ಅಸ್ವಸ್ಥೆಗಾಗಿ ಗೇಟ್ ತರೆದಿದ್ದೇ ಕಾಲ್ತುಳಿತಕ್ಕೆ ಕಾರಣ

KannadaprabhaNewsNetwork |  
Published : Jan 10, 2025, 12:49 AM IST
ತಿರುಪತಿ | Kannada Prabha

ಸಾರಾಂಶ

ತಿರುಮಲದಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ, ಅಸ್ವಸ್ಥ ಮಹಿಳೆಯನ್ನು ಕರೆದೊಯ್ಯಲು ಗೇಟ್‌ ತೆರೆದಿದ್ದೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಂದ ತಿಳಿದುಬಂದಿದೆ.

ತಿರುಪತಿ: ತಿರುಮಲದಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ, ಅಸ್ವಸ್ಥ ಮಹಿಳೆಯನ್ನು ಕರೆದೊಯ್ಯಲು ಗೇಟ್‌ ತೆರೆದಿದ್ದೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಂದ ತಿಳಿದುಬಂದಿದೆ.

‘ಟಿಕೆಟ್‌ಗಾಗಿ ಹಲವು ಗಂಟೆಗಳಿಂದ ಅನೇಕ ಕೌಂಟರ್‌ಗಳಲ್ಲಿ ಜನ ಕಾದಿದ್ದರು. ಅಂಥದ್ದರಲ್ಲಿ ಬೈರಾಗಿ ಪಟ್ಟಿಡಾ ಪಾರ್ಕ್‌ನಲ್ಲಿನ ಟೋಕನ್ ಕೌಂಟರ್ ಒಂದರಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಮಲ್ಲಿಕಾ (ಇವರು ಮೃತ ಮಹಿಳೆಯಲ್ಲಿ ಒಬ್ಬರು) ಎಂಬ ಮಹಿಳಾ ಭಕ್ತೆಯೊಬ್ಬರು ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಗೇಟ್‌ಗಳನ್ನು ತೆರೆಯಲಾಯಿತು. ಆದರೆ ಟಿಕೆಟ್‌ ಕೌಂಟರ್‌ ಗೇಟನ್ನೇ ತೆರೆಯಲಾಗಿದೆ ಎಂದು ಭಾವಿಸಿದ ಸುಮಾರು 5 ಸಾವಿರ ಮಂದಿ, ನಾಮುಂದು ತಾಮುಂದು ಎಂದು ಕೌಂಟರ್‌ನತ್ತ ಮುಗಿಬಿದ್ದರು. ಇಷ್ಟೊಂದು ಜನ ಏಕಾಏಕಿ ಒಳ ನುಗ್ಗಿದ್ದು ಕಾಲ್ತುಳಿತಕ್ಕೆ ಕಾರಣವಾಯಿತು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಟಿಟಿಡಿ ಅಧ್ಯಕ್ಷ ಬಿ.ಆರ್‌. ನಾಯ್ಡು ಕೂಡ ಇದನ್ನು ಖಚಿತಪಡಿಸಿ, ‘ಆಡಳಿತದ ವೈಫಲ್ಯದಿಂದಾಗಿ ಇದು ಸಂಭವಿಸಿದೆ ಎಂದು ನಾವು ನಂಬುತ್ತೇವೆ. ಡಿಎಸ್ಪಿ ಒಂದು ಪ್ರದೇಶದಲ್ಲಿ ಗೇಟ್ ತೆರೆದರು ಮತ್ತು ಆಗ ಜನ ಏಕಾಏಕಿ ನುಗ್ಗಿದರು’ಎಂದರು.

ಆ್ಯಂಬುಲೆನ್ಸ್‌ ಕೂಡ ಇರಲಿಲ್ಲ:

ಈ ನಡುವೆ, ಮಾರ್ಗಸೂಚಿಗಳ ಪ್ರಕಾರ ಟೋಕನ್ ಕೇಂದ್ರಗಳಲ್ಲಿ ಆ್ಯಂಬುಲೆನ್ಸ್‌ಗಳು ಇರಬೇಕಿತ್ತು. ಆದರೆ ಸಾಕಷ್ಟು ಸಂಖ್ಯೆಯ ಆ್ಯಂಬುಲೆನ್ಸ್‌ ಇರಲಿಲ್ಲ. ಇನ್ನು ಕೆಲವು ಆ್ಯಂಬುಲೆನ್ಸ್‌ ಇದ್ದರೂ ಚಾಲಕರೇ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಕಾಲ್ತುಳಿತದ ನಂತರವೂ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ತಲುಪಲು 15-20 ನಿಮಿಷಗಳನ್ನು ತೆಗೆದುಕೊಂಡಿವು. ಇದರಿಂದ ಗಾಯಾಳುಗಳನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲು ಮಾಡಲು ಆಗಲಿಲ್ಲ ಎಂದು ಗೊತ್ತಾಗಿದೆ.

==

ಸತ್ತೇ ಹೋದೆವು ಎಂದು ಭಾವಿಸಿದ್ದೆವು: ಪ್ರತ್ಯಕ್ಷದರ್ಶಿ

ತಿರುಪತಿ: ಬುಧವಾರ ತಿರುಪತಿಯಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಜೀವ ಉಳಿಸಿಕೊಂಡ ಭಕ್ತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ‘ಕಾಲ್ತುಳಿತದಲ್ಲಿ ನಾವೆಲ್ಲ ಸತ್ತೇ ಹೋದೆವು ಎಂದು ಭಾವಿಸಿದ್ದೆವು. ಆ 5 ನಿಮಿಷ ನರಕಸದೃ ಶವಾಗಿತ್ತು’ ಎಂದು ದುರಂತದಲ್ಲಿ ಬದುಕುಳಿದ ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.‘5 ನಿಮಿಷಗಳ ನಾವೆಲ್ಲರೂ ಸತ್ತೇ ಹೋಗಿದ್ದೆವು ಎಂದು ನಾನು ಭಾವಿಸಿದ್ದೆ. ಕಳೆದ 25 ವರ್ಷಗಳಿಂದ ನಾನು ದೇವಸ್ಥಾನಕ್ಕೆ ಬರುತ್ತಿದ್ದೇನೆ. ಆದರೆ ಯಾವತ್ತೂ ಈ ರೀತಿ ಆಗಿರಲಿಲ್ಲ’ ಎಂದು ಪ್ರತ್ಯಕ್ಷದರ್ಶಿ ಡಿ.ವೆಂಕಟ ಲಕ್ಷ್ಮೀ ಹೇಳಿದ್ದಾರೆ.‘6 ಹುಡುಗರು ಪಕ್ಕಕ್ಕೆ ಕರೆದುಕೊಂಡು ಹೋಗಿ ಸ್ವಲ್ಪ ನೀರು ಕುಡಿಯಲು ಕೊಟ್ಟರು. ನಾನು ನಿಂತಿದ್ದ ಸ್ಥಳದಲ್ಲಿಯೇ 10 ಜನ ಕೆಳಗೆ ಬಿದ್ದರು. ನಾನು ಬೀಳುತ್ತಿದ್ದೇನೆ ಎಂದು ಕೂಗುತ್ತಿದ್ದೆ. ಆದರೆ ಜನ ಹಿಂದಿನಿಂದ ತಳ್ಳುತ್ತಿದ್ದರು. ಅದನ್ನು ನಿಯಂತ್ರಿಸಲಾಗಲಿಲ್ಲ. ನನಗೆ ಬಹಳ ಹೊತ್ತು ಉಸಿರಾಡುವುದಕ್ಕೆ ಸಾಧ್ಯವಾಗಲಿಲ್ಲ’ ಎಂದರು.ಅಲ್ಲದೇ ‘ಪೊಲೀಸರು ಭಕ್ತರಿಗೆ ನಿಯಮದಂತೆ ಮುಂದುವರಿಯಲು ಅವಕಾಶ ನೀಡಿದ್ದರೆ ಅನಾಹುತವನ್ನು ತಪ್ಪಿಸಬಹುದಿತ್ತು’ ಎಂದು ಹೇಳಿದರು.

==

ತಿರುಪತಿ ಕಾಲ್ತುಳಿತ: 3 ಅಧಿಕಾರಿಗಳು ವರ್ಗ, ಇಬ್ಬರು ಸಸ್ಪೆಂಡ್‌

ತಿರುಪತಿ: ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತದಿಂದ, 6 ಜನ ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ಪ್ರಕರಣದ ವಿಚಾರಣೆಯನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಮೂವರು ಸರ್ಕಾರಿ ಅಧಿಕಾರಿಗಳನ್ನು ವರ್ಗಾಯಿಸಿದ್ದಾರೆ. ಅಲ್ಲದೆ, ಘಟನಾ ಸ್ಥಳದಲ್ಲಿದ್ದ ಡಿಎಸ್ಪಿ ಸೇರಿ ಇಬ್ಬರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.ತಿರುಮಲಕ್ಕೆ ಭೇಟಿ ನೀಡಿದ ನಾಯ್ಡು ಹಾಗೂ ಡಿಸಿಎಂ ಪವನ್‌ ಕಲ್ಯಾಣ್‌, ಘಟನಾ ಸ್ಥಳಕ್ಕೆ ಭೇಟಿ ನೀಡಿದರು ಹಾಗೂ ಗಾಯಾಳುಗಳನ್ನು ಸಂತೈಸಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ನಾಯ್ಡು, ‘ಡಿಎಸ್ಪಿ ಸೇರಿದಂತೆ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ತಿರುಪತಿ ಎಸ್ಪಿ, ತಿರುಮಲ ತಿರುಪತಿ ದೇವಸ್ಥಾನಮ್‌(ಟಿಟಿಡಿ)ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇನ್ನೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ’ ಎಂದರು.ಮೃತರ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ:

ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ ಭಕ್ತರ ಕುಟುಂಬಗಳಿಗೆ ನಾಯ್ಡು ತಲಾ 25 ಲಕ್ಷ ರು. ಪರಿಹಾರವನ್ನು ಘೋಷಣೆ ಮಾಡಿದರು. ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 40ಕ್ಕೂ ಹೆಚ್ಚು ಗಾಯಾಳುಗಳಿಗೆ ತಲಾ 2 ಲಕ್ಷ ರು. ಪರಿಹಾರ ಪ್ರಕಟಿಸಿದರು.

ಈ ನಡುವೆ ತಮಿಳುನಾಡು ಸರ್ಕಾರ ಕೂಡ ಮೃತಪಟ್ಟ ಓರ್ವ ತಮಿಳುನಾಡು ಮಹಿಳೆಗೆ 2 ಲಕ್ಷ ರು. ಘೋಷಣೆ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!