ಎಚ್ಚರದಿಂದಿರಿ, ಸನ್ನದ್ಧ ಸ್ಥಿತಿಯಲ್ಲಿರಿ: ಮೋದಿ ಸೂಚನೆ

Published : May 09, 2025, 04:20 AM IST
Prime Minister Narendra Modi

ಸಾರಾಂಶ

ಆಪರೇಷನ್‌ ಸಿಂದೂರದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವಾಲಯ ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ‘ಸದಾ ಎಚ್ಚರದಿಂದಿದ್ದು, ಸ್ಪಷ್ಟ ಸಂವಹನವನ್ನು ಮುಂದುವರೆಸಿ’ ಎಂದು ಸೂಚಿಸಿದ್ದಾರೆ.

 ನವದೆಹಲಿ: ಆಪರೇಷನ್‌ ಸಿಂದೂರದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವಾಲಯ ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ‘ಸದಾ ಎಚ್ಚರದಿಂದಿದ್ದು, ಸ್ಪಷ್ಟ ಸಂವಹನವನ್ನು ಮುಂದುವರೆಸಿ’ ಎಂದು ಸೂಚಿಸಿದ್ದಾರೆ. ಈ ಮೂಲಕ, ‘ಪಾಕ್‌ ವಿರುದ್ಧದ ಪ್ರತೀಕಾರ ಇನ್ನೂ ಮುಗಿದಿಲ್ಲ’ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ರಕ್ಷಣೆ, ಗೃಹ ವ್ಯವಹಾರ, ವಿದೇಶಾಂಗ ವ್ಯವಹಾರ, ಮಾಹಿತಿ ಮತ್ತು ಪ್ರಸಾರ, ವಿದ್ಯುತ್, ಆರೋಗ್ಯ ಮತ್ತು ದೂರಸಂಪರ್ಕ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದ ಸಭೆಯಲ್ಲಿ, ‘ದೇಶವು ಸೂಕ್ಷ್ಮ ಪರಿಸ್ಥಿತಿಯಲ್ಲಿರುವ ಈ ಸಮಯದಲ್ಲಿ ಜಾಗರೂಕತೆ, ಸಂಸ್ಥೆಗಳ ನಡುವಿನ ಸಮನ್ವಯ ಮತ್ತು ಸ್ಪಷ್ಟ ಸಂವಹನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ರಾಷ್ಟ್ರೀಯ ಭದ್ರತೆ, ಕಾರ್ಯಾಚರಣೆಯ ಸನ್ನದ್ಧತೆ ಮತ್ತು ನಾಗರಿಕ ಸುರಕ್ಷತೆಗೆ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಅಂತೆಯೇ, ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಸಚಿವಾಲಯಗಳ ಯೋಜನೆ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು’ ಎಂದು ಪ್ರಧಾನಿ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಂತೆಯೇ, ‘ಕಾರ್ಯದರ್ಶಿಗಳಿಗೆ ತಮ್ಮ ಸಚಿವಾಲಯದ ಕಾರ್ಯಾಚರಣೆಗಳ ಸಮಗ್ರ ಪರಿಶೀಲನೆ ಕೈಗೊಂಡು ಅಗತ್ಯ ವ್ಯವಸ್ಥೆಗಳ ಪರಿಪೂರ್ಣ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಜತೆಗೆ, ಸಿದ್ಧತೆ, ತುರ್ತು ಪ್ರತಿಕ್ರಿಯೆ ಮತ್ತು ಆಂತರಿಕ ಸಂವಹನ ಶಿಷ್ಟಾಚಾರಗಳ ಮೇಲೆಯೂ ವಿಶೇಷ ಗಮನ ಹರಿಸಲು ನಿರ್ದೇಶಿಸಲಾಗಿದೆ. ಇದಕ್ಕೆ ಕಾರ್ಯದರ್ಶಿಗಳೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದೂ ತಿಳಿಸಲಾಗಿದೆ.

PREV

Recommended Stories

ಸೆಣಬಿನ ಚೀಲದಲ್ಲಿ ಸಕ್ಕರೆ ಪ್ಯಾಕಿಂಗ್‌ ಕಡ್ಡಾಯ ಆದೇಶ ಎತ್ತಿಹಿಡಿದ ಹೈಕೋರ್ಟ್‌
ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಡಾ.ಬಿ. ದಿನೇಶ್‌ ಹೆಸರು ಫೈನಲ್‌?