ಖ್ಯಾತ ಭರತನಾತ್ಯ ಕಲಾವಿದೆ ಹಾಗೂ ಪದ್ಮ ಪ್ರಶಸ್ತಿ ಪುರಷ್ಕೃತೆ ಯಾಮಿನಿ ಕೃಷ್ಣಮೂರ್ತಿ ನಿಧನ

KannadaprabhaNewsNetwork |  
Published : Aug 04, 2024, 01:25 AM ISTUpdated : Aug 04, 2024, 04:47 AM IST
yamini krishnamurthy

ಸಾರಾಂಶ

ಖ್ಯಾತ ಭರತನಾತ್ಯ ಕಲಾವಿದೆ ಹಾಗೂ ಪದ್ಮ ಪ್ರಶಸ್ತಿ ಪುರಷ್ಕೃತೆ ಯಾಮಿನಿ ಕೃಷ್ಣಮೂರ್ತಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದಿದ್ದಾರೆ.

ನವದೆಹಲಿ: ಖ್ಯಾತ ಭರತನಾತ್ಯ ಕಲಾವಿದೆ ಹಾಗೂ ಪದ್ಮ ಪ್ರಶಸ್ತಿ ಪುರಷ್ಕೃತೆ ಯಾಮಿನಿ ಕೃಷ್ಣಮೂರ್ತಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದಿದ್ದಾರೆ.

84 ವರ್ಷ ವಯಸ್ಸಿನ ಇವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಕಳೆದ 7 ತಿಂಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಮ್ಯಾನೇಜರ್ ಹಾಗೂ ಕಾರ್ಯದರ್ಶಿಯಾಗಿದ್ದ ಗಣೇಶ್ ಮಾಹಿತಿ ನೀಡಿದ್ದಾರೆ.

ಕಲಾವಿದೆಯ ಮೃತ ದೇಹವನ್ನು ಅವರೇ ಸ್ಥಾಪಿಸಿರುವ ‘ಯಾಮಿನಿ ಸ್ಕೂಲ್ ಆಫ್‌ ಡ್ಯಾನ್ಸ್‌’ಗೆ ಭಾನುವಾರ ಬೆಳಗ್ಗೆ 9 ಗಂಟೆಗೆ ತಂದು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.

ಆಂದ್ರಪ್ರದೇಶ ಮೂಲದವರಾದ ಯಾಮಿನಿ, 2016ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ ಭಾಜನರಾಗಿದ್ದಾರೆ.

ಕೆನಡಾದಲ್ಲಿ ಐಎಸ್‌ಐ ಏಜೆಂಟ್‌ ರಾಹತ್‌ ಮೇಲೆ ಬೆಂಕಿ ದಾಳಿ

ಟೊರಂಟೋ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಏಜೆಂಟ್‌ ರಾಹತ್‌ ರಾವ್‌ ಮೇಲೆ ಕೆನಡಾದಲ್ಲಿ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ. ಆತನಿಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.ಈತ ಪಾಕ್ ಮೂಲದವನಾಗಿದ್ದು, ಕೆನಡಾದಲ್ಲಿ ವಿನಿಮಯ ವ್ಯವಹಾರವನ್ನು ಹೊಂದಿದ್ದಾನೆ. ಹಣಕಾಸು ವ್ಯವಹಾರದ ಕಾರಣ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಈ ಹಿಂದೆ ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದಿಪ್‌ ಸಿಂಗ್‌ ನಿಜ್ಜರ್ ಹತ್ಯೆ ಕೇಸಲ್ಲಿ ರಾವ್‌ನನ್ನು ವಿಚಾರಣೆ ಮಾಡಲಾಗಿತ್ತು.

ಅಮಿತ್‌ ಶಾ ಅಹಮದ್‌ ಶಾ ಅಬ್ದಾಲಿ ವಂಶಸ್ಥ: ಉದ್ಧವ್‌ ಕಿಡಿ

ಪುಣೆ: ತಮ್ಮನ್ನು ಔರಂಗಾಜೇಬ್‌ ಫ್ಯಾನ್‌ಕ್ಲಬ್‌ ಮುಖ್ಯಸ್ಥ ಎಂದು ವ್ಯಂಗ್ಯವಾಡಿದ್ದ ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ತಿರುಗೇಟು ನೀಡಿರುವ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ಅಮಿತ್‌ ಶಾರನ್ನು ಅಹಮದ್ ಶಾ ಅಬ್ದಾಲಿ ವಂಶಸ್ಥ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ‘ಡಿಸಿಎಂ ದೇವೇಂದ್ರ ಫಡ್ನವೀಸ್ ತಿಗಣೆ ಇದ್ದಂತೆ. ತಿಗಣೆ ಜತೆ ನಾನು ಸ್ಪರ್ಧಿಸಲ್ಲ’ ಎಂದಿದ್ದಾರೆ.ಶನಿವಾರ ಶಿವಸಂಕಲ್ಪ ರ್‍ಯಾಲಿಯಲ್ಲಿ ಮಾತನಾಡಿದ ಉದ್ಧವ್‌, ‘ನಾವು ನಮ್ಮ ಹಿಂದುತ್ವ ಏನೆಂದು ಸ್ಪಷ್ಟಪಡಿಸಿದ ಬಳಿಕ ಮುಸ್ಲಿಮರು ನಮ್ಮ ಕಡೆಗೆ ಬಂದಿದ್ದಕ್ಕೆ ನಮ್ಮನ್ನು ಔರಂಗಾಜೇಬ್‌ ಫ್ಯಾನ್‌ ಕ್ಲಬ್‌ ಎಂದು ಶಾ ದೂಷಿಸಿದ್ದಾರೆ. ಹಾಗಿದ್ದರೆ ಅಧಿಕಾರಕ್ಕಾಗಿ ಪಕ್ಷಗಳನ್ನು ಒಡೆಯುವ ಮೂಲಕ ನೀವು ನಡೆಸುತ್ತಿರುವುದು ಪವರ್ ಜಿಹಾದ್‌ ಅಲ್ಲವೆ?’ ಎಂದು ಪ್ರಶ್ನಿಸಿದರು. ಜೊತೆಗೆ, ಅಮಿತ್‌ ಶಾ ಪಾಣಿಪತ್‌ ಕದನದಲ್ಲಿ ಮರಾಠರನ್ನು ಸೋಲಿಸಿದ ಆಫ್ಘನ್‌ ದೊರೆ ಅಹಮದ್‌ ಶಾ ಅಬ್ದಾಲಿಯ ವಂಶಸ್ಥ ಎಂದು ವ್ಯಂಗ್ಯವಾಡಿದರು.

ಕಳೆದ ತಿಂಗಳು ಪುಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್‌ ಶಾ, ‘ಮುಂಬೈ ಸರಣಿ ದಾಳಿಯ ರೂವಾರಿ ಯಾಕೂಬ್‌ ಮೆಮನ್‌ಗೆ ಗಲ್ಲು ಶಿಕ್ಷೆಯಿಂದ ಕ್ಷಮೆ ಕೋರಿದವರ ಜೊತೆ ಉದ್ಧವ್‌ ಠಾಕ್ರೆ ಕುಳಿತಿದ್ದಾರೆ. ಅವರು ಔರಂಗಾಜೇಬ್‌ ಫ್ಯಾನ್‌ ಕ್ಲಬ್‌ನ ಮುಖ್ಯಸ್ಥರು’ ಎಂದು ಕಿಡಿಕಾರಿದ್ದರು.

‘ಹರ್ ಘರ್‌ ತಿರಂಗಾ’ ಅಭಿಯಾನದಲ್ಲಿ ಭಾಗವಹಿಸಿ: ಶಾ ಮನವಿ

ನವದೆಹಲಿ: ಆ.15ರ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ‘ಹರ್‌ ಘರ್‌ ತಿರಂಗಾ’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜನತೆಗೆ ಶನಿವಾರ ಮನವಿ ಮಾಡಿದ್ದಾರೆ.‘ಪ್ರಧಾನಿ ನರೇಂದ್ರ ಮೋದಿ ಅವರ ಈ ಅಭಿಯಾನವೂ ಎರಡು ವರ್ಷಗಳಿಂದ ರಾಷ್ಟ್ರೀಯ ಚಳುವಳಿಯಾಗಿ ವಿಕಸನಗೊಳ್ಳುತ್ತಿದೆ. ಅದರಂತೆ ಈ ವರ್ಷವೂ ಸಹ ನಾಗರಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ, ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕು. ನಂತರ ಆ ಚಿತ್ರವನ್ನು ‘ಹರ್ ಘರ್ ತಿರಂಗಾ’ ವೆಬ್‌ಸೈಟ್ harghartiranga.com ನಲ್ಲಿ ಅಪ್‌ಲೋಡ್ ಮಾಡಬೇಕು’ ಎಂದು ಶಾ ಕೋರಿದ್ದಾರೆ.

ಬಾಂಗ್ಲಾದಲ್ಲಿ ಮತ್ತೆ ಹಿಂಸೆ: 2 ಸಾವು, 100 ಮಂದಿಗೆ ಗಾಯ

ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೆ ‘ಮೀಸಲು ವಿರೋಧಿ ಪ್ರತಿಭಟನೆಗಳು’ ಭುಗಿಲೆದ್ದಿದ್ದು, ಹಿಂಸಾಚಾರದಲ್ಲಿ ಶನಿವಾರ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೀಸಲು ವಿಚಾರ ಬಗೆಹರಿಸುವಲ್ಲಿ ಪ್ರಧಾನಿ ಶೇಖ್ ಹಸೀನಾ ವಿಫಲರಾಗಿದ್ದಾರೆ ಎಂದು ಆಪಾದಿಸಿದ ವಿದ್ಯಾರ್ಥಿಗಳು, ಅವರ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ಢಾಕಾ ಮತ್ತು ಬಾಂಗ್ಲಾದೇಶದ ಇತರ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಿಂಸೆ ಭುಗಿಲೆದ್ದಿವೆ. ವಿವಾದ ಇತ್ಯರ್ಥಕ್ಕೆ ಹಸೀನಾ ಮಾತುಕತೆಗೆ ಆಹ್ವಾನಿಸಿದ್ದರೂ ವಿದ್ಯಾರ್ಥಿಗಳು ತಿರಸ್ಕರಿಸಿದ್ದರು. ಇದರ ನಂತರ ಹಿಂಸೆ ಆರಂಭವಾಗಿದೆ. ಇತ್ತೀಚಿನ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.

ಅತ್ಯಾಚಾರ ಆರೋಪಿ ಎಸ್ಪಿ ನಾಯಕ ಖಾನ್‌ ಬೇಕರಿ ಧ್ವಂಸ

ಅಯೋಧ್ಯೆ: ಇಲ್ಲಿನ 12 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ಸಮಾಜವಾದಿ ಪಕ್ಷದ ನಾಯಕ ಮೊಯ್ದ್‌ ಖಾನ್‌ ಒಡೆತನದ ಅಕ್ರಮ ನಿರ್ಮಾಣದ ಬೇಕರಿಯನ್ನು ಶನಿವಾರ ಧ್ವಂಸಗೊಳಿಸಲಾಗಿದೆ.ಇದನ್ನು ಅಕ್ರಮವಾಗಿ ಕೊಳದ ಮೇಲೆ ನಿರ್ಮಿಸಿಲಾಗಿತ್ತು. ಆದ್ದರಿಂದ ಅದನ್ನು ಧ್ವಂಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತ್ರಸ್ತೆಯ ತಾಯಿಯನ್ನು ಭೇಟಿಯಾಗಿ ನ್ಯಾಯದ ಭರವಸೆ ನೀಡಿದ 1 ದಿನದ ನಂತರ ಬಿಗಿ ಪೊಲೀಸ್‌ ಬಂದೋಸ್ತ್‌ ನಡುವೆ ಬೇಕರಿಯನ್ನು ಕೆಡವಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

ಎಸ್ಸಿಎಸ್ಟಿ ಮೀಸಲು, ಕೆನೆಪದರ: ಇಬ್ಬರು ಕೇಂದ್ರ ಸಚಿವರ ವಿರೋಧ

ಮುಂಬೈ/ಪಟನಾ:ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಒಳಮೀಸಲು ಕಲ್ಪಿಸುವ ಅಧಿಕಾರ ರಾಜ್ಯಗಳಿಗೆ ಇದೆ ಮತ್ತು ಮೀಸಲು ಸೌಲಭ್ಯವನ್ನು ಕೆನೆಪದರದವರು ಪಡೆಯದಂತೆ ತಡೆಯಬೇಕು ಎಂಬ ಇತ್ತೀಚಿನ ಸುಪ್ರೀಂಕೋರ್ಟ್‌ ತೀರ್ಪಿಗೆ ಕೇಂದ್ರದ ಇಬ್ಬರು ಸಚಿವರಾದ ರಾಮ್‌ದಾಸ್‌ ಅಠಾವಳೆ ಮತ್ತು ಚಿರಾಗ್ ಪಾಸ್ವಾನ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಎಸ್‌ಸಿ, ಎಸ್ಟಿ ಮೀಸಲಿಗೆ ಕೆನೆಪದರ (ಆರ್ಥಿಕ ಮಾನದಂಡ) ಜಾರಿಯನ್ನು ತಾವು ತೀವ್ರವಾಗಿ ವಿರೋಧಿಸುವುದಾಗಿ ಆರ್‌ಪಿಐ ಅಧ್ಯಕ್ಷ ರಾಮ್‌ದಾಸ್‌ ಅಠಾವಳೆ ಹೇಳಿದ್ದಾರೆ. ಎಸ್‌ಸಿ, ಎಸ್ಟಿ ಮೀಸಲು ನೀಡಿದ್ದೇ ಜಾತಿಯ ಆಧಾರದಲ್ಲಿ. ಹೀಗಿರುವಾಗ ಅದರಲ್ಲಿ ಮತ್ತೆ ಕೆನೆಪದರ ನೀತ ಜಾರಿಗೆ ತರಬಾರದು.

 ಇದನ್ನು ತಮ್ಮ ಪಕ್ಷ ಬಲವಾಗಿ ವಿರೋಧಿಸಲಿದೆ ಎಂದು ಹೇಳಿದ್ದಾರೆ.ಆದರೆ ಎಸ್‌ಸಿ, ಎಸ್ಟಿಯಲ್ಲಿ ಒಳಮೀಸಲು ನೀಡುವ ರಾಜ್ಯಗಳ ಅಧಿಕಾರದ ವಿಷಯವನ್ನು ಅಠಾವಳೆ ಸ್ವಾಗತಿಸಿದ್ದಾರೆ. ಇದು ಅತ್ಯಂತ ಹಿಂದುಳಿದ ಸಮುದಾಯಕ್ಕೆ ನ್ಯಾಯ ಒದಗಿಸಲು ನೆರವಾಗಲಿದೆ. ಇದೇ ರೀತಿಯ ಒಳಮೀಸಲು ಒಬಿಸಿ ಮತ್ತು ಸಾಮಾನ್ಯ ವರ್ಗದಲ್ಲೂ ಜಾರಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ ಲೋಕಜನಶಕ್ತಿ ಪಕ್ಷದ ನಾಯಕ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌, ಎಸ್‌ಸಿ, ಎಸ್ಟಿಯಲ್ಲಿ ಒಳಮೀಸಲನ್ನು ತಾವು ವಿರೋಧಿಸುವುದಾಗಿ ಹೇಳಿದ್ದಾರೆ. ಇಂಥ ಒಳಮೀಸಲಿನಿಂದ ಮೀಸಲಿನ ಉದ್ದೇಶವೇ ಅಪೂರ್ಣವಾಗಲಿದೆ. ಸಾಮಾಜಿಕವಾಗಿ ದಮನಿತರಾದವರನ್ನು ಮೇಲಕ್ಕೆ ಎತ್ತುವ ಉದ್ದೇಶ ಫಲಿಸದೇ ಹೋಗಲಿದೆ ಎಂದಿದ್ದಾರೆ. ಜೊತೆಗೆ ಸುಪ್ರೀಂಕೋರ್ಟ್‌ನ ತೀರ್ಪಿನ ವಿರುದ್ಧ ತಮ್ಮ ಪಕ್ಷ ಮೇಲ್ಮನವಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ
ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ