- ತೆರಿಗೆ ಅಧಿಕಾರ ಸಂಸತ್ತಿನದೇ ಹೊರತು ಅಧ್ಯಕ್ಷರದ್ದಲ್ಲ । ಅಮೆರಿಕ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು । ಟ್ರಂಪ್‌ಗೆ ಮುಖಭಂಗ

- ಭಾರತ ಸೇರಿ 90 ದೇಶಗಳು ನಿರಾಳ । ಆದರೂ ಮೊಂಡು ಹಟ ನಿಲ್ಲಿಸದ ‘ದೊಡ್ಡಣ್ಣ’ನ ದೊಡ್ಡಣ್ಣ । ಈ ತೀರ್ಪಿನಿಂದ ಆರ್ಥಿಕತೆಗೆ ಹೊಡೆತ: ಅಧ್ಯಕ್ಷ ಅಪಸ್ವರ

----

ಭಾರತ ಸೇರಿ ಅನೇಕ ದೇಶಗಳಿಗೆ ರಿಲೀಫ್‌

- ತೆರಿಗೆ ಹೆಸರಲ್ಲಿ ಬೆದರಿಸುತ್ತಿದ್ದ ಅಧ್ಯಕ್ಷ ಟ್ರಂಪ್‌ಗೆ ಆಘಾತ


- ಮಾಸಿಕ 2 ಲಕ್ಷ ಕೋಟಿ ರು. ಅದಾಯಕ್ಕೆ ಬಿತ್ತು ಹೊಡೆತ

- ದೀರ್ಘಕಾಲದಲ್ಲಿ ₹270 ಲಕ್ಷ ಕೋಟಿ ಆದಾಯ ಖೋತಾ

- ತೀರ್ಪಿನಿಂದ ಭಾರತ ಸೇರಿ ಹಲವು ದೇಶಗಳು ನಿರಾಳ

==

ತೆರಿಗೆ ಹೇರಲು ಟ್ರಂಪ್‌ಗೆ ಈಗಲೂ ಅವಕಾಶ ಇದೆಸುಪ್ರೀಂಕೋರ್ಟ್‌ ಈಗ ರದ್ದುಪಡಿಸಿರುವುದು ತುರ್ತು ಸಂದರ್ಭದಲ್ಲಿ ಬಳಸಲು ಇರುವ ಕಾಯ್ದೆ ಬಳಸಿ ಹೇರಿದ ತೆರಿಗೆ ವಿರುದ್ಧ. ಆದರೆ ಇತರೆ ಕಾಯ್ದೆ ಬಳಸಿ, ತಮ್ಮ ಮೊದಲ ಅವಧಿಯಲ್ಲಿ ಹೇರಿದ್ದ ರೀತಿ ತೆರಿಗೆ ಮರುಜಾರಿಗೆ ಈಗಲೂ ಕಾನೂನಿನಲ್ಲಿ ಅವಕಾಶ ಇದೆ. ಅದನ್ನು ಟ್ರಂಪ್‌ ಬಳಸಿದರೆ ಅಚ್ಚರಿ ಏನಿಲ್ಲ ಎಂದು ಕಾನೂನು ತಜ್ಞರು ಹೇಳಿದ್ದರು.

=-

ಟ್ರಂಪ್‌ ತೆರಿಗೆ ಹೇರಿದ್ದು ಏಕೆ?

ಅಮೆರಿಕ ಕಂಪನಿಗಳು ಅಮೆರಿಕದಲ್ಲೇ ತಮ್ಮ ಕಾರ್ಖಾನೆ ಆರಂಭಿಸಲು ಉತ್ತೇಜನ, ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಳ, ಸ್ಥಳೀಯವಾಗಿ ಉದ್ಯೋಗ ಹೆಚ್ಚಳದ ಹೆಸರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 90ಕ್ಕೂ ಹೆಚ್ಚು ದೇಶಗಳ ಮೇಲೆ ಶೆ.10ರಿಂದ ಶೇ.50ರವರೆಗೂ ತೆರಿಗೆ ಹೇರಿದ್ದರು. ಜೊತೆಗೆ ಕೆಲವು ದೇಶಗಳ ಮೇಲೆ ಪ್ರತಿತೆರಿಗೆ ಕುಡಾ ಹೇರಿದ್ದರು.

==

12 ಲಕ್ಷ ಕೋಟಿ ರು. ಹಣ ವಾಪಸ್‌?

ಕಳೆದ ಆಗಸ್ಟ್‌ ನಂತರ ಅಮೆರಿಕ ಸರ್ಕಾರ 12 ಲಕ್ಷ ಕೋಟಿ ರು.ಹಣವನ್ನು ವಿವಿಧ ತೆರಿಗೆ, ಪ್ರತಿತೆರಿಗೆ ಮೂಲಕ ಸಂಗ್ರಹಿಸಿದೆ. ಈ ಹಣವನ್ನು ಈಗ ಮರಳಿಸಬೇಕೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್‌ ಯಾವುದೇ ಪ್ರಸ್ತಾಪ ಮಾಡಿಲ್ಲ. ಹಾಗೇನಾದರೂ ಆದರೆ ಅದು ಅಮೆರಿಕದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಲಿದೆ. ಜೊತೆಗೆ ಜಗತ್ತು ಮತ್ತೊಮ್ಮೆ ಅಸ್ಥಿರತೆಯತ್ತ ಮುಖ ಮಾಡಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ

==

ಕಾನೂನು ಹೇಳುವುದೇನು?

ಸಂವಿಧಾನವು ತೆರಿಗೆ ವಿಧಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಿದೆ. ಆದರೆ ಟ್ರಂಪ್ ಆಡಳಿತವು 1977ರ ಕಾನೂನು ಅಧ್ಯಕ್ಷರಿಗೆ ತುರ್ತು ಸಂದರ್ಭಗಳಲ್ಲಿ ಸ್ವತಂತ್ರವಾಗಿ ಆಮದನ್ನು ನಿಯಂತ್ರಿಸಲು ಅವಕಾಶ ನೀಡುತ್ತದೆ ಎಂದು ವಾದಿಸುತ್ತಾ ಬಂದಿದೆ. ಅಮೆರಿಕದ ಇತರ ಅಧ್ಯಕ್ಷರು ಈ ಕಾನೂನನ್ನು ಆಗಾಗ ಬಳಸಿದ್ದಾರೆ. ಆದರೆ ಆಮದು ತೆರಿಗೆಗಳಿಗಾಗಿ ಇದನ್ನು ಬಳಸಿದ ಮೊದಲ ಅಧ್ಯಕ್ಷ ಟ್ರಂಪ್.

====

ಭಾರತದ ಮೇಲೂ ಶೇ.50ರಷ್ಟು ತೆರಿಗೆ ದಾಳಿಭಾರತದ ಮೇಲೆ ಮೊದಲಿಗೆ ಶೇ.25ರಷ್ಟು ತೆರಿಗೆ ಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಬಳಿಕ ರಷ್ಯಾ ತೈಲ ಖರೀದಿ ತಡೆಯುವ ನಿಟ್ಟಿನಲ್ಲಿ ಹೆಚ್ಚುವರಿ ಶೇ.25ರಷ್ಟು ತೆರಿಗೆ ಹಾಕಿದ್ದರು. ಹೀಗಾಗಿ ಭಾರತದ ಮೇಲಿನ ತೆರಿಗೆ ಪ್ರಮಾಣ ಶೇ.50ಕ್ಕೆ ಏರಿತ್ತು. ಆದರೆ ಇತ್ತೀಚೆಗೆ ಭಾರತದ ಜೊತೆಗೆ ವ್ಯಾಪಾರ ಒಪ್ಪಂದದ ಭಾಗವಾಗಿ ಆ ತೆರಿಗೆಯನ್ನು ಶೇ.50ರಿಂದ ಶೇ.18ಕ್ಕೆ ಇಳಿಸುವ ಘೋಷಣೆ ಮಾಡಿದ್ದರು.

==

₹2 ಲಕ್ಷ ಕೋಟಿ

ಅಮೆರಿಕ ಮಾಸಿಕ ತೆರಿಗೆ ಮೂಲಕ ಹೆಚ್ಚುವರಿಯಾಗಿ ಸಂಗ್ರಹಿಸುತ್ತಿರುವ ತೆರಿಗೆ ಹಣ

₹ 12 ಲಕ್ಷ ಕೋಟಿ

ಕಳೆದ 6 ತಿಂಗಳಲ್ಲಿ ಅಮೆರಿಕ ಸರ್ಕಾರ ಹೆಚ್ಚುವರಿ ತೆರಿಗೆ ಮೂಲಕ ಸಂಗ್ರಹಿಸಿದ ಹಣ

₹270 ಲಕ್ಷ ಕೋಟಿ

ಒಂದು ದಶಕದ ಅವಧಿಯಲ್ಲಿ ಅಮೆರಿಕ ಸರ್ಕಾರ ಸಂಗ್ರಹಿಸುವ ನಿರೀಕ್ಷೆ ಇದ್ದ ಹಣದ ಮೊತ್ತ

==

ವಾಷಿಂಗ್ಟನ್‌: ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಸ್ಥಳೀಯ ಉತ್ಪನಗಳ ಬಳಕೆ ಹೆಚ್ಚಳ ಹೆಸರಿನಲ್ಲಿ ಜಗತ್ತಿನ 90ಕ್ಕೂ ಹೆಚ್ಚು ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇರಿದ್ದ ತೆರಿಗೆಯನ್ನು ಅಕ್ರಮ ಎಂದು ಘೋಷಿಸಿರುವ ಅಮೆರಿಕದ ಸುಪ್ರೀಂಕೋರ್ಟ್‌, ಇಂಥ ತೆರಿಗೆಗಳನ್ನು ರದ್ದುಪಡಿಸಿದೆ.

ಸುಪ್ರೀಂಕೋರ್ಟ್‌ನ ಈ ಐತಿಹಾಸಿಕ ಆದೇಶದಿಂದಾಗಿ, ತೆರಿಗೆ ದಾಳಿಗೆ ಸಿಲುಕಿ ನಲುಗಿದ್ದ ಮತ್ತು ಟ್ರಂಪ್ ತಾಳಕ್ಕೆ ತಕ್ಕಂತೆ ಕುಣಿಯಬೇಕಾಗಿದ್ದ ಅನಿವಾರ್ಯತೆಗೆ ಸಿಲುಕಿದ್ದ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳು ನಿರಾಳವಾಗಿದೆ. ಈ ನಡುವೆ ಸುಪ್ರೀಂಕೋರ್ಟ್‌ ಆದೇಶದ ದೇಶದ ಆರ್ಥಿಕತೆ ಪಾಲಿಗೆ ಕರಾಳ ಎಂದು ಅಧ್ಯಕ್ಷ ಟ್ರಂಪ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಕೋರ್ಟ್‌ ಹೇಳಿದ್ದೇನು?:

ಟ್ರಂಪ್‌ ತೆರಿಗೆ ಕುರಿತು 6-3 ಬಹುಮತದ ತೀರ್ಪು ನೀಡಿರುವ ಸುಪ್ರೀಂಕೋರ್ಟ್‌ನ ನ್ಯಾಯಪೀಠ, ‘ಸಂವಿಧಾನವು ತೆರಿಗೆ ವಿಧಿಸುವ ಅಧಿಕಾರವನ್ನು ಸ್ಪಷ್ಟವಾಗಿ ಸಂಸತ್ತಿಗೆ ನೀಡಿದೆ. ಕಾನೂನಿನ ಯಾವುದೇ ಭಾಗ ಕೂಡಾ ಕಾರ್ಯಾಂಗಕ್ಕೆ ಇಂಥ ಅಧಿಕಾರ ನೀಡಿಲ್ಲ. ಹೀಗಾಗಿ, ಅಧ್ಯಕ್ಷರು ತುರ್ತುಸಂದರ್ಭದ ಅಧಿಕಾರದ ಕಾನೂನು ಬಳಸಿ ಏಕಪಕ್ಷೀಯವಾಗಿ ತೆರಿಗೆ ಮತ್ತು ಪ್ರತಿತೆರಿಗೆ ಹೇರಿದ್ದು ಅಕ್ರಮ. ಅವರು ಇಂಥ ನಿರ್ಧಾರ ತೆಗೆದುಕೊಳ್ಳುವಂತಿಲ್ಲ’ ಎಂದು ಪ್ರತಿಪಾದಿಸಿತು.

ಸಂಗ್ರಹಿಸಿದ ಹಣದ ಕಥೆ ಏನು?:

ಇದುವರೆಗೆ ಕಂಪನಿಗಳು ಅಮೆರಿಕಕ್ಕೆ ಪಾವತಿಸಿದ ಸಾವಿರಾರು ಕೋಟಿ ತೆರಿಗೆಯನ್ನು ಸರ್ಕಾರ ಅವುಗಳಿಗೆ ಮರುಪಾವತಿ ಮಾಡಬೇಕೆ ಬೇಡವೆ ಎಂಬ ಬಗ್ಗೆ ಕೋರ್ಟ್‌ ಸ್ಪಷ್ಟ ನಿರ್ಣಯ ನೀಡಲಿಲ್ಲ. ‘ಸರ್ಕಾರವು ಆಮದುದಾರರಿಂದ ಸಂಗ್ರಹಿಸಿದ ಶತಕೋಟಿ ಡಾಲರ್‌ಗಳನ್ನು ಹಿಂದಿರುಗಿಸಬೇಕೇ? ಹಾಗಿದ್ದಲ್ಲಿ ಹೇಗೆ ಹಿಂದಿರುಗಿಸಬೇಕು ಎಂಬುದರ ಕುರಿತು ನ್ಯಾಯಾಲಯ ಇಂದು ಏನನ್ನೂ ಹೇಳುವುದಿಲ್ಲ. ಹಾಗೆ ಮಾಡಿದರೆ ಆ ಪ್ರಕ್ರಿಯೆಯು ಅವ್ಯವಸ್ಥೆಯಾಗುವ ಸಾಧ್ಯತೆಯಿದೆ’ ಎಂದು ನ್ಯಾ.ಬ್ರೆಟ್‌ ಕವನಾಗ್‌ ಅಭಿಪ್ರಾಯಪಟ್ಟರು.

ಟ್ರಂಪ್‌ ತರಿಗೆಗೆ ಕಡಿವಾಣವಿಲ್ಲ?:

‘ಕೋರ್ಟ್‌ನ ಈ ತೀರ್ಪು ಟ್ರಂಪ್‌ ಇತರ ಕಾನೂನುಗಳ ಮೂಲಕ ತೆರಿಗೆ ವಿಧಿಸುವುದನ್ನು ತಡೆಯುವುದಿಲ್ಲ. ಬೇರೆ ಕಾನೂನುಗಳು ಟ್ರಂಪ್ ಅವರ ಕ್ರಮಗಳ ವೇಗ ಮತ್ತು ತೀವ್ರತೆಯ ಮೇಲೆ ಹೆಚ್ಚಿನ ಮಿತಿಗಳನ್ನು ಹೊಂದಿದ್ದರೂ, ತೆರಿಗೆ ನೀತಿ ಜಾರಿಯಲ್ಲಿಡಲು ನಿರೀಕ್ಷಿಸುತ್ತವೆ’ ಎಂದು ಅಮೆರಿಕದ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ ಇತರ ಕಾನೂನುಗಳನ್ನು ಬಳಸಿಕೊಂಡು ಟ್ರಂಪ್‌ ತೆರಿಗೆ ದಾಳಿ ಮುಂದುವರಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ತೀರ್ಪಿಗೆ ಟ್ರಂಪ್‌ ವಿರೋಧ:

ತಮ್ಮ ತೆರಿಗೆ ನೀತಿಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೆ ಅಧ್ಯಕ್ಷ ಟ್ರಂಪ್ ಅಪಸ್ವರ ಎತ್ತಿದ್ದಾರೆ. ಇದನ್ನು ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖವಾದ ತೀರ್ಪು ಎಂದಿರುವ ಅವರು, ಈ ತೀರ್ಪಿನಿಂದಾಗಿ ದೇಶದ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಉಂಟಾಗಲಿದೆ ಎಂದಿದ್ದಾರೆ.

ತೆರಿಗೆ ದಾಳಿ ವಿರೋಧಿಸಿ ಮೊಕದ್ದಮೆ:

ಕಳೆದ ವರ್ಷ, ರಷ್ಯಾದಿಂದ ತೈಲ ಖರೀದಿಯನ್ನು ವಿರೋಧಿಸಿ ಟ್ರಂಪ್ ಭಾರತದ ಮೇಲೆ ಶೇ.25ರಷ್ಟು ತೆರಿಗೆ ಮತ್ತು ಶೇ.25ರಷ್ಟು ಹೆಚ್ಚುವರಿ ದಂಡವನ್ನು ವಿಧಿಸಿದ್ದರು. ಕೆನಡಾ, ಚೀನಾ ಸೇರಿದಂತೆ 90ಕ್ಕೂ ಹೆಚ್ಚು ದೇಶಗಳ ಮೇಲೆ ತೆರಿಗೆ ಮತ್ತು ಪ್ರತಿತೆರಿಗೆ ವಿಧಿಸಿದ್ದರು. ಅವರ ಈ ನಡೆಯನ್ನು ವಿರೋಧಿಸಿ ಹಲವರು ಮೊಕದ್ದಮೆಗಳನ್ನು ಹೂಡಿದ್ದರು. ತುರ್ತು ಅಧಿಕಾರಗಳ ಕಾನೂನಿನಲ್ಲಿ ತೆರಿಗೆ ವಿಧಿಸುವುದು ಒಳಪಡುವುದಿಲ್ಲ, ಟ್ರಂಪ್ ನಡೆ ಕಾನೂನುನಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು.

ಅಮೆರಿಕ ಪಡೆದ ಲಾಭವೆಷ್ಟು?:

ಅಮೆರಿಕ ಸಂಸತ್ತಿನ ಆರ್ಥಿಕ ಕಚೇರಿಯ ಪ್ರಕಾರ, ಟ್ರಂಪ್‌ ಹೇರಿದ ಹೊಸ ತೆರಿಗೆ ಅನ್ವಯ ಅಮೆರಿಕ ಸರ್ಕಾರಕ್ಕೆ ಮಾಸಿಕ 2 ಲಕ್ಷ ಕೋಟಿ ರು. ಹೆಚ್ಚುವರಿ ಆದಾಯ ಬರುತಿತ್ತು. ಈ ಲೆಕ್ಕಾಚಾರದಲ್ಲಿ ಅಮೆರಿಕ ಸರ್ಕಾರ, ತೆರಿಗೆ ಜಾರಿಗೊಳಿಸಿದ 2025ರ ಆ.1ರ ಬಳಿಕ ಅಂದಾಜು 12 ಲಕ್ಷ ಕೋಟಿ ರು.ಗಳನ್ನು ಸಂಗ್ರಹಿಸಿದೆ. ಜೊತೆಗೆ ಮುಂದಿನ ಒಂದು ದಶಕದ ಅವಧಿಯಲ್ಲಿ ಈ ತೆರಿಗೆ ಮೂಲಕ ಅಮೆರಿಕದ ಬೊಕ್ಕಸಕ್ಕೆ ಅಂದಾಜು 270 ಲಕ್ಷ ಕೋಟಿ ರು. ಆದಾಯ ಹರಿದುಬರಬೇಕಿತ್ತು. ಅದಕ್ಕೀಗ ಬ್ರೇಕ್‌ ಬಿದ್ದಿದೆ.

==