ಪಂಚರಾಜ್ಯ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಬುಧವಾರ  ಮತದಾನೋತ್ತರ ಸಮೀಕ್ಷೆ  ಪ್ರಕಟಗೊಂಡಿವೆ. ಸಮೀಕ್ಷೆಗಳ ಅನ್ವಯ, ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಅಧಿಕಾರ ಉಳಿಸಿಕೊಳ್ಳಲಿದ್ದರೆ, ಕೇರಳದಲ್ಲಿ ಎಡಪಕ್ಷಗಳ ಎಲ್‌ಡಿಎಫ್‌ ಕೂಟ ಸೋಲುಂಡು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಮರಳಲಿದೆ

ನವದೆಹಲಿ: ಭಾರೀ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಚುನಾವಣೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಬುಧವಾರ ಸಂಜೆ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಸಮೀಕ್ಷೆಗಳ ಅನ್ವಯ, ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಅಧಿಕಾರ ಉಳಿಸಿಕೊಳ್ಳಲಿದ್ದರೆ, ಕೇರಳದಲ್ಲಿ ಎಡಪಕ್ಷಗಳ ಎಲ್‌ಡಿಎಫ್‌ ಕೂಟ ಸೋಲುಂಡು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಮರಳಲಿದೆ ಎಂದು 5 ಸಮೀಕ್ಷೆಗಳು ಹೇಳಿವೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು 4 ಸಮೀಕ್ಷೆಗಳು ಹೇಳಿದ್ದರೆ, 2 ಸಮೀಕ್ಷೆ ಟಿಎಂಸಿ ಗೆಲುವಿನ ಸಾಧ್ಯತೆ ಊಹಿಸಿದೆ. ಪೋಲ್‌ ಆಫ್‌ ಪೋಲ್ಸ್‌ನಲ್ಲಿ ತ್ರಿಶಂಕು ವಿಧಾನಸಭೆ ಸೃಷ್ಟಿಯ ಸಾಧ್ಯತೆ ಕಂಡುಬಂದಿದೆ. ಇನ್ನು ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಲಿದೆ ಎಂದು 5 ಸಮೀಕ್ಷೆಗಳು ಹೇಳಿವೆ. ಅದೇ ರೀತಿ ಪುದುಚೇರಿಯಲ್ಲಿ ಆಲ್‌ ಇಂಡಿಯಾ ಎನ್‌ ಆರ್‌ ಕಾಂಗ್ರೆಸ್‌ ಮತ್ತು ಬಿಜೆಪಿ ಕೂಟ ಅಧಿಕಾರಕ್ಕೆ ಮರಳಲಿದೆ ಎಂದು 4 ಸಮೀಕ್ಷೆಗಳು ಹೇಳಿವೆ.

ಒಂದು ವೇಳೆ ಸಮೀಕ್ಷೆಗಳು ನಿಜವಾದರೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತಲಾ ಒಂದು ರಾಜ್ಯಗಳ ಲಾಭವಾಗಲಿದ್ದರೆ, ಇಂಡಿ ಕೂಟದ ಭಾಗವಾಗಿರುವ ಟಿಎಂಸಿ ಮತ್ತು ಎಡಪಕ್ಷಗಳು ಇರುವ ಒಂದು ರಾಜ್ಯಗಳನ್ನೂ ಕಳೆದುಕೊಳ್ಳಲಿವೆ. ಜೊತೆಗೆ ದೇಶದ ಯಾವುದೇ ರಾಜ್ಯಗಳಲ್ಲೂ ಎಡಪಕ್ಷಗಳ ಅಧಿಕಾರ ಇಲ್ಲದಂತೆ ಆಗಲಿದೆ.

ತಮಿಳ್ನಾಡು:

5 ಸಮೀಕ್ಷೆಗಳು ಡಿಎಂಕೆ ಮರಳಿ ಅಧಿಕಾರಕ್ಕೆ ಬರುವ ಸುಳಿವು ನೀಡಿವೆ. ಆದರೆ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ನಟ ವಿಜಯ್‌ ಅವರ ಟಿವಿಕೆ ಪಕ್ಷ ಹೆಚ್ಚೇನೂ ಸದ್ದು ಮಾಡಲ್ಲ ಎಂದು 4 ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದರೆ ಆ್ಯಕ್ಸಿಸ್‌ ಮೈ ಇಂಡಿಯಾ ಮಾತ್ರ ವಿಜಯ್‌ ಪಕ್ಷ 100-124ರಷ್ಟು ಭಾರೀ ಪ್ರಮಾಣದಲ್ಲಿ ಸೀಟು ಗೆಲ್ಲುವ ಭವಿಷ್ಯ ನುಡಿದಿದೆ. ಇದು ನಿಜವಾದರೆ ತಮಿಳ್ನಾಡಿನ ರಾಜಕೀಯ ಹೊಸ ದಿಕ್ಕಿನತ್ತ ಹೊರಳುವುದು ಖಚಿತವಾಗಲಿದೆ. ಮತ್ತೊಂದೆಡೆ ಭಾರೀ ಅಬ್ಬರದ ನಿರೀಕ್ಷೆಯ ಹೊರತಾಗಿಯೂ ಅಣ್ಣಾಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಬಂಗಾಳ:

ಇಡೀ ದೇಶದ ಕುತೂಹಲ ಕೆರಳಿಸಿದ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು 4 ಸಮೀಕ್ಷೆಗಳು ಹೇಳಿದ್ದರೆ, ದೀದಿ ಸತತ 4ನೇ ಬಾರಿ ಅಧಿಕಾರ ಪಡೆಯಲಿದ್ದಾರೆ ಎಂದು 2 ಸಮೀಕ್ಷೆಗಳು ಹೇಳಿವೆ.

ಕೇರಳ:

ಸತತ 10 ವರ್ಷದಿಂದ ಕೇರಳದಲ್ಲಿ ಅಧಿಕಾರದಲ್ಲಿದ್ದ ಎಡಪಕ್ಷಗಳ ಎಲ್‌ಡಿಎಫ್‌ ಕೂಟ ಅಧಿಕಾರ ಕಳೆದುಕೊಂಡು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕೂಟ ಅಧಿಕಾರಕ್ಕೆ ಬರಲಿದೆ ಎಂದು 5 ಸಮಿಕ್ಷೆಗಳು ಹೇಳಿವೆ.

ಅಸ್ಸಾಂ:

ಅಸ್ಸಾಂನಲ್ಲೂ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದು 5 ಸಮೀಕ್ಷೆಗಳು ಹೇಳಿವೆ.

ಪುದುಚೇರಿ:

ದಕ್ಷಿಣ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಸಿಎಂ ರಂಗಸಾಮಿ ನೇತೃತ್ವದ ಎಐಎನ್‌ಆರ್‌ಸಿ - ಬಿಜೆಪಿ ಕೂಟ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದು 4 ಸಮೀಕ್ಷೆಗಳು ಹೇಳಿವೆ.

 ಬಂಗಾಳ ಕುತೂಹಲ

ಕಳೆದ ಚುನಾವಣೆಯಲ್ಲಿ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಟಿಎಂಸಿ ಭರ್ಜರಿ ಬಹುಮತದ ಮೂಲಕ ಸತತ 3ನೇ ಸಲ ಅಧಿಕಾರಕ್ಕೆ ಬಂದಿತ್ತು. ಈ ಸಲವೂ 4 ಸಮೀಕ್ಷೆಗಳು ಬಿಜೆಪಿ ಗೆಲುವಿನ ಸುಳಿವು ನೀಡಿದೆ. ಹೀಗಾಗಿ ಮೇ 4 ರಂದು ಪ್ರಕಟವಾಗುವ ಫಲಿತಾಂಶದ ಕುರಿತು ಭಾರೀ ಕುತೂಹಲ ಮೂಡಿದೆ.