ಶಬರಿಮಲೆ ಚಿನ್ನಕ್ಕೆ ಕನ್ನ: ಬೆಂಗಳೂರು ಆರೋಪಿ ಬಂಧನ

Published : Oct 18, 2025, 07:55 AM IST
Sabarimala Gold Theft

ಸಾರಾಂಶ

ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚದಲ್ಲಿನ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಬೆಂಗಳೂರಿನ ಉದ್ಯಮಿ ಉನ್ನಿಕೃಷ್ಣನ್‌ ಪೊಟ್ಟಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಬಂಧಿಸಿದೆ

 ತಿರುವನಂತಪುರಂ :  ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚದಲ್ಲಿನ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಬೆಂಗಳೂರಿನ ಉದ್ಯಮಿ ಉನ್ನಿಕೃಷ್ಣನ್‌ ಪೊಟ್ಟಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಬಂಧಿಸಿದೆ. ಆರೋಪಿಯನ್ನು ಅ.30ರವರೆಗೆ ಎಸ್‌ಐಟಿ ಕಸ್ಟಡಿಗೆ ಒಪ್ಪಿಸುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.

ಪುಲಿಮಠದ ಮನೆಯಲ್ಲಿ ಗುರುವಾರ ಪೊಟ್ಟಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ತಿರುವನಂತಪುರಂನ ಅಪರಾಧ ವಿಭಾಗದ ಕಚೇರಿಯಲ್ಲಿ ಸುಮಾರು 14 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ನಂತರ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಈ ವೇಳೆ ವ್ಯಕ್ತಿಯೊಬ್ಬ ಪೊಟ್ಟಿ ಮೇಲೆ ಚಪ್ಪಲಿ ಎಸೆದು ಹೈಡ್ರಾಮಾ ಸೃಷ್ಟಿಸಿದ ಘಟನೆಯೂ ನಡೆಯಿತು. ಆ ಬಳಿಕ ಕೋರ್ಟ್‌ ಅ.30ರವರೆಗೆ ಪೊಟ್ಟಿಯನ್ನು ಎಸ್‌ಐಟಿ ಕಸ್ಟಡಿಗೆ ನೀಡುವಂತೆ ಆದೇಶಿಸಿತು.

2 ಕೇಜಿ ಚಿನ್ನ ದುರ್ಬಳಕೆ- ಎಸ್‌ಐಟಿ:

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ರಾನ್ನಿಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ವರದಿ ಸಲ್ಲಿಸಿದೆ. ಅದರಲ್ಲಿ, ‘ನಾಪತ್ತೆಯಾದ 2 ಕೆಜಿ ಚಿನ್ನವನ್ನು ಪೊಟ್ಟಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಈತ 2004-08 ಅವಧಿಯಲ್ಲಿ ದೇಗುಲದ ಅರ್ಚಕರಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆಗ ವಂಚಿಸಿ, ಹಣ ಮಾಡಿಕೊಳ್ಳುವ ಉದ್ದೇಶದಿಂದ ಕವಚಗಳ ಮರುಲೇಪನಕ್ಕೆ ಅರ್ಜಿ ಸಲ್ಲಿಸಿದ್ದ. ಮರುಲೇಪನಕ್ಕೆ ಅವಕಾಶ ಸಿಕ್ಕಾಗ ದುರ್ಬಳಕೆ ಮಾಡಿಕೊಂಡಿದ್ದ’ ಎಂದು ಉಲ್ಲೇಖಿಸಿದೆ.

ನನ್ನನ್ನು ಸಿಕ್ಕಿಹಾಕಿಸಿದ್ದಾರೆ:

ಶಬರಿಮಲೆ ಚಿನ್ನ ಲಪಟಾಯಿಸಿದ ಆರೋಪ ಹೊತ್ತಿರುವ ಪೊಟ್ಟಿ, ತನ್ನನ್ನು ಬೇರೆಯವರು ಈ ಪ್ರಕರಣದಲ್ಲಿ ಸಿಕ್ಕಿಸಿಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾನೆ. ಕೋರ್ಟ್‌ಗೆ ಕರೆದೊಯ್ಯುವ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆತ, ‘ನನ್ನನ್ನು ಸಿಕ್ಕಿಸಿ ಹಾಕಿದವರು ಕಾನೂನಿನ ಮುಂದೆ ಬಂದೇ ಬರುತ್ತಾರೆ’ ಎಂದಿದ್ದಾನೆ.

ಶಬರಿಮಲೆ ದ್ವಾರಪಾಲಕ ವಿಗ್ರಹಗಳಿಗೆ ಮರುಲೇಪಿತ ಕವಚಧಾರಣೆ

ಪಟ್ಟಣಂತಿಟ್ಟ (ಕೇರಳ): ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚಗಳು ವಿವಾದದ ಕೇಂದ್ರಬಿಂದುವಾಗಿರುವ ನಡುವೆಯೇ, ಮರುಲೇಪನಗೊಂಡ ಕವಚಗಳನ್ನು ಶುಕ್ರವಾರ ವಿಗ್ರಹಗಳಿಗೆ ಅಳವಡಿಸಲಾಗಿದೆ.

ತುಲಾ ಮಾಸ ಆರಂಭವಾದ ಹಿನ್ನೆಲೆ ಶುಕ್ರವಾರ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಇದೇ ವೇಳೆ, ಗರ್ಭಗುಡಿಯ ಮುಂಭಾಗದ ದ್ವಾರಪಾಲಕ ವಿಗ್ರಹಗಳಿಗೆ ಅರ್ಚಕರು ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳ ಸಮ್ಮುಖದಲ್ಲಿ ಕವಚಗಳನ್ನು ಅಳವಡಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ
ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ