ಕೋಲ್ಕತಾ : ಪ.ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳ ಮೇಲೆ ಜನರು ದಾಳಿ ಮಾಡಿದ ಘಟನೆ ಮಾಸುವ ಉನ್ನವೇ ಎನ್‌ಐಎ (ರಾಷ್ಟ್ರೀಯ ತನಿಖಾ ತಂಡ) ಅಧಿಕಾರಿಗಳ ಮೇಲೂ ದಾಳಿ ನಡೆಸಲಾಗಿದೆ. 2022ರ ಬಾಂಬ್ ಸ್ಫೋಟ ಪ್ರಕರಣದ ತನಿಖೆಗಾಗಿ ಎನ್‌ಐಎ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಜೀಪ್ ಮೇಲೆ ಶನಿವಾರ ಮೇದಿನಿಪುರ ಜಿಲ್ಲೆಯ ಭೂಪತಿನಗರದಲ್ಲಿ ಗ್ರಾಮಸ್ಥರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಎನ್‌ಐಎ ಅಧಿಕಾರಿಗೆ ಗಾಯವಾಗಿದೆ.
ಶನಿವಾರ ಬೆಳಿಗ್ಗೆ ಎನ್‌ಐಎ ಅಧಿಕಾರಿಗಳ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿತ್ತು. ಅವರನ್ನು ಬಂಧಿಸಿ ಕೋಲ್ಕತಾಗೆ ಹಿಂದಿರುಗುತ್ತಿದ್ದಾಗ ಎನ್‌ಐಎ ವಾಹನದ ಮೇಲೆ ದಾಳಿ ನಡೆಸಲಾಗಿದೆ.
ಶನಿವಾರದ ಘಟನೆಯು ಜ.5 ರಂದು ಉತ್ತರ-24 ಪರಗಣಗಳ ಸಂದೇಶಖಾಲಿ ಪ್ರದೇಶದಲ್ಲಿ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ರೇಡ್ ಮಾಡಿದ್ದ ಇ.ಡಿ. ಅಧಿಕಾರಿಗಳ ಮೇಲೆ ನಡೆದ ದಾಳಿಯನ್ನು ನೆನಪಿಸಿದೆ.
ನಿನ್ನೆ ಆಗಿದ್ದೇನು?:
‘ಬಂಧಿತರನ್ನು ಒಯ್ಯುತ್ತಿದ್ದ ಎನ್‌ಐಎ ವಾಹನಕ್ಕೆ ಸ್ಥಳೀಯರು ಘೇರಾವ್ ಮಾಡಿದರು ಮತ್ತು ಅದರ ಮೇಲೆ ಕಲ್ಲು ತೂರಿದರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪೊಲೀಸ್ ದೂರು ದಾಖಲಿಸಿದೆ.ಈ ನಡುವೆ ಘಟನೆಯ ಬೆನ್ನಲ್ಲೇ ಕೇಂದ್ರ ಪೊಲೀಸ್ ಪಡೆಯ ಬೃಹತ್ ತುಕಡಿ ಭೂಪತಿನಗರ ತಲುಪಿದ್ದು, ಬಂಧಿತರನ್ನು ಹೊಂದಿದ್ದ ಎನ್ಐಎ ತಂಡಕ್ಕೆ ರಕ್ಷಣೆ ಒದಗಿಸಿದೆ. ಇದರ ಬೆನ್ನಲ್ಲೇ ದಿಲ್ಲಿಯಿಂದ ‘ಇಬ್ಬರನ್ನು ಬಂಧಿಸಲಾಗಿದೆ, ನಮ್ಮ ಅಧಿಕಾರಿಗೆ ಗಾಯಗಳಾಗಿವೆ’ ಎಂದು ಎನ್‌ಐಎ ಅಧಿಕೃತ ಘೋಷಣೆ ಮಾಡಿದೆ.
ಏನಿದು ಪ್ರಕರಣ?:
ಡಿಸೆಂಬರ್ 3, 2022 ರಂದು ಭೂಪತಿನಗರದ ಕಚ್ಚಾ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದರು. ನಂತರ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ತನಿಖೆಯ ಭಾಗವಾಗಿ ಇಬ್ಬರ ಬಂಧನಕ್ಕೆ ಮೇದಿನಿಪುರಕ್ಕೆ ಎನ್‌ಐಎ ತಂಡ ಶನಿವಾರ ಬಂದಿತ್ತು.