆರಂಭಿಕ ಗುಂಡಿನ ಚಕಮಕಿಯ ನಂತರ, ಉಗ್ರರು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಸೋಮವಾರವೂ ಇದನ್ನು ತೀವ್ರಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು, ಭಾರತ-ಪಾಕಿಸ್ತಾನ ಗಡಿಯಲ್ಲಿ 3 ಉಗ್ರರ ನುಸುಳುವಿಕೆ ಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿತ್ತು.

ಅಸ್ಸಾಂ: 11ನೇ ಕ್ಲಾಸ್‌ ಪ್ರಶ್ನೆ ಪತ್ರಿಕೆ ಸೋರಿಕೆ, ಎಲ್ಲ ಪರೀಕ್ಷೆ ರದ್ದು

ಗುವಾಹಟಿ: ಅಸ್ಸಾಂ 11ನೇ ತರಗತಿಯ ಹಲವು ವಿಷಯಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.ಮಾ.21ರಂದು ನಿಗದಿಯಾಗಿದ್ದ ಗಣಿತ ಪ್ರಶ್ನೆ ಪತ್ರಿಕೆಯು ಮಾ.20ರಂದು 18 ಶಾಲೆಗಳಲ್ಲಿ ಸೋರಿಕೆಯಾದ ಬೆನ್ನಲ್ಲೇ ಪರೀಕ್ಷೆ ರದ್ದುಗೊಳಿಸಲಾಗಿತ್ತು. ಈಗ ಇನ್ನೊದಷ್ಟು ಶಾಲೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಾ.24-29ರವರೆಗಿನ ಎಲ್ಲ 36 ವಿಷಯಗಳ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ರಂನೋಜ್‌ ಪೆಗು ಆದೇಶ ಹೊರಡಿಸಿದ್ದಾರೆ.

ಅಲ್ಲದೇ 18 ಶಾಲೆಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ಸಿಐಡಿ ಕೇಂದ್ರ ಕಚೇರಿಯಲ್ಲಿಯೂ ಕೇಸು ದಾಖಲಿಸಲಾಗಿದೆ. 1 ಶಾಲೆಗೆ 2025-26ರ ಪ್ರವೇಶವನ್ನು ಪಡೆಯದಂತೆ ನಿರ್ಬಂಧ ಹೇರಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಏಪ್ರಿಲ್‌ನಿಂದ ಬಹುತೇಕ ಕಾರು ಭಾರಿ ದುಬಾರಿ!

ನವದೆಹಲಿ: ಮಾರುತಿ ಕಾರು ಮಾತ್ರವಲ್ಲ, ಮುಂದಿನ ತಿಂಗಳಿಂದ ದೇಶದಲ್ಲಿ ಬಹುತೇಕ ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿವೆ.ಇತ್ತೀಚೆಗೆ ದೇಶದ ಪ್ರಮುಖ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯನ್ನು ಶೇ.4ರಷ್ಟು ಏಸುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ, ಹ್ಯುಂಡೈ (ಶೇ.3), ಟಾಟಾ ಮೋಟಾರ್ಸ್‌, ಮಹಿಂದ್ರಾ & ಮಹಿಂದ್ರಾ (ತಲಾ ಶೇ.3), ಕಿಯಾ ಇಂಡಿಯಾ, ಹೋಂಡಾ, ರೆನಾಲ್ಟ್‌, ಬಿಎಂಡಬ್ಲ್ಯು ಕಾರುಗಳು ಕೂಡ ದುಬಾರಿಯಾಗಲಿವೆ.

ವಾಹನಗಳ ಬಿಡಿಭಾಗ ಮತ್ತು ನಿರ್ವಹಣಾ ವೆಚ್ಚ ಅಧಿಕವಾಗಿರುವ ಹಿನ್ನೆಲೆಯಲ್ಲಿ ಕಾರು ಉತ್ಪಾದಕ ಕಂಪನಿಗಳು ಈ ನಿರ್ಧಾರ ಕೈಗೊಂಡಿವೆ.

ಜೊತೆಗೆ, ವಾಹನಗಳಲ್ಲಿ ಹೊಸಹೊಸ ವೈಶಿಷ್ಟ್ಯಗಳು ಸೇರ್ಪಡೆಯಾಗುತ್ತಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ.ಸಾಮಾನ್ಯವಾಗಿ ಹೊಸ ವರ್ಷದ ಹಾಗೂ ಆರ್ಥಿ ವರ್ಷದ ಆರಂಭದಲ್ಲಿ ಕಾರುಗಳ ಬೆಲೆಯಲ್ಲಿ ಏರಿಕೆಯಾಗುತ್ತದೆ.

ವಕ್ಫ್‌ ಬಿಲ್ ವಿರುದ್ಧ ಮುಸ್ಲಿಂ ಮಂಡಳಿ ದೇಶವ್ಯಾಪಿ ಹೋರಾಟ

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ-2024ರ ವಿರುದ್ಧ ಬೆಂಗಳೂರು ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಘೋಷಿಸಿದೆ. ವಕ್ಫ್‌ ಮಸೂದೆ ಇದೇ ವಾರ ಸಂಸತ್ತಿನಲ್ಲಿ ಮಂಡನೆ ಆಗುವ ಸಾಧ್ಯತೆ ಇರುವ ಬೆನ್ನಲ್ಲೇ ಈ ಹೋರಾಟ ಘೋಷಿಸಲಾಗಿದೆ.ಮೊದಲ ಹಂತದ ಪ್ರತಿಭಟನೆಯ ಭಾಗವಾಗಿ ಮಾ.26 ಮತ್ತು 29ರಂದು ಕ್ರಮವಾಗಿ ಬಿಹಾರದ ಪಟನಾ ಮತ್ತು ಆಂಧ್ರಪ್ರದೇಶದ ವಿಜಯವಾಡದಲ್ಲಿ ಬೃಹತ್ ಧರಣಿಗಳನ್ನು ಆಯೋಜಿಸಲಾಗಿದೆ. ಬಳಿಕ ಬೆಂಗಳೂರು ಹಾಗೂ ಇತರೆಡೆ ನಡೆಯಲಿದೆ.

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಕ್ಫ್ ಮಸೂದೆಯು ವಕ್ಫ್ ಆಡಳಿತವನ್ನು ಮೊಟಕುಗೊಳಿಸುತ್ತದೆ ಮತ್ತು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ ಎಂಬುದು ಮುಸ್ಲಿಂ ಸಂಘಟನೆಗಳು ಹಾಗೂ ಪ್ರತಿಪಕ್ಷಗಳ ಆರೋಪ.‘ಬಿಜೆಪಿ ಮಸೂದೆಯನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ಅದು ನಮ್ಮ ಬೆಂಬಲವನ್ನು ಕಳೆದುಕೊಳ್ಳಲಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದಲಿತ, ಆದಿವಾಸಿ, ಒಬಿಸಿ ಸಮುದಾಯಗಳ ಪ್ರಮುಖರು ನಮ್ಮೊಡನೆ ಕೈಜೋಡಿಸಿದ್ದಾರೆ. ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಸೇರಿದಂತೆ ಬಿಜೆಪಿಯೇತರ ಅನೇಕ ಪಕ್ಷಗಳಿಗೆ ಆಹ್ವಾನ ನೀಡಿದ್ದೇವೆ’ ಎಂದು ಎಐಎಂಪಿಎಲ್‌ಬಿ ವಕ್ತಾರ ಇಲ್ಯಾಸ್ ತಿಳಿಸಿದ್ದಾರೆ.

Share this article