ರಾಮನೂರು ಅಯೋಧ್ಯೆಯಲ್ಲಿ ನೂಕುನುಗ್ಗಲು!

KannadaprabhaNewsNetwork | Updated : Jan 24 2024, 07:25 AM IST

ಸಾರಾಂಶ

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ಮೊದಲ ದಿನವೇ ರಾಮನ ದರ್ಶನ ಮಾಡಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ನುಗ್ಗಿ ಬಂದ ಕಾರಣ, ಭಾರಿ ನೂಕುನುಗ್ಗಲು ಉಂಟಾಗಿದೆ.

ಪಿಟಿಐ ಅಯೋಧ್ಯೆ

ಸೋಮವಾರ ಪ್ರಾಣಪ್ರತಿಷ್ಠಾಪಿತನಾದ ಅಯೋಧ್ಯೆ ಶ್ರೀರಾಮನ ವಿಗ್ರಹವನ್ನು ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ. ಆದರೆ ಮೊದಲ ದಿನವೇ ರಾಮನ ದರ್ಶನ ಮಾಡಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಅಯೋಧ್ಯೆಗೆ ನುಗ್ಗಿ ಬಂದ ಕಾರಣ, ಭಾರಿ ನೂಕುನುಗ್ಗಲು ಉಂಟಾಗಿದೆ. 

ಇದೇ ವೇಳೆ ಜನಸಂದಣಿ ನಿಯಂತ್ರಿಸಲಾಗದೇ ಉತ್ತರ ಪ್ರದೇಶ ಪೊಲೀಸರು ಸುಸ್ತಾಗಿ ಹೋಗಿದ್ದು, ಸದ್ಯಕ್ಕೆ ಅಯೋಧ್ಯೆಯತ್ತ ಬರಬೇಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ.

ಇನ್ನು ಭಕ್ತರ ಸಂದಣಿ ನಿಯಂತ್ರಿಸಲು ರಾಮಮಂದಿರಕ್ಕೆಂದೇ ಒಬ್ಬ ಐಎಎಸ್‌ ದರ್ಜೆಯ ಮ್ಯಾಜಿಸ್ಟ್ರೇಟರನ್ನು ನೇಮಿಸಲಾಗಿದೆ.

ಮೊದಲ ದಿನ ಮಧ್ಯಾಹ್ನದ ವೇಳೆಗೆ ಸುಮಾರು 2.5ರಿಂದ 3 ಲಕ್ಷ ಜನರು ದರ್ಶನ ಮಾಡಿದ್ದು, ರಾತ್ರಿ ವೇಳೆ ಅಂದಾಜು 5 ಲಕ್ಷ ಭಕ್ತರು ಮೊದಲ ದಿನ ರಾಮಲಲ್ಲಾ ದರ್ಶನ ಪಡೆಯುವಲ್ಲಿ ಯಶಸ್ವಿಯಾದ ಅಂದಾಜಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ಯಾರಿಕೇಡ್‌ ಮುರಿದು ನುಗ್ಗಿದ ಭಕ್ತರು: ಮಂದಿರ ಉದ್ಘಾಟನಾ ದಿನವಾದ ಸೋಮವಾರ ಸಾಮಾನ್ಯ ಭಕ್ತರಿಗೆ ರಾಮಲಲ್ಲಾ ಅವಕಾಶವಿರಲಿಲ್ಲ. ಮಂಗಳವಾರದಿಂದ ಸಾಮಾನ್ಯ ಭಕ್ತರಿಗೆ ದರ್ಶನ ಅವಕಾಶ ನೀಡಲಾಗುವುದು ಎಂದು ಮೊದಲೇ ಘೋಷಿಸಲಾಗಿತ್ತು. 

ಹೀಗಾಗಿ ದೇಶದ ವಿವಿಧೆಡೆಯಿಂದ ವಾಹನಗಳಲ್ಲಿ ಹಾಗೂ ಪಾದಯಾತ್ರೆ ಮೂಲಕ ಬಂದಿದ್ದ ಲಕ್ಷಾಂತರ ಭಕ್ತರು ಸೋಮವಾರ ಮಧ್ಯರಾತ್ರಿ 3 ಗಂಟೆಯಿಂದಲೇ ಕೊರೆವ ಚಳಿಯಲ್ಲಿ ಮಂದಿರದ ಎದುರಿನ ರಾಮಪಥದಲ್ಲಿ ಸರದಿಯಲ್ಲಿ ನಿಂತಿದ್ದರು. 

ನೋಡ ನೋಡುತ್ತಿದ್ದಂತೆಯೇ ಅನೇಕ ಕಿ.ಮೀ.ಗಳ ವರೆಗೆ ಸರದಿ ಸಾಲು ವ್ಯಾಪಿಸಿತು.ಬೆಳಗ್ಗೆ ರಾಮಮಂದಿರ ತೆರೆದಾಗ ದರ್ಶನ ಪಡೆಯಲು ಭಕ್ತರು ನಾಮುಂದು ತಾಮುಂದು ಎಂದು ಸರದಿ ಸಾಲು ಬಿಟ್ಟು ಓಡೋಡಿ ಧಾವಿಸಿದರು. 

ಈ ವೇಳೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ ಮುರಿದು ಮಂದಿರದೊಳಗೆ ನುಗ್ಗಿದರು. ಆಗ ಒಬ್ಬ ಭಕ್ತ ಮೂರ್ಛೆ ಹೋದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. 

ಈ ಹಂತದಲ್ಲಿ ಪೊಲೀಸರು ಏನೂ ಮಾಡಲು ಆಗದೇ ಅಸಹಾಯಕರಾಗಿ ಕೈಚೆಲ್ಲಿ ನಿಲ್ಲುವ ಪರಿಸ್ಥಿತಿ ಬಂತು. ಕೊನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಮಾಡಿದರು. 

ಅಯೋಧ್ಯೆಯ ಎಲ್ಲೆಡೆ ಸೂಟ್‌ಕೇಸ್‌ ಹಿಡಿದು ಹಾಗೂ ಬ್ಯಾಕ್‌ಪ್ಯಾಕ್‌ ಹಾಕಿಕೊಂಡು ನಡೆದಾಡುತ್ತಿದ್ದ ಭಕ್ತರ ದಂಡು ಕಂಡುಬಂತು. ದೇವಸ್ಥಾನದ ಸಮುಚ್ಚಯದತ್ತ ತೆರಳುತ್ತಿದ್ದಂತೆ ಭಕ್ತರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು. 

ಮುಖ್ಯ ದೇವಾಲಯದ ಒಳಗೆ ಹಾಗೂ ಭವ್ಯವಾದ ಸಭಾಂಗಣಗಳಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳು ಪ್ರತಿಧ್ವನಿದವು.

ಭಕ್ತರು ಹೇಳಿದ್ದೇನು?
ನೂಕುನುಗ್ಗಲಿನಲ್ಲೂ ದರ್ಶನ ಮಾಡುವಲ್ಲಿ ಯಶಸ್ವಿಯಾದ ಪಂಜಾಬ್‌ ಭಕ್ತ ಮನೀಶ್‌ ಶರ್ಮಾ, ‘ತುಂಬಾ ಸಂತೋಷವಾಯಿತು, ನನ್ನ ಜೀವನದ ಗುರಿ ಈಡೇರಿದೆ’ ಎಂದು ಹೇಳಿದರು.

ಜನಸಂದಣಿಯಲ್ಲಿ ನಿಂತಿದ್ದ ಬಿಹಾರದ ಮಧೇಪುರ ಜಿಲ್ಲೆಯ ನಿತೀಶ್ ಕುಮಾರ್ ಪ್ರತಿಕ್ರಿಯಿಸಿ, ‘ಅಯೋಧ್ಯೆಗೆ 600 ಕಿ.ಮೀ. ದೂರದಿಂದ ಸೈಕಲ್‌ನಲ್ಲಿ ಯಾತ್ರೆ ಮಾಡುತ್ತ ಬಂದಿದ್ದೇನೆ. ಈಗ ಭಾರೀ ರಶ್ ಇದೆ. 

ಆದರೆ ಇಂದೇ ದರ್ಶನಭಾಗ್ಯ ಲಭಿಸುವ ಆಶಾವಾದವಿದೆ. ಒಂದು ವೇಳೆ ಸಿಗದಿದ್ದರೆ ದರ್ಶನ ಆಗೋವರೆಗೂ ಅಯೋಧ್ಯೆಯಲ್ಲೇ ಇರುವೆ’ ಎಂದರು.ಛತ್ತೀಸ್‌ಗಡದಿಂದ 8 ಸ್ನೇಹಿತರೊಂದಿಗೆ ಅಯೋಧ್ಯೆಗೆ ಪಾದಯಾತ್ರೆಯಲ್ಲಿ ಬಂದ ಭಕ್ತ ಸುನೀಲ್‌ ಮಹತೋ ಮಾತನಾಡಿ, ‘ಇಷ್ಟೊಂದು ರಶ್ ಇರುತ್ತದೆ ಎಂದು ಊಹಿಸಿರಲಿಲ್ಲ. 

ಅಯೋಧ್ಯೆಯಲ್ಲಿ ಆಶ್ರಮವೊಂದರಲ್ಲಿ ತಂಗಿದ್ದು, ದರ್ಶನ ಮಾಡಿಯೇ ಊರಿಗೆ ಮರಳುತ್ತೇವೆ’ ಎಂದರು.ಮಹಾರಾಷ್ಟ್ರ ಮೂಲದ ಗೋಪಾಲ ಕೃಷ್ಣ ಮಾತನಾಡಿ, ‘ಇನ್ನು ಮುಂದೆ ಪೊಲೀಸರು ಪ್ರಯಾಣದ ಮೇಲೆ ನಿರ್ಬಂಧ ಹೇರುತ್ತಾರೆ ಮತ್ತು ಹೋಟೆಲ್‌ಗಳಲ್ಲಿ ಕೊಠಡಿಗಳು ಲಭ್ಯವಿರುವುದಿಲ್ಲ ಎಂಬ ವದಂತಿ ಹಬ್ಬಿವೆ. ಹೀಗಾಗಿ ಈಗಲೇ ರಾಮ ದರ್ಶನಕ್ಕೆ ಬಂದೆ’ ಎಂದರು.

ಸದ್ಯಕ್ಕೆ ಅಯೋಧ್ಯೆಗೆ ಬರಬೇಡಿ: ವಿವಿಧ ರಾಜ್ಯಗಳಿಂದ ಬಂದಿರುವ ಸಾವಿರಾರು ಭಕ್ತರು ಲಖನೌನಿಂದ ಬಾರಾಬಂಕಿ ಮೂಲಕ ವಾಹನಗಳಲ್ಲಿ ಹಾಗೂ ಪಾದಯಾತ್ರೆ ಮೂಲಕ ಅಯೋಧ್ಯೆಗೆ ತೆರಳುತ್ತಿದ್ದಾರೆ. 

ಅಯೋಧ್ಯೆಯಲ್ಲಿ ಸೋಮವಾರ ಪರಿಸ್ಥಿತಿ ಕೈಮೀರಿದ್ದರಿಂದ ಬಾರಾಬಂಕಿಯಲ್ಲೇ ವಾಹನ ಹಾಗೂ ಪಾದಯಾತ್ರಿಕರನ್ನು ಪೊಲೀಸರು ತಡೆಹಿಡಿದಿದ್ದಾರೆ. 

ಅಯೋಧ್ಯೆಯಲ್ಲಿ ಸ್ಥಿತಿ ಸರಿಯಾಗುವವರೆಗೂ ಅತ್ತ ಪ್ರಯಾಣಿಸಬೇಡಿ ಎಂದು ದೇಶದ ಜನರಲ್ಲಿ ಉತ್ತರ ಪ್ರದೇಶ ಪೊಲೀಸರು ಕೇಳಿಕೊಂಡಿದ್ದಾರೆ.

ಮಂದಿರ ಉದ್ಘಾಟನೆ ವೇಳೆ ದೇಶದಲ್ಲಿ ₹1.25 ಲಕ್ಷ ಕೋಟಿ ವ್ಯಾಪಾರ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ 1.25 ಲಕ್ಷ ಕೋಟಿ ರು. ವಹಿವಾಟು ನಡೆದಿದೆ ಎಂದು ಅಖಿಲ ಭಾರತ ವ್ಯಾಪಾರಸ್ಥರ ಒಕ್ಕೂಟ ತಿಳಿಸಿದೆ.

 ‘ರಾಮಮಂದಿರ ಉದ್ಘಾಟನೆ ನಿಮಿತ್ತ ದೇಶಾದ್ಯಂತ ಉತ್ಸವ ಆಚರಿಸಲಾಯಿತು. ಈ ಪ್ರಯುಕ್ತ ದೇಶಾದ್ಯಂತ ಸಣ್ಣ ವ್ಯಾಪಾರಸ್ಥರಿಗೆ ಹೆಚ್ಚಿನ ಮಟ್ಟದ ವ್ಯಾಪಾರವಾಗಿದೆ. 

ಈ ಪೈಕಿ ಉತ್ತರ ಪ್ರದೇಶವೊಂದರಲ್ಲೇ 40 ಸಾವಿರ ಕೋಟಿ ರು. ವಹಿವಾಟು ನಡೆದಿದೆ. ದೆಹಲಿಯಲ್ಲಿ 25 ಸಾವಿರ ಕೋಟಿ ರು. ವಹಿವಾಟು ನಡೆದಿದೆ. ರಾಮನ ಮೇಲಿನ ಭಕ್ತಿಯಿಂದ ದೇಶದಲ್ಲಿ ಮುಂಚೆ ಚಾಲ್ತಿಯಲ್ಲಿದ್ದ ಸನಾತನ ಆರ್ಥಿಕತೆ ಮರುಕಳಿಸಿದೆ’ ಎಂದು ಒಕ್ಕೂಟ ಹೇಳಿದೆ.

ಅಯೋಧ್ಯೆ ರಾಮನ ಹೆಸರು ‘ಬಾಲಕ ರಾಮ’

ಅಯೋಧ್ಯೆ: ಸೋಮವಾರ ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಹೊಸ ರಾಮಲಲ್ಲಾ ವಿಗ್ರಹಕ್ಕೆ ‘ಬಾಲಕ ರಾಮ’ ಎಂದು ನಾಮಕರಣ ಮಾಡಲಾಗಿದೆ. 

ಮೈಸೂರಿನ ಅರುಣ್‌ ಯೋಗಿರಾಜ್‌ ಕೆತ್ತಿರುವ ಈ ವಿಗ್ರಹವು ಇದು 5 ವರ್ಷ ವಯಸ್ಸಿನ ಪುಟ್ಟ ರಾಮನು ನಿಂತಿರುವ ಭಂಗಿಯಲ್ಲಿ ದೇವರನ್ನು ಚಿತ್ರಿಸಿರುವುದರಿಂದ ಈ ಹೆಸರಿಡಲಾಗಿದೆ.

ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ ಅರ್ಚಕ ಅರುಣ್‌ ದೀಕ್ಷಿತ್‌ ಮಂಗಳವಾರ ಮಾತನಾಡಿ, ‘ಜ.22ರಂದು ಪ್ರತಿಷ್ಠಾಪಿಸಲ್ಪಟ್ಟ ಶ್ರೀರಾಮನ ವಿಗ್ರಹಕ್ಕೆ ‘ಬಾಲಕ ರಾಮ’ ಎಂದು ನಾಮಕರಣ ಮಾಡಲಾಗಿದೆ.

ಭಗವಾನ್ ರಾಮನ ವಿಗ್ರಹಕ್ಕೆ ‘ಬಾಲಕ ರಾಮ’ ಎಂದು ನಾಮಕರಣ ಮಾಡಲು ಕಾರಣ ಅವನು 5 ವರ್ಷ ವಯಸ್ಸಿನ ಮಗುವನ್ನು ಹೋಲುತ್ತಾನೆ’ ಎಂದರು.

ನೂತನವಾಗಿ ಪ್ರಾಣಪ್ರತಿಷ್ಠೆ ಮಾಡಲ್ಪಟ್ಟ ಅಯೋಧ್ಯೆಯ ಬಾಲಕ ರಾಮನಿಗೆ ಮಂಗಳವಾರದಿಂದ 48 ದಿನಗಳ ಕಾಲ ನಿರಂತರವಾಗಿ ಮಂಡಲ ಪೂಜೆಗಳು ನಡೆಯಲಿವೆ.

ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಈ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಮಂಗಳವಾರ ಮೊದಲ ಮಂಗಳಾರತಿಯನ್ನು ಪೇಜಾವರ ಶ್ರೀಗಳೇ ಮಾಡಿದರು.

‘ನಾನು ಮೊದಲ ಬಾರಿಗೆ ವಿಗ್ರಹವನ್ನು ನೋಡಿದಾಗ ರೋಮಾಂಚನಗೊಂಡೆ. ನನ್ನ ಮುಖದ ಮೇಲೆ ಕಣ್ಣೀರು ಹರಿಯಲು ಪ್ರಾರಂಭವಾಯಿತು. ಆಗ ನಾನು ಅನುಭವಿಸಿದ ಭಾವನೆಯನ್ನು ವಿವರಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

‘ನಾನು ಈವರೆಗೆ ಸುಮಾರು 50-60 ಪ್ರತಿಷ್ಠಾಪನೆಗಳನ್ನು ನಡೆಸಿದ್ದೇನೆ. ಆದರೆ ಇದುವರೆಗೆ (ನಾನು) ಮಾಡಿದ ಎಲ್ಲ ಪ್ರಾಣಪ್ರತಿಷ್ಠೆಗಳ ಪೈಕಿ ಇದು ನನಗೆ ಅತ್ಯಂತ ‘ಅಲೌಕಿಕ’ (ದೈವಿಕ) ಮತ್ತು ಸರ್ವೋಚ್ಚ ಆದುದು. ಪ್ರಾಣಪ್ರತಿಷ್ಠೆಗೂ 4 ದಿನ ಮುನ್ನ ಅಂದರೆ ಜನವರಿ 18ರಂದೇ ನಾನು ವಿಗ್ರಹದ ಮೊದಲ ನೋಟವನ್ನು ನೋಡಿದ್ದೆ’ ಎಂದರು.

Share this article