ಫ್ಲೈಟ್‌ ಕಾಕ್‌ಪಿಟ್ ಬಾಗಿಲು ತೆರೆಯಲು ಬೆಂಗಳೂರು ವ್ಯಕ್ತಿ ಯತ್ನ

KannadaprabhaNewsNetwork |  
Published : Sep 23, 2025, 01:07 AM IST
ವಿಮಾನ | Kannada Prabha

ಸಾರಾಂಶ

ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಮಾರ್ಗಮಧ್ಯೆ ಬೆಂಗಳೂರಿನ ಪ್ರಯಾಣಿಕನೊಬ್ಬ ವಿಮಾನದ ಕಾಕ್‌ಪಿಟ್‌ ಬಾಗಿಲನ್ನು ತೆರೆಯಲು ಯತ್ನಿಸಿದ ಆತಂಕಕಾರಿ ಘಟನೆ ಸೋಮವಾರ ನಡೆದಿದೆ.

 ನವದೆಹಲಿ :  ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಮಾರ್ಗಮಧ್ಯೆ ಬೆಂಗಳೂರಿನ ಪ್ರಯಾಣಿಕನೊಬ್ಬ ವಿಮಾನದ ಕಾಕ್‌ಪಿಟ್‌ ಬಾಗಿಲನ್ನು ತೆರೆಯಲು ಯತ್ನಿಸಿದ ಆತಂಕಕಾರಿ ಘಟನೆ ಸೋಮವಾರ ನಡೆದಿದೆ.

ವಿಮಾನ ವಾರಾಣಸಿಯಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿಗಳ ವಶಕ್ಕೆ ನೀಡಲಾಗಿದೆ. ಆತನನ್ನು ವಾರಾಣಸಿಯ ಫೂಲ್‌ಪುರ ಪೊಲೀಸರು ಬಂಧಿಸಿದ್ದು, ಆತನ ಜತೆಗಿದ್ದ ಇನ್ನೂ 8 ಜನ ಕಾಶಿ ಯಾತ್ರಿಕರ ವಿಚಾರಣೆ ನಡೆಸುತ್ತಿದ್ದಾರೆ.

ಆಗಿದ್ದೇನು?: ಸೋಮವಾರ ಬೆಳಿಗ್ಗೆ 8 ಗಂಟೆಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ IX-1086 ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿತ್ತು. ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ಪ್ರಯಾಣಿಕನೊಬ್ಬ ಕಾಕ್‌ಪಿಟ್‌ ಪ್ರದೇಶ ಪ್ರವೇಶಿಸಿದ್ದಲ್ಲದೆ, ಅದರ ಬಾಗಿಲನ್ನು ಸಹ ತೆರೆಯಲು ಪ್ರಯತ್ನಿಸಿದ್ದಾನೆ. ಕಾಕ್‌ಪಿಟ್‌ ಬಾಗಿಲು ತೆರೆಯಬೇಕೆಂದರೆ ಪಾಸ್‌ಕೋಡ್‌ ನಮೂದಿಸುವುದು ಅಗತ್ಯ. ಪಾಸ್‌ಕೋಡ್‌ ಹಾಕಿದ ನಂತರ ಪೈಲಟ್‌ ಬಾಗಿಲನ್ನು ತೆರೆಯಲು ಅವಕಾಶ ನೀಡಬಹುದು. ಹೀಗಾಗಿ ಬಾಗಿಲು ತೆರೆಯಲು ಸಾಧ್ಯವಾಗದ ಕಾರಣ ಮರಳಿ ತನ್ನ ಸೀಟ್‌ಗೆ ಬಂದು ಕುಳಿತಿದ್ದಾನೆ.ಕಾಕ್‌ಪಿಟ್‌ ಬಾಗಿಲು ತೆರೆಯಲು ವ್ಯಕ್ತಿ ಯತ್ನಿಸಿದ್ದೇಕೆ ಎಂಬುದು ತಿಳಿದುಬಂದಿಲ್ಲ. ಆದರೆ ಶೌಚಾಲಯ ಹುಡುಕುತ್ತಿದ್ದ ಆತ ತಪ್ಪಾಗಿ ಕಾಕ್‌ಪಿಟ್‌ ಬಾಗಿಲು ತೆರೆಯಲು ಯತ್ನಿಸಿರಬಹುದು ಎನ್ನಲಾಗಿದೆ. 

‘ಇತರ 8 ಪ್ರಯಾಣಿಕರೊಂದಿಗೆ ಆತ ತೆರಳುತ್ತಿದ್ದ. ಅದು ಅವನ ಮೊದಲ ವಿಮಾನ ಪ್ರಯಾಣವಾಗಿತ್ತು. ಆದರೆ ವಿಮಾನಕ್ಕೆ ಯಾವುದೇ ರೀತಿಯ ಭದ್ರತಾ ಬೆದರಿಕೆ ಒಡ್ಡಿಲ್ಲ, ಪಾಸ್‌ಕೋಡ್‌ ನಮೂದಿಸಲು ಸಹ ಪ್ರಯತ್ನಿಸಿಲ್ಲ’ ಎಂದು ಏರ್‌ ಇಂಡಿಯಾ ತಿಳಿಸಿದೆ.‘ವಿಮಾನದ ಸುರಕ್ಷತಾ ಮತ್ತು ಭದ್ರತಾ ನಿಯಮಗಳು ವ್ಯವಸ್ಥಿತವಾಗಿವೆ ಮತ್ತು ಅದರೊಂದಿಗೆ ಯಾವುದೇ ರಾಜಿಯಿಲ್ಲ ಎಂದು ನಾವು ಖಚಿತಪಡಿಸುತ್ತೇವೆ. ಆದರೂ ದೂರು ನೀಡಿದ್ದೇವೆ. ವಿಮಾನ ವಾರಾಣಸಿಯಲ್ಲಿ ಲ್ಯಾಂಡ್‌ ಆದಬಳಿಕ ವ್ಯಕ್ತಿ ಹಾಗೂ ಇತರ 8 ಜನರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಏರ್ ಇಂಡಿಯಾ ತಿಳಿಸಿದೆ.

- ಬೆಂಗಳೂರು-ವಾರಾಣಸಿ ಏರಿಂಡಿಯಾ ವಿಮಾನದಲ್ಲಿ ಘಟನೆ

-ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಅವಾಂತರ

-ಶೌಚಾಲಯ ಹುಡುಕುತ್ತಿದ್ದ ಪ್ರಯಾಣಿಕನಿಂದ ಕೃತ್ಯ

-ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ವ್ಯಕ್ತಿ ಬಂಧನ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ
ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ನಿಗದಿ