ಭೂಮಿಯ ಮೇಲೀಗ ಬೆಂಗಳೂರಿನ ಕಣ್ಣು : 4 ಉಪಗ್ರಹ ಹಾರಿಬಿಟ್ಟ ಪಿಕ್ಸೆಲ್‌ ಮತ್ತು ದಿಗಂತರಾ

KannadaprabhaNewsNetwork | Updated : Jan 16 2025, 04:43 AM IST

ಸಾರಾಂಶ

 ಬೆಂಗಳೂರು ಮೂಲದ ಪಿಕ್ಸೆಲ್‌ ಮತ್ತು ದಿಗಂತರಾ ಎಂಬೆರೆಡು ಸಂಸ್ಥೆಗಳು ಬುಧವಾರ ಒಟ್ಟು 4 ಉಪಗ್ರಹ ಹಾರಿಬಿಟ್ಟಿವೆ.

ನವದೆಹಲಿ: ಬೆಂಗಳೂರು ಮೂಲದ ಪಿಕ್ಸೆಲ್‌ ಮತ್ತು ದಿಗಂತರಾ ಎಂಬೆರೆಡು ಸಂಸ್ಥೆಗಳು ಬುಧವಾರ ಒಟ್ಟು 4 ಉಪಗ್ರಹ ಹಾರಿಬಿಟ್ಟಿವೆ. ಈ ಪೈಕಿ ಪಿಕ್ಸೆಲ್‌ನ ಉಪಗ್ರಹದ ಕ್ಯಾಮೆರಾ ವಿಶ್ವದಲ್ಲೇ ಅತ್ಯಾಧುನಿಕವಾಗಿದ್ದರೆ, ದಿಗಂತರಾದ ಕ್ಯಾಮೆರಾ ಬಾಹ್ಯಾಕಾಶದ ಅತ್ಯಂತ ಸಣ್ಣ ವಸ್ತುಗಳ ಮೇಲೂ ನಿಗಾ ಇಡುವ ಸಾಮರ್ಥ್ಯ ಹೊಂದಿದೆ.

ಭೂಮಿ ಮತ್ತು ಭೂಮಿಯ ನಾನಾ ರೀತಿಯ ವಾತಾವರಣದ ಸೂಕ್ಷ್ಮ ಮಾಹಿತಿಗಳನ್ನು ಸೆರೆಹಿಡಿಯಬಲ್ಲ ಮೂರು ಉಪಗ್ರಹಗಳನ್ನು ಬೆಂಗಳೂರು ಮೂಲದ ಸ್ಟಾರ್ಟಪ್‌ ಪಿಕ್ಸೆಲ್‌ ಹಾರಿಬಿಟ್ಟಿದೆ. ಈ ಮೂರು ಉಪಗ್ರಹಗಳು ವಿಶ್ವದಲ್ಲೇ ಅತ್ಯುನ್ನತ ಸಾಮರ್ಥ್ಯದ ವಾಣಿಜ್ಯ ಉದ್ದೇಶ ಹೈಪರ್‌ಸ್ಪೆಕ್ಟ್ರಾ ಉಪಗ್ರಹವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದೇ ಸರಣಿಯಲ್ಲಿ ಕಂಪನಿ ಈಗಾಗಲೇ 3 ಉಪಗ್ರಹಗಳನ್ನು ಹಾರಿಸಿದ್ದು, ಅದರ ಜೊತೆಗೆ ಮತ್ತೆ ಇದೀಗ ಮೂರು ಉಪಗ್ರಹ ಸೇರಿದೆ.

ಅಮೆರಿಕದ ಸ್ಪೇಸ್‌ಎಕ್ಸ್‌ ಸಂಸ್ಥೆಯ ಮೂಲಕ ಭಾರತೀಯ ಕಾಲಮಾನ ಮಂಗಳವಾರ ಮುಂಜಾವಿನ 1 ಗಂಟೆಗೆ ಅಮೆರಿಕದ ಕ್ಯಾಲಿಫೋರ್ನಿಯಾದ ವ್ಯಾಂಡನ್‌ಬರ್ಗ್‌ ಉಡ್ಡಯನ ನೆಲೆಯಿಂದ ಉಪಗ್ರಹಗಳನ್ನು ಹಾರಿಬಿಡಲಾಯಿತು ಎಂದು ಕಂಪನಿಯ ಸಂಸ್ಥಾಪಕ ಅವೈಸ್‌ ಅಹಮದ್‌ ತಿಳಿಸಿದ್ದಾರೆ.

ಪಿಕ್ಸೆಲ್‌ ಹಾರಿಬಿಟ್ಟಿರುವ ಫೈರ್‌ಫ್ಲೈ ಉಪಗ್ರಹಗಳು, ಹಾಲಿ ಹೈಪರ್‌ಸ್ಪೆಕ್ಟ್ರಲ್‌ ಉಪಗ್ರಹಗಳಲ್ಲಿ ಇರುವ ಸಾಮಾನ್ಯ ಚಿತ್ರಗಳಿಂದ 6 ಪಟ್ಟು ಹೆಚ್ಚು ಗುಣಮಟ್ಟದ ಚಿತ್ರ ಸೆರೆಹಿಡಿಯಬಲ್ಲದಾಗಿದೆ. ಸಾಂಪ್ರದಾಯಿಕ ಉಪಕರಣಗಳು ಸೆರೆಹಿಡಿಯಲಾಗದ ಅಂಶಗಳನ್ನೂ ಈ ಉಪಗ್ರಹದ ಕ್ಯಾಮೆರಾಗಳು ಸೆರೆಹಿಡಿಯಬಲ್ಲದು. ಇದರ ಮೂಲಕ ಭೂಮಿಯ ಮೇಲಿನ ರಾಸಾಯನಿಕ ಬದಲಾವಣೆ, ಭೂಮಿಯ ಆರೋಗ್ಯದಲ್ಲಿನ ಬದಲಾವಣೆ, ನೀರಿನ ಗುಣಮಟ್ಟ ಮತ್ತು ವಾತಾವರಣದಲ್ಲಿ ಬದಲಾವಣೆಯನ್ನು ಕೂಡಾ ಹಿಂದೆಂದಿಗಿಂತಲೂ ಹೆಚ್ಚು ನಿಖರವಾಗಿ ಪತ್ತೆ ಹೆಚ್ಚಬಹುದಾಗಿದೆ ಎಂದು ಕಂಪನಿ ಹೇಳಿದೆ.

ಭೂಕಕ್ಷೆಯ ವಸ್ತುಗಳ ಮೇಲೆ ನಿಗಾಕ್ಕೆ ವಿಶ್ವದ ಮೊದಲ ವಾಣಿಜ್ಯ ಉಪಗ್ರಹ

ನವದೆಹಲಿ: ಭೂ ಕಕ್ಷೆಯಲ್ಲಿ ಸುತ್ತುತ್ತಿರುವ 5 ಸೆಂ.ಮೀನಷ್ಟು ಸಣ್ಣ ವಸ್ತುಗಳ ಮೇಲೂ ನಿಗಾ ಇಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ವಾಣಿಜ್ಯ ಉಪಗ್ರಹವನ್ನು ಬೆಂಗಳೂರು ಮೂಲದ ದಿಗಂತರಾ ಏರೋಸ್ಪೇಸ್‌ ಸಂಸ್ಥೆ ಉಡ್ಡಯನ ಮಾಡಿದೆ.ಅಮೆರಿಕದ ಸ್ಪೇಸ್‌ಎಕ್ಸ್‌ ಸಂಸ್ಥೆಯ ಮೂಲಕ ಭಾರತೀಯ ಕಾಲಮಾನ ಮಂಗಳವಾರ ಮುಂಜಾವಿನ 1 ಗಂಟೆಗೆ ಅಮೆರಿಕದ ಕ್ಯಾಲಿಫೋರ್ನಿಯಾದ ವ್ಯಾಂಡನ್‌ಬರ್ಗ್‌ ಉಡ್ಡಯನ ನೆಲೆಯಿಂದ ಈ ಉಪಗ್ರಹ ಹಾರಿಬಿಡಲಾಗಿದೆ.‘ಸ್ಪೇಸ್‌ ಕ್ಯಾಮೆರಾ ಫಾರ್‌ ಅಬ್ಜೆಕ್ಟ್‌ ಟ್ರಾಕಿಂಗ್‌’ (ಸ್ಕಾಟ್‌), ಅತ್ಯಂತ ಸಣ್ಣ ವಸ್ತುಗಳ ಮೇಲೆ ಕೂಡಾ ನಿಗಾ ಇಡುವ ಸಾಮರ್ಥ್ಯ ಹೊಂದಿದೆ. ಇದು ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳ ಸುರಕ್ಷತೆಗೆ ಇನ್ನಷ್ಟು ಬಲ ತುಂಬಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬಾಹ್ಯಾಕಾಶವು ಉಪಗ್ರಹಗಳು, ನೌಕೆಗಳು ಮತ್ತು ಬಾಹ್ಯಾಕಾಶ ತ್ಯಾಜ್ಯಗಳಿಂದ ತುಂಬಿದ್ದು ಭವಿಷ್ಯದಲ್ಲಿ ಸಾಕಷ್ಟು ಅಪಾಯ ತರುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ದಿಗಂತರಾ ನೆರವು ನೀಡಲಿದೆ ಎಂದು ಸಂಸ್ಥೆಯ ಸಿಇಒ ಅನಿರುದ್ಧ ಶರ್ಮಾ ಹೇಳಿದ್ದಾರೆ.

Share this article