ಬೆಂಗಳೂರು : ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವುದಕ್ಕೆ ಇದೀಗ ಬಿಬಿಎಂಪಿ ಬರೋಬ್ಬರಿ 5 ಕೋಟಿ ರು. ವೆಚ್ಚದಲ್ಲಿ 2 ವಿದೇಶ ತಂತ್ರಜ್ಞಾನ ಆಧಾರಿತ ಯಂತ್ರಗಳನ್ನು ಖರೀದಿಗೆ ಮುಂದಾಗಿದೆ.
ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಬಾಯ್ದೆರೆದುಕೊಂಡಿವೆ. ದಿನದಿಂದ ದಿನಕ್ಕೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ಸವಾರರು ಪ್ರಾಣವನ್ನು ಪಣಕ್ಕಿಟ್ಟು ಓಡಾಟ ನಡೆಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ನಿಯಮಿತವಾಗಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಕ್ರಮವಹಿಸದ ಬಿಬಿಎಂಪಿಯ ಅಧಿಕಾರಿಗಳು ಇದೇ ಸಮಯ ಬಳಕೆ ಮಾಡಿಕೊಂಡು ದುಬಾರಿ ವೆಚ್ಚದ ಯಂತ್ರಗಳನ್ನು ಖರೀದಿ ಮಾಡುವುದಕ್ಕೆ ಮುಂದಾಗಿದ್ದಾರೆ.
ಜೆಟ್ ಪ್ಯಾಚರ್ ಎಂಬ ಎರಡು ಯಂತ್ರಗಳನ್ನು ಖರೀದಿಗೆ ಬಿಬಿಎಂಪಿ ಮುಂದಾಗಿದೆ. ತಲಾ ಒಂದು ಯಂತ್ರಕ್ಕೆ ಸುಮಾರು 2.5 ಕೋಟಿ ರು. ಬಿಬಿಎಂಪಿ ವೆಚ್ಚ ಮಾಡುವುದಕ್ಕೆ ಮುಂದಾಗಿದೆ.
ಜೆಟ್ ಪ್ಯಾಚರ್ ಯಂತ್ರವೂ ಮಳೆಗಾಲ ಮತ್ತು ಬೇಸಿಗೆ ಎರಡೂ ಅವಧಿಯಲ್ಲಿಯೂ ಕಾರ್ಯ ನಿರ್ವಹಿಸುವ ಯಂತ್ರವಾಗಿದೆ. ಬೇಸಿಗೆ ಅವಧಿಯಲ್ಲಿ ಹಾಟ್ ಮಿಕ್ಸ್(ಡಾಂಬರ್), ಮಳೆಗಾಲದಲ್ಲಿ ಕೋಲ್ಡ್ ಮಿಕ್ಸ್ (ಸಿಮೆಂಟ್ ಮಾದರಿ) ಬಳಕೆ ಮಾಡಿಕೊಂಡು ರಸ್ತೆ ಗುಂಡಿ ಮುಚ್ಚಲಿದೆ. ಸದ್ಯ ಈ ವಾಹನಗಳನ್ನು ನಗರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ರಸ್ತೆ ಗುಂಡಿಗಳು ಇರುವ ರಾಜರಾಜೇಶ್ವರಿ ನಗರ ಮತ್ತು ಪೂರ್ವ ವಲಯದಲ್ಲಿ ಬಳಕೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಫೈಥಾನ್ ಬಳಕೆ ಪ್ಲಾಪ್
ವಿಶೇಷ ವಿನ್ಯಾಸದ ಪೈಥಾನ್ ಯಂತ್ರದ ಮೂಲಕ ಪಡೆದು ರಸ್ತೆ ಗುಂಡಿ ಮುಚ್ಚುತ್ತೇವೆ ಎಂದು ಬಿಬಿಎಂಪಿ ಹೇಳಿತ್ತು. ಆದರೆ, ಆ ಪೈಥಾನ್ ಯಂತ್ರ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
2000ಕ್ಕೂ ಅಧಿಕ ರಸ್ತೆ ಗುಂಡಿ
ಬೆಂಗಳೂರಿನ ರಸ್ತೆಗಳಲ್ಲಿ ಸಾರ್ವಜನಿಕರೇ ಬಿಬಿಎಂಪಿಗೆ 2100 ರಸ್ತೆ ಗುಂಡಿಗಳ ಇವೆ ಎಂದು ದೂರು ನೀಡಿದ್ದಾರೆ. ಈ ಪೈಕಿ ಬಿಬಿಎಂಪಿಯು ಸುಮಾರು 600 ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ಉಳಿದ ರಸ್ತೆ ಗುಂಡಿ ಮುಚ್ಚುವ ಕೆಲಸ ಹೋಗಿಲ್ಲ. ಇನ್ನೂ ನಗರದಲ್ಲಿ ಎಣಿಕೆಗೆ ಬರದಿರುವ ಸಾವಿರಾರು ಸಂಖ್ಯೆಯ ರಸ್ತೆ ಗುಂಡಿಗಳಿವೆ. ಬಿಬಿಎಂಪಿ ಅಧಿಕಾರಿಗಳು ಅವುಗಳನ್ನು ಗುರುತಿಸಿ ಭರ್ತಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ನಿತ್ಯ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ.