ಇಂದು ರೈತರಿಂದ ‘ಗ್ರಾಮೀಣ ಭಾರತ ಬಂದ್‌’

KannadaprabhaNewsNetwork | Updated : Feb 16 2024, 09:13 AM IST

ಸಾರಾಂಶ

ಮುಂಜಾನೆ 6ರಿಂದ ಸಂಜೆ 4 ಗಂಟೆ ತನಕ ಬಂದ್‌ ನಡೆಯಲಿದ್ದು, ಹಲವೆಡೆ ಹೆದ್ದಾರಿ ಮತ್ತು ರೈಲು ತಡೆ ನಡೆಯಲಿದೆ ಎಂದು ರೈತಸಂಘಗಳು ಎಚ್ಚರಿಸಿದೆ.

ನವದೆಹಲಿ: ಬೆಳೆಗಳಿಗೆ ಬೆಂಬಲ ಬೆಲೆಗೆ ಕಾನೂನು ರೂಪ ನೀಡುವ ಬೇಡಿಕೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ), ಶುಕ್ರವಾರ ‘ಗ್ರಾಮೀಣ ಭಾರತ ಬಂದ್‌’ಗೆ ಕರೆ ನೀಡಿದೆ. 

ರೈತರ ದಿಲ್ಲಿ ಚಲೋ ನಡುವೆಯೇ, ಈ ಬಂದ್‌ಗೆ ಕರೆ ನೀಡಲಾಗಿದೆ. ಶುಕ್ರವಾರ ಮುಂಜಾನೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಂದ್‌ ಆಚರಿಲಾಗುತ್ತದೆ. 

ಈ ವೇಳೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರವರೆಗೆ ದೇಶದ ಪ್ರಮುಖ ರಸ್ತೆಗಳಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. 

ಇನ್ನು ಪಂಜಾಬ್‌ನಲ್ಲಿ ಪ್ರತಿಭಟನೆಯ ಸಮಯದಲ್ಲಿ ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ನಾಲ್ಕು ಗಂಟೆಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಎಸ್‌ಕೆಎಮ್‌ ಮುಖಂಡ ಡಾ. ದರ್ಶನ್‌ ಪಾಲ್‌ ‘ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡುವ ಕುರಿತು ಕಳೆದ ಡಿಸೆಂಬರ್‌ನಲ್ಲಿ ಯೋಜಿಸಲಾಗಿತ್ತು. 

ಬಂದ್‌ ವೇಳೆ ಗ್ರಾಮಗಳ ಜನರು ತಮ್ಮೆಲ್ಲ ಕೃಷಿ ಚಟುವಟಿಕೆಗಳು ಹಾಗೂ ನರೇಗಾ ಗ್ರಾಮೀಣ ಕೆಲಸಗಳನ್ನು ಮಾಡುವುದಿಲ್ಲ. 

ಆದರೆ ಅಂಬುಲೆನ್ಸ್‌, ಸಾವು, ಮದುವೆ, ಮೆಡಿಕಲ್‌ ಶಾಪ್‌ಗಳು, ಸುದ್ದಿ ಪತ್ರಿಕೆ ವಿತರಣೆ, ಪರೀಕ್ಷೆ, ಪ್ರಯಾಣಿಕರು ಹಾಗೂ ಏರ್‌ಪೋರ್ಟ್‌ ಸೇರಿದಂತೆ ಇತರ ತುರ್ತು ಅವಶ್ಯಕಗಳಿಗೆ ಯಾವುದೇ ಅಡ್ಡಿ ಮಾಡುವುದಿಲ್ಲ’ ಎಂದಿದ್ದಾರೆ.

ಅಲ್ಲದೇ ‘ಬಂದ್‌ ದಿನದಂದು ತರಕಾರಿಗಳು ಮತ್ತು ಇತರ ಬೆಳೆಗಳ ಮಾರಾಟ, ಗ್ರಾಮೀಣ ಅಂಗಡಿಗಳು, ಧಾನ್ಯ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳು ಗ್ರಾಮೀಣ ಕೈಗಾರಿಕೆಗಳನ್ನು ಬಂದ್‌ ಮಾಡುವಂತೆ ಒತ್ತಾಯಿಸಲಾಗುತ್ತದೆ’ ಎಂದಿದ್ದಾರೆ.

Share this article