ಎಲ್‌ಪಿಜಿಗಾಗಿ ಕ್ಯೂ ನಿಂತಿದ್ದಾಗ ಹೃದಯಾಘಾತ, ಸಾವು
ನವದೆಹಲಿ: ಅನಿಲ ಹಾಗೂ ಇಂಧನದ ಕೊರತೆ ಇಲ್ಲ ಎಂಬ ಕೇಂದ್ರ ಸರ್ಕಾರದ ಸ್ಪಷ್ಟನೆಯ ಹೊರತಾಗಿಯೂ ದೇಶದಲ್ಲಿ ಆ ಬಗೆಗಿನ ಆತಂಕ ಮುಂದುವರಿದಿದೆ. ಪಶ್ಚಿಮ ಬಂಗಾಳ, ರಾಜಸ್ಥಾನದ ಕೋಟಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಡುಗೆ ಅನಿಲ ಕೇಂದ್ರಗಳ ಮುಂದೆ ಸಿಲಿಂಡರ್‌ಗಳೊಂದಿಗೆ ಜನ ಉದ್ದದ ಸರದಿಯಲ್ಲಿ ನಿಂತಿದ್ದರೆ, ಅತ್ತ ಒಂದೊಂದೇ ನಗರಗಳಲ್ಲಿ ಹೊಟೆಲ್‌ಗಳು ಬಾಗಿಲು ಹಾಕುತ್ತಿವೆ.
ಕೋಲ್ಕತಾದಲ್ಲಿ ಎಲ್‌ಪಿಜಿ ಚಾಲಿತ ಆಟೋಗಳು ಸೇವೆ ನಿಲ್ಲಿಸಿವೆ. ಪರಿಣಾಮ ಆಟೋದವರು ಬೆಲೆಯನ್ನು ಶೇ.10ರಿಂದ 25ರಷ್ಟು ಏರಿಕೆ ಮಾಡಿರುವುದಾಗಿ ವರದಿಯಾಗಿದೆ. ಸರದಿಯಲ್ಲಿ ನಿಂತಾಗ ಸಾವು:ಪಂಜಾಬ್‌ನ ಸೆಹ್ನಾ ಎಂಬಲ್ಲಿ ಎಲ್‌ಪಿಜಿ ಸಿಲಿಂಡರ್ ಖರೀದಿಸಲು ಸರದಿಯಲ್ಲಿ ನಿಂತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಸಾಲಲ್ಲಿ ನಿಂತಿದ್ದ ಭೂಷಣ್ ಕುಮಾರ್ 7.50 ಸುಮಾರಿಗೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೇರಳದ 40% ಹೊಟೆಲ್‌ಗೆ ಬೀಗ:
ಹೆಚ್ಚಿದ ಬೇಡಿಯಿಂದ ಏರಿರುವ ಅನಿಲದ ಬೆಲೆಯ ಲಾಭ ಪಡೆಯುವ ಸಲುವಾಗಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ಶೇಖರಿಸಿ ಮಾರಲುದ್ದೇಶಿಸಿದ್ದ ಕೆಲ ಕಡೆಗಳ ಮೇಲೆ ಮಧ್ಯಪ್ರದೇಶದ ಬುಂದೇಲ್‌ಖಂಡ್‌ನಲ್ಲಿ ಅಧಿಕಾರಿಗಳು ದಾಳಿ ನಡೆಸಿ 38 ಸಿಲಿಂಡರ್‌ಗಳನ್ನು ವಶಕ್ಕೆ ಪಡೆದರು. ಅತ್ತ ತಮಿಳುನಾಡಿನ ಮದುರೈನಲ್ಲಿ 398 ಸಿಲಿಂಡರ್‌ಗಳನ್ನು ಸೀಜ್ ಮಾಡಲಾಗಿದೆ. ಬುಕಿಂಗ್ ವ್ಯವಸ್ಥೆಗೆ ಪೆಟ್ಟು:
ತೆಲಂಗಾಣ ಸದ್ಯ ಅನಿಲದ ಕೊರತೆಯನ್ನು ಎದುರಿಸದಿದ್ದರೂ, ಕೆಲ ಕಡೆಗಳಲ್ಲಿ ಗ್ಯಾಸ್ ಬುಕಿಂಗ್ ವ್ಯಸ್ಥೆಯಲ್ಲೇ ಅಡಚಣೆಯಾಗಿದೆ. ಆತಂಕಗೊಂಡ ಜನ ಇದ್ದಕ್ಕಿದ್ದಂತೆ ಖರೀದಿಯನ್ನು ಹೆಚ್ಚಿಸಿರುವುದರಿಂದ ಹಲವು ಎಲ್‌ಪಿಜಿ ಕೇಂದ್ರಗಳಲ್ಲಿ ಸಮಸ್ಯೆಯಾಗಿದೆ. ಒಮ್ಮೆಲೆ ಶೇ.50ರಷ್ಟು ಹೆಚ್ಚು ಬುಕಿಂಗ್‌ಗಳಾಗಿರುವ ಕಾರಣ ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಬೀದಿ ಬದಿ ವ್ಯಾಪಾರಿಗಳು ಅತಂತ್ರ:ರೆಸ್ಟೋರೆಂಟ್‌ಗಳ ರೀತಿ ಅನಿಲದ ಬಿಸಿ ರಸ್ತೆ ಬದಿ ವ್ಯಾಪಾರಿಗಳಿಗೂ ತಟ್ಟಿದ್ದು, ಅದನ್ನೇ ಜೀವನಾಧಾರವಾಗಿರಿಸಿಕೊಂಡಿದ್ದ ಹಲವರು ಅನಿಲ ಕೊರತೆಯಿಂದಾಗಿ ಅತಂತ್ರರಾಗಿದ್ದಾರೆ. ಹಲವರು ಅಧಿಕ ಪಾವತಿ ಮಾಡಿ ಸಿಲಿಂಡರ್‌ಗಳನ್ನು ಖರೀದಿಸುತ್ತಿದ್ದರೆ, ಆ ಶಕ್ತಿ ಇಲ್ಲದವರು ಅಂಗಡಿಗಳನ್ನೇ ಮುಚ್ಚಿದ್ದಾರೆ. ಪರಿಣಾಮ ಹಲವರು ನಿರುದ್ಯೋಗಿಗಳಾಗಿದ್ದಾರೆ.
====ಎಲ್‌ಪಿಜಿ ಉತ್ಪಾದನೆ 30% ಹೆಚ್ಚಳ, ಆತಂಕ ಬೇಡ: ಕೇಂದ್ರ ಅಭಯ
-ಯುದ್ಧಪೂರ್ವದಲ್ಲಿ 55.7 ಲಕ್ಷದಷ್ಟಿದ್ದ ಬುಕಿಂಗ್ 75.7 ಲಕ್ಷಕ್ಕೆ ಏರಿಕೆಪಿಟಿಐ ನವದೆಹಲಿ
ಎಲ್‌ಪಿಜಿಗಾಗಿ ಆತಂಕ ಬೇಡ. ಸಾಕಷ್ಟು ಲಭ್ಯತೆ ಇದೆ ಎಂದು ಗುರುವಾರ ತಾವು ಸ್ಪಷ್ಟನೆ ನೀಡಿದ್ದರೂ, ಜನರ ಆತಂಕ ಕಡಿಮೆ ಆಗಿಲ್ಲ ಎಂದು ಗಮನಿಸಿರುವ ಕೇಂದ್ರ ಸರ್ಕಾರ, ‘ಮಾ.5ರಿಂದ ದೇಶೀಯ ಎಲ್‌ಪಿಜಿ ಉತ್ಪಾದನೆ ಶೇ.30ರಷ್ಟು ಹೆಚ್ಚಾಗಿದೆ. ಮನೆಗಳಿಗೆ ನಿರಂತರ ಎಲ್‌ಪಿಜಿ ಪೂರೈಕೆಯನ್ನು ಖಚಿತಪಡಿಸಲಾಗಿದೆ. ದಿಗಿಲಿಗೆ ಒಳಗಾಗಿ ಸಿಲಿಂಡರ್‌ಗಳನ್ನು ಬುಕ್ ಮಾಡುವ ಅಗತ್ಯವಿಲ್ಲ’ ಎಂದು ಮತ್ತೊಮ್ಮೆ ಶುಕ್ರವಾರ ಸ್ಪಷ್ಟಪಡಿಸಿದೆಮಾಧ್ಯಮಗಳಿಗೆ ಮಾಹಿತಿ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ‘ಮಾ.5ರಿಂದ ದೇಶೀಯ ಎಲ್‌ಪಿಜಿ ಉತ್ಪಾದನೆ ಶೇ.30ರಷ್ಟು ಹೆಚ್ಚಾಗಿದೆ. ಆತಂಕಕ್ಕೆ ಒಳಗಾಗಿ ಬುಕಿಂಗ್ ಮಾಡುವ ಅಗತ್ಯವಿಲ್ಲ. ಯಾವುದೇ ಎಲ್‌ಪಿಜಿ ಮಳಿಗೆಯಲ್ಲಿ ಸ್ಟಾಕ್ ಖಾಲಿಯಾಗಿಲ್ಲ. ಯುದ್ಧಪೂರ್ವದಲ್ಲಿ ಸರಾಸರಿ 55.7 ಲಕ್ಷದಷ್ಟಿದ್ದ ಎಲ್‌ಪಿಜಿ ಬುಕಿಂಗ್‌ಗಳು ಈಗ 75.7 ಲಕ್ಷಕ್ಕೆ ಏರಿವೆ. ಇದು ಆತಂಕದಿಂದ ಬುಕ್ ಮಾಡುತ್ತಿರುವುದನ್ನು ತೋರಿಸುತ್ತದೆ’ ಎಂದರು.