ನ್ಯೂಯಾರ್ಕ್: ಭಾರತ ಮೂಲದ ಮಹಿಳೆ ಸರಿತಾ ರಾಮರಾಜು (48) ಎಂಬಾಕೆ, ಗಂಡನ ಮೇಲಿನ ಕೋಪದಿಂದಾಗಿ ತನ್ನ 11 ವರ್ಷದ ಮಗನನ್ನು, ಕತ್ತು ಸೀಳಿ ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ. ಹತ್ಯೆಗೀಡಾದ ಬಾಲಕ ಬೆಂಗಳೂರು ಮೂಲದ ಪ್ರಕಾಶ್ ರಾಜು ಎಂಬುವರ ಪುತ್ರ ಮತ್ತು ಕೃತ್ಯ ಎಸಗಿದ ಸರಿತಾ, ಪ್ರಕಾಶ್ ಪತ್ನಿ.
ಈಗ ಈಕೆಯನ್ನು ಬಂಧಿಸಲಾಗಿದ್ದು, ಕೃತ್ಯಕ್ಕಾಗಿ 26 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ.
2018ರಲ್ಲಿ ಬೆಂಗಳೂರು ಮೂಲದವರಾದ ಪತಿ ಪ್ರಕಾಶ್ ರಾಜು ಅವರಿಂದ ಸರಿತಾ ವಿಚ್ಛೇದನ ಪಡೆದಿದ್ದರು. 11 ವರ್ಷದ ಮಗನ ಕಸ್ಟಡಿಯನ್ನು ತಂದೆ ಪ್ರಕಾಶ್‌ಗೆ ನೀಡಲಾಗಿತ್ತು. ಆದರೆ ಕಾಯಂ ಕಸ್ಟಡಿ ತನಗೆ ಸಿಗಲಿಲ್ಲ ಎಂಬ ಬೇಜಾರು ಸರಿತಾಗೆ ಇತ್ತು. ಆದಾಗ್ಯೂ ಸರಿತಾ ಅವರಿಗೆ ಆಗಾಗ ಮಗನನ್ನು ಭೇಟಿಯಾಗುವ ಅವಕಾಶ ನೀಡಲಾಗಿತ್ತು.
ಇದೇ ಸಂದರ್ಭ ಬಳಸಿಕೊಂಡ ಸರಿತಾ, ಮಗನನ್ನು 3 ದಿನ ಡಿಸ್ನಿಲ್ಯಾಂಡ್‌ಗೆ ಕರೆದೊಯ್ದಿದ್ದಳು. ಅಲ್ಲದೆ, ತಾವಿದ್ದ ಹೋಟೆಲ್‌ನಲ್ಲಿ ಚಾಕುವಿನಿಂದ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಬಳಿಕ ಸ್ವತಃ ಪೊಲೀಸರಿಗೆ ಕರೆ ಮಾಡಿ ತನ್ನ ಕೃತ್ಯವನ್ನು ವಿವರಿಸಿ, ತಾನೂ ಸಾಯಲೆಂದು ಔಷಧಿ ಸೇವಿಸಿರುವುದಾಗಿ ತಿಳಿಸಿದ್ದಾಳೆ.
ಮಗನ ಕಸ್ಟಡಿ ತನಗೆ ಸಿಗದ ಕೋಪದಲ್ಲಿ ಆತನನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಅಮೆರಿಕದಲ್ಲಿ ಗುಂಡಿಕ್ಕಿ ಭಾರತೀಯ ತಂದೆ-ಮಗಳ ಹತ್ಯೆ
ನ್ಯೂ ಯಾರ್ಕ್: ವರ್ಜೀನಿಯಾದ ಪೂರ್ವ ತೀರದಲ್ಲಿರುವ ಅಕೋಮಾಕ್ ಪ್ರಾಂತ್ಯದ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಭಾರತ ಮೂಲದ ತಂದೆ ಹಾಗೂ ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಂಗಡಿ ಬಾಗಿಲು ಹಾಕಿದ್ದ ಕಾರಣ ಬೇಸತ್ತು ಆತ ಈ ಕೃತ್ಯ ಎಸಗಿದ್ದಾನೆ.
ಮೃತ ಪ್ರದೀಪ್ ಕುಮಾರ್ (56) ಮತ್ತು ಅವರ 24 ವರ್ಷದ ಮಗಳು ಊರ್ಮಿ ತಮ್ಮ ಸಂಬಂಧಿ ಪರೇಶ್ ಪಟೇಲ್ ಎಂಬುವರ ಅಂಗಡಿಯಲ್ಲಿ ಕೆಲಸಕ್ಕಿದ್ದರು. ಎಂದಿನಂತೆ ಮುಂಜಾನೆ ಇಬ್ಬರೂ ಕೆಲಸಕ್ಕೆ ಬಂದಾಗ, ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆಗೈದಿದ್ದಾನೆ. ಆರೋಪಿಯನ್ನು ಜಾರ್ಜ್ ವಾರ್ಟನ್ (44) ಎಂದು ಗುರುತಿಸಲಾಗಿದ್ದು, ಆತ ರಾತ್ರಿ ಇಡೀ ಅಂಗಡಿಯ ಬಳಿಯೇ ಇದ್ದ ಎಂದು ತಿಳಿದುಬಂದಿದೆ.ಬೆಳಗ್ಗೆ ಪ್ರದೀಪ್ ಹಾಗೂ ಅವರ ಮಗಳು ಅಂಗಡಿಗೆ ಬರುತ್ತಿದ್ದಂತೆ ‘ಅಂಗಡಿ ಏಕೆ ಮುಚ್ಚಲಾಗಿದೆ?’ ಎಂದು ಪ್ರಶ್ನಿಸಿದ ಆರೋಪಿ, ಅವರತ್ತ ಗುಂಡು ಹಾರಿಸಿದ್ದಾನೆ. ಈ ವೇಳೆ ಪ್ರದೀಪ್‌ಗೆ 2 ಹಾಗೂ ಊರ್ಮಿಗೆ 1 ಗುಂಡು ತಗುಲಿದ್ದು, ಅವರ ಸಾವಿಗೆ ಕಾರಣವಾಗಿದೆ.
3 ತಿಂಗಳಿಂದ ಭಾರತೀಯ ಟೆಕ್ಕಿ ಕತಾರ್ ಜೈಲಲ್ಲಿ ಬಾಕಿ
ದೋಹಾ: ದತ್ತಾಂಶ ಕಳ್ಳತನ ಆರೋಪದಲ್ಲಿ ಗುಜರಾತ್‌ನ ವಡೋದರಾ ಮೂಲದ ಇಂಜಿನಿಯರ್ ಹಾಗೂ ಟೆಕ್ ಮಹೀಂದ್ರಾ ಉದ್ಯೋಗಿ ಅಮಿತ್ ಗುಪ್ತಾ ಅವರನ್ನು ಕತಾರ್ ಪೊಲೀಸರು ಬಂಧಿಸಿದ್ದು, ಕಳೆದ 3 ತಿಂಗಳಿಂದ ಅವರು ಜೈಲಲ್ಲೇ ಕೊಳೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಭಾರತ ದೂತಾವಾಸ ಈ ಬಗ್ಗೆ ಕತಾರ್ ಸರ್ಕಾರದ ಜತೆ ಸಂಪರ್ಕಕ್ಕೆ ಬಂದಿದ್ದು, ಅಮಿತ್ ರಕ್ಷಣೆಗೆ ಯತ್ನ ಆರಂಭಿಸಿದೆ.ಈ ಕುರಿತು ಗುಪ್ತಾ ತಾಯಿ ಪುಷ್ಪಾ ಪ್ರತಿಕ್ರಿಯಿಸಿದ್ದು, ‘ಜ.1ರಂದೇ ಮಗನನ್ನು ಬಂಧಿಸಲಾಗಿದೆ. ಅಮಿತ್ ಬಂಧನದ ಮಾಹಿತಿ ತಿಳಿದು ಕತಾರ್‌ಗೆ ತೆರಳಿ ಅಲ್ಲಿನ ಭಾರತೀಯ ರಾಯಭಾರಿಯನ್ನು ಭೇಟಿಯಾಗಿದ್ದೇನೆ. ಆದರೆ ಇದುವರೆಗೆ ಯಾವುದೇ ಧನಾತ್ಮಕ ಪ್ರತಿಕ್ರಿಯೆ ಬಂದಿಲ್ಲ’ ಎಂದಿದ್ದಾರೆ.
‘ಅಮಿತ್ ನಿರಪರಾಧಿ. ಆತನ ವಿರುದ್ಧ ಸುಳ್ಳು ದತ್ತಾಂಶ ಕಳ್ಳತನ ಆರೋಪ ಹೊರಿಸಲಾಗಿದೆ. ಆತನನ್ನು ತುರ್ತು ಬಿಡುಗಡೆ ಮಾಡಬೇಕು. ಪ್ರಧಾನಿ ಕಾರ್ಯಾಲಯ ಮಧ್ಯಪ್ರವೇಶಿಸಬೇಕು’ ಎಂದು ಕುಟುಂಬ ಆಗ್ರಹಿಸಿದೆ.