2008ರ ಮುಂಬೈ ದಾಳಿ ಪ್ರಕರಣದ ಆರೋಪಿ ತಹಾವ್ವುರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡುವ ಕಾನೂನು ಪ್ರಕ್ರಿಯೆಯಲ್ಲಿ ಎನ್‌ಐಎ ಪರವಾಗಿ ಹೋರಾಡಿದ್ದು ಬೆಂಗಳೂರು ನಂಟಿನ ದಯಾನ್ ಕೃಷ್ಣನ್.
ನವದೆಹಲಿ: 2008ರ ಮುಂಬೈ ದಾಳಿ ಪ್ರಕರಣದ ಆರೋಪಿ ತಹಾವ್ವುರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡುವ ಕಾನೂನು ಪ್ರಕ್ರಿಯೆಯಲ್ಲಿ ಎನ್‌ಐಎ ಪರವಾಗಿ ಹೋರಾಡಿದ್ದು ಬೆಂಗಳೂರು ನಂಟಿನ ದಯಾನ್ ಕೃಷ್ಣನ್. ಜೊತೆಗೆ ಈ ಹಿರಿಯ ವಕೀಲ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಕನ್ನಡಿಗ ಸಂತೋಷ್ ಹೆಗ್ಡೆ ಅವರ ಶಿಷ್ಯ ಎಂಬುದು ಕೂಡ ವಿಶೇಷ.
ಗಡೀಪಾರು ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೃಷ್ಣನ್ ಅವರನ್ನು ಇದೀಗ ರಾಣಾ ವಿರುದ್ಧ ನ್ಯಾಯಾಲಯದಲ್ಲಿ ಎನ್‌ಐಎ ಪರವಾಗಿ ವಾದ ಮಂಡಿಸಲು ನಿಯೋಜಿಸಲಾಗಿದೆ.
ಯಾರಿವರು ಕೃಷ್ಣನ್?:
ದಯಾನ್ ಕೃಷ್ಣನ್ 1993ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು. ಬಳಿಕ ಸಂತೋಷ್ ಹೆಗ್ಡೆ ಅವರು ವಕೀಲಿಕೆ ನಡೆಸುತ್ತಿದ್ದ ವೇಳೆ ಅವರ ಶಿಷ್ಯರಾಗಿಯೂ ಕೃಷ್ಣನ್ ಸೇವಾನುಭವ ಪಡೆದುಕೊಂಡಿದ್ದರು. ತದನಂತರದಲ್ಲಿ ದೆಹಲಿಗೆ ತೆರಳಿದ್ದ ಕೃಷ್ಣನ್ ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವಕೀಲಿಕೆ ಆರಂಭಿಸಿದ್ದರು.
ನಂತರದ ವರ್ಷಗಳಲ್ಲಿ ದೇಶವ್ಯಾಪಿ ಭಾರೀ ಗಮನ ಸೆಳೆದಿದ್ದ ಸಂಸತ್ ಮೇಲಿನ ದಾಳಿ, ಕಾವೇರಿ ಜಲ ವಿವಾದ, ದೂರಸಂಪರ್ಕ, ಬ್ರಿಟನ್‌ನಿಂದ ಉದ್ಯಮಿ ರವಿ ಶಂಕರನ್ ಗಡೀಪಾರು, 2012ರ ನಿರ್ಭಯಾ ಅತ್ಯಾಚಾರ ಸೇರಿ ವಿವಿಧ ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು. ಈ ಅವಧಿಯಲ್ಲಿ ಕೇಂದ್ರ ಸರ್ಕಾರ, ಎನ್‌ಐಎ, ಸಿಬಿಐ, ದೆಹಲಿ ಸರ್ಕಾರ ಹಾಗೂ ದೆಹಲಿ ಪೊಲೀಸರ ಪರವಾಗಿಯೂ ದಯಾನ್ ವಾದಿಸಿದ್ದಾರೆ.
2010ರಿಂದ ನಿರಂತರವಾಗಿ ರಾಣಾ ಗಡೀಪಾರು ಪ್ರಕ್ರಿಯೆಯಲ್ಲಿ ತೊಡಗಿರುವ ಕೃಷ್ಣನ್, ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹೆಡ್ಲಿ ತನಿಖೆಗೆ ಶಿಕಾಗೋಗೆ ತೆರಳಿದ ಎನ್‌ಐಎ ತಂಡದ ಸಲಹೆಗಾರರೂ ಆಗಿದ್ದರು.