75 ಲಕ್ಷ ಬಿಹಾರ ಸ್ತ್ರೀಯರಿಗೆ ತಲಾ ₹10,000 ಗ್ಯಾರಂಟಿ!

KannadaprabhaNewsNetwork |  
Published : Sep 27, 2025, 02:00 AM ISTUpdated : Sep 27, 2025, 04:20 AM IST
ಮೋದಿ | Kannada Prabha

ಸಾರಾಂಶ

ಚುನಾವಣಾ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಮಹಿಳೆಯರನ್ನು ಓಲೈಸುವ ಗ್ಯಾರಂಟಿ ಯೋಜನೆಗಳ ಭರಾಟೆ ಮುಂದುವರೆದಿದೆ. ಕಾಂಗ್ರೆಸ್ ಮಿತ್ರಪಕ್ಷ ಆರ್‌ಜೆಡಿ ಇತ್ತೀಚೆಗೆ ಕರ್ನಾಟಕ ಮಾದರಿಯಲ್ಲಿ ಮಹಿಳೆಯರಿಗೆ 2500 ರು. ಮಾಸಾಶನದ ಭರವಸೆ ನೀಡಿತ್ತು.

 ಪಟನಾ: ಚುನಾವಣಾ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಮಹಿಳೆಯರನ್ನು ಓಲೈಸುವ ಗ್ಯಾರಂಟಿ ಯೋಜನೆಗಳ ಭರಾಟೆ ಮುಂದುವರೆದಿದೆ. ಕಾಂಗ್ರೆಸ್ ಮಿತ್ರಪಕ್ಷ ಆರ್‌ಜೆಡಿ ಇತ್ತೀಚೆಗೆ ಕರ್ನಾಟಕ ಮಾದರಿಯಲ್ಲಿ ಮಹಿಳೆಯರಿಗೆ 2500 ರು. ಮಾಸಾಶನದ ಭರವಸೆ ನೀಡಿತ್ತು. ಇದಕ್ಕೆ ಪ್ರತಿಯಾಗಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು-ಬಿಜೆಪಿ ಕೂಟದ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದು, ರಾಜ್ಯದ 75 ಲಕ್ಷ ಮಹಿಳೆಯರಿಗೆ ತಲಾ 10 ಸಾವಿರ ರು. ನೀಡುವ ಯೋಜನೆ ಆರಂಭಿಸಿದೆ.

ಈ ಹಿನ್ನೆಲೆಯಲ್ಲಿ ‘ಮುಖ್ಯಮಂತ್ರಿ ಮಹಿಳಾ ರೋಜಗಾರ್‌ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಯೋಜನೆಯ ಮೊತ್ತ 7500 ಕೋಟಿ ರು. ಆಗಿದೆ.

ಈ ಯೋಜನೆಯ ಪ್ರಕಾರ, ಆರಂಭಿಕ ಹಂತದಲ್ಲಿ 10 ಸಾವಿರ ರು. ಹಣವು ಪ್ರತಿ ಕುಟುಂಬದ ಒಬ್ಬ ಮಹಿಳೆಯ ಖಾತೆಗೆ ಜಮಾ ಆಗಿದೆ. ಆ ಬಳಿಕ ಉದ್ಯಮ ಅಥವಾ ವ್ಯಾಪಾರದಲ್ಲಿ ಯಶಸ್ಸು ಕಂಡರೆ 2 ಲಕ್ಷ ರು. ತನಕ ನೆರವು ಸಿಗಲಿದೆ. ಇದು ಮಹಿಳಾ ಮತದಾರರನ್ನು ಓಲೈಸುವ ಪ್ರಮುಖ ಯೋಜನೆ ಎಂದು ಬಿಂಬಿತವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಿಂದ ವರ್ಚುವಲ್‌ ಆಗಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ‘ಬಿಹಾರದಲ್ಲಿ ಮಹಿಳೆಯರು ಇನ್ನು ಮುಂದೆ ಹೊಸ ಕಿರಾಣಿ, ಪಾತ್ರೆ, ಸೌಂದರ್ಯವರ್ಧಕಗಳು ಮತ್ತು ಸ್ಟೇಷನರಿ ಅಂಗಡಿಗಳನ್ನು ತೆರೆಯಬಹುದು. ಇದರ ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಸಂಬಂಧಪಟ್ಟ ತರಬೇತಿಯನ್ನೂ ನೀಡಲಾಗುವುದು’ ಎಂದರು.

ಆರ್‌ಜೆಡಿಗೆ ಮತ ನೀಡಬೇಡಿ:

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ‘ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ ಮಹಿಳಾ ವಿರೋಧಿ ಆಗಿದ್ದು, ಆರ್‌ಜೆಡಿಗೆ ಮತ ನೀಡಬೇಡಿ. ನಿತೀಶ್‌ ಅಡಿಯಲ್ಲಿ ಬಿಹಾರದ ಜನತೆ ಸುರಕ್ಷಿತವಾಗಿದ್ದಾರೆ’ ಎಂದು ಮಹಿಳೆಯರಿಗೆ ಕರೆ ನೀಡಿದರು.

‘ಬಿಹಾರ ಮಹಿಳೆಯರಿಗೆ ಈಗ ಇಬ್ಬರು ಸಹೋದರರು. ನಿತೀಶ್‌ ಮತ್ತು ನಾನು. ಇಬ್ಬರೂ ತಮ್ಮ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದೇವೆ’ ಎಂದು ಹೇಳಿದರು.

ಏನಿದು ಯೋಜನೆ?

- ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಯರಿಗೆ ಕರ್ನಾಟಕದ ಗೃಹಲಕ್ಷ್ಮಿ ಮಾದರಿಯಲ್ಲಿ 2500 ರು. ನೀಡುವುದಾಗಿ ಆರ್‌ಜೆಡಿ ಘೋಷಣೆ

- ಈ ಯೋಜನೆಗೆ ಬಿಜೆಪಿ-ಜೆಡಿಯು ಮೈತ್ರಿಕೂಟ ಟಕ್ಕರ್‌. ಪ್ರತಿ ಕುಟುಂಬದ ತಲಾ ಒಬ್ಬ ಮಹಿಳೆಗೆ 10 ಸಾವಿರ ರು. ನೀಡುವ ಸ್ಕೀಂ

- ಬಿಹಾರದ 75 ಲಕ್ಷ ಮಹಿಳೆಯರಿಗೆ ಸಿಗಲಿದೆ ಹಣ. ಅದನ್ನು ಬಳಸಿ ಅವರು ಉದ್ದಿಮೆ ಆರಂಭಿಸಲು ಸರ್ಕಾರದಿಂದ ಪ್ರೋತ್ಸಾಹ

- 10 ಸಾವಿರ ರು. ಹಣ ನಿನ್ನೆ ವರ್ಗಾವಣೆ. ಉದ್ದಿಮೆಯಲ್ಲಿ ಯಶಸ್ವಿಯಾದರೆ 2 ಲಕ್ಷ ರು.ವರೆಗೆ ಮತ್ತೆ ನೆರವು ನೀಡುವುದಾಗಿ ಭರವಸೆ.

- ‘ಮುಖ್ಯಮಂತ್ರಿ ಮಹಿಳಾ ರೋಜಗಾರ್‌ ಯೋಜನೆ’ಗೆ ಮೋದಿ ಚಾಲನೆ. ಇಂತಹ ಯೋಜನೆ ದೇಶದ ಯಾವ ರಾಜ್ಯದಲ್ಲೂ ಇಲ್ಲ!

PREV
Read more Articles on

Recommended Stories

ತವರಲ್ಲಿ ವಿಶ್ವಕಪ್‌ ಗೆಲ್ಲಲುಉತ್ಸುಕರಾಗಿದ್ದೇವೆ: ಹರ್ಮನ್‌
ನಾವೇ ಯುದ್ಧ ಗೆದ್ದೆವು: ಷರೀಫ್‌