ಮಾಸ್ಕೋ: ಸಿರಿಯಾದಲ್ಲಿ ಅಂತರ್ಯುದ್ಧ ನಡೆದ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಬಷರ್ ಅಲ್ ಅಸಾದ್ ಸರ್ಕಾರ, ತಮ್ಮ ದೇಶದ 2,082 ಕೋಟಿ ರು. ಮೌಲ್ಯದ ಸಂಪತ್ತನ್ನು ಮಿತ್ರ ರಾಷ್ಟ್ರ ರಷ್ಯಾಗೆ ಸಾಗಿಸಿದ್ದು ಇದೀಗ ಬಹಿರಂಗವಾಗಿದೆ.
ಸಿರಿಯಾ ಆರ್ಥಿಕತೆಯನ್ನು ಉಸಿರಿಗಟ್ಟಿಸುವ ಉದ್ದೇಶದಿಂದ ಪಾಶ್ಚಿಮಾತ್ಯ ರಾಷ್ಟ್ರಗಳು ಹೇರಿದ ಆರ್ಥಿಕ ನಿರ್ಬಂಧಗಳಿಂದ ತಪ್ಪಿಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ನಿಭಾಯಿಸಲು ಹಾಗೂ ರಷ್ಯಾದೊಂದಿಗಿನ ಆರ್ಥಿಕ ಸಂಬಂಧವನ್ನು ಬಲಗೊಳಿಸಲು ಅಸಾದ್ ಈ ಕ್ರಮ ಜರುಗಿಸಿದ್ದರು. 2018- 2019ರ ಅವಧಿಯಲ್ಲಿ ಹಣವನ್ನು ಸಿರಿಯಾ ವಿಮಾನಗಳಲ್ಲಿ ಮಾಸ್ಕೋಗೆ ಹೊತ್ತೊಯ್ಯಲಾಗಿತ್ತು. ನಗದು ಹಾಗೂ ಬಿಲ್‌ಗಳ ರೂಪದಲ್ಲಿ ರಷ್ಯಾದ ಬ್ಯಾಂಕುಗಳಲ್ಲಿ ಹಣವನ್ನು ಸಿರಿಯಾ ಠೇವಣಿ ಇರಿಸಿತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ.
ರಷ್ಯಾದಲ್ಲಿ ರಿಯಲ್ ಎಸ್ಟೇಟ್ ದಂಧೆ:
ಅಷ್ಟೇ ಅಲ್ಲ, ಅಸಾದ್ ಪರಿವಾರ ರಷ್ಯಾದಲ್ಲಿ ಆಸ್ತಿಯನ್ನೂ ಖರೀದಿಸಿ ರಿಯಲ್ ಎಸ್ಟೇಟ್‌ಗಳ ಮೇಲೆಯೂ ಹೂಡಿಕೆ ಮಾಡಿತ್ತು. ಇತ್ತ, ಅಸಾದ್‌ರ ಪತ್ನಿ ಆಸ್ಮಾ ಅಂತಾರಾಷ್ಟ್ರೀಯ ಡ್ರಗ್ ದಂಧೆ, ಇಂಧನ ಕಳ್ಳಸಾಗಣೆ ಸೇರಿದಂತೆ ಸಿರಿಯಾದ ಆರ್ಥಿಕತೆಯನ್ನು ಅಕ್ರಮವಾಗಿ ನಿಯಂತ್ರಿಸಿ ಅಧಿಕ ಆದಾಯ ಗಳಿಸುತ್ತಿದ್ದರು ಎಂದೂ ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಕಾರ್ಯದರ್ಶಿ ಡೇವಿಡ್ ಶೆಂಕರ್, ‘ತಮ್ಮ ಅಕ್ರಮ ಸಂಪತ್ತು ಹಾಗೂ ಸಿರಿಯಾದ ಅಧಿಕಾರವನ್ನು ಕಾಪಾಡಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಜತೆಗೆ, ಇದು ಅಸಾದ್ ಹಾಗೂ ಅವರ ಆಪ್ತರ ಉತ್ತಮ ಜೀವನಕ್ಕೂ ಅವಶ್ಯಕವಾಗಿತ್ತು’ ಎಂದರು.
ಭಿಕ್ಷೆ ನೀಡಿದರೆ ಜ.1ರಿಂದ ಇಂದೋರಲ್ಲಿ ಎಫ್‌ಐಆರ್!
ಇಂದೋರ್ : ಕೇಂದ್ರ ಸರ್ಕಾರದ ಭಿಕ್ಷಾಟನೆ ಮುಕ್ತ ನಗರ ಯೋಜನೆಯ ಭಾಗವಾಗಿ ಮಧ್ಯಪ್ರದೇಶದ ಇಂದೋರ್ ನಗರವನ್ನು ಭಿಕ್ಷಾಟನೆ ಮುಕ್ತಗೊಳಿಸಲು ನಿರ್ಧರಿಸಲಾಗಿದೆ. ಈ ನಿಮಿತ್ತ 2025ರ ಜ.1ರಿಂದಲೇ ಭಿಕ್ಷೆ ನೀಡುವ ವ್ಯಕ್ತಿಗಳ ಮೇಲೆ ಎಫ್‌ಐಆರ್ ದಾಖಲಿಸಲು ನಿರ್ಧರಿಸಲಾಗಿದೆ.‘ಇಂದೋರ್‌ನಲ್ಲಿ ಭಿಕ್ಷಾಟನೆ ನಿಷೇಧಿಸುವ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಭಿಕ್ಷಾಟನೆ ವಿರುದ್ಧ ನಗರದಲ್ಲಿ ಅಭಿಯಾನ ಪ್ರಾರಂಭಿಸಿದ್ದು ತಿಂಗಳಾಂತ್ಯದವರೆಗೆ ಮುಂದುವರಿಯಲಿದೆ. ಭಿಕ್ಷೆ ನೀಡುವ ಪಾಪದಲ್ಲಿ ಜನರು ಭಾಗಿಯಾಗಬಾರದು’ ಎಂದು ಜಿಲ್ಲಾಧಿಕಾರಿ ಆಶಿಷ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚಿನ ತಿಂಗಳುಗಳಲ್ಲಿ ಜನರನ್ನು ಭಿಕ್ಷೆಗೆ ಪ್ರೇರಿಸುವ ಹಲವು ಗುಂಪುಗಳನ್ನು ಜಿಲ್ಲಾಡಳಿತ ನಿರ್ಬಂಧಿಸಿದ್ದು, ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಿದೆ.ದೇಶದಲ್ಲಿ 10 ನಗರಗಳನ್ನು ಭಿಕ್ಷಾಟನೆ ಮುಕ್ತ ಮಾಡುವ ಪೈಲಟ್ ಯೋಜನೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಆರಂಭಿಸಿದೆ. ಈ ನಗರಗಳಲ್ಲಿ ಇಂದೋರ್ ಸಹ ಒಂದು.
ಮಹಾ ಮಂತ್ರಿಮಂಡಲ ವಿಸ್ತರಣೆ: ಎನ್‌ಸಿಪಿ, ಸೇನೆಯಲ್ಲಿ ಅತೃಪ್ತಿ ಭುಗಿಲು
ಮುಂಬೈ: ಮಹಾರಾಷ್ಟ್ರದಲ್ಲಿ ಭಾನುವಾರ ಮಂತ್ರಿಮಂಡಲ ವಿಸ್ತರಣೆಯಾದ ಬೆನ್ನಲ್ಲೇ ಆಡಳಿತಾರೂಢ ಮಹಾಯುತಿ ಕೂಟದ ಭಾಗವಾದ ಶಿವಸೇನೆ (ಶಿಂಧೆ ಬಣ) ಹಾಗೂ ಎನ್‌ಸಿಪಿ(ಅಜಿತ್ ಬಣ)ದಲ್ಲಿ ಅಸಮಾಧನ ಭುಗಿಲೆದ್ದಿದೆ.ತಮಗೆ ಶಿವಸೇನೆ ಅಧ್ಯಕ್ಷ ಏಕನಾಥ ಶಿಂಧೆ ಅವರು ಸಚಿವ ಸ್ಥಾನ ಖಚಿತ ಎಂಬ ಭರವಸೆ ನೀಡಿದ್ದರೂ ಇದೀಗ ಸಂಪುಟಕ್ಕೆ ಆಯ್ಕೆಯಾಗದೇ ಇರುವುದರಿಂದ ಬೇಸರಗೊಂಡಿರುವ ಶಾಸಕ ನರೇಂದ್ರ ಭೋಂಡೆಕರ್, ತಾವು ನಿಭಾಯಿಸುತ್ತಿದ್ದ ಪಕ್ಷದ ಉಪ ನಾಯಕ ಹಾಗೂ ಪೂರ್ವ ವಿದರ್ಭ ಜಿಲ್ಲೆಗಳ ಸಂಯೋಜಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಅತ್ತ ಎನ್‌ಸಿಪಿ (ಅಜಿತ್ ಬಣ)ಯ ಹಿರಿಯ ನಾಯಕ ಛಗನ್ ಭುಜಬಲ್ ಅವರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದು, ತಮ್ಮ ಕ್ಷೇತ್ರದ ಜನರೊಂದಿಗೆ ಮಾತಾಡಿ ಮುಂದಿನ ನಡೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.